ತಮಿಳುನಾಡಿನ ಕೊಯಮತ್ತೂರು ಸ್ಫೋಟದ ಅಪರಾಧಿಯ ಅಂತ್ಯಸಂಸ್ಕಾರವನ್ನು ಸರ್ಕಾರ ವೈಭವೀಕರಿಸಿದೆ ಎಂದು ಆರೋಪಿಸಿ ಬಿಜೆಪಿ ‘ಬ್ಲ್ಯಾಕ್‌ಡೇ’ ಪ್ರತಿಭಟನೆ ನಡೆಸಿದೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇತ್ತೀಚೆಗೆ ಮೃತಪಟ್ಟ ಎಸ್‌ಎ ಬಾಷಾ ಎಂಬಾತ ನಿಷೇಧಿತ ಅಲ್-ಉಮ್ಮಾ ಸಂಸ್ಥಾಪಕನಾಗಿದ್ದು, 1998ರ ಕೊಯಮತ್ತೂರು ಬಾಂಬ್ ಸ್ಫೋಟ ಪ್ರಕರಣದ ಅಪರಾಧಿಯಾಗಿದ್ದನು. ಆತನ ಸಾವನ್ನು ವೈಭವೀಕರಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಕೊಯಮತ್ತೂರಿನಲ್ಲಿ ಬಿಜೆಪಿ, ಆರ್‌ಎಸ್‌ಎಸ್ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಕೊಯಮತ್ತೂರು ಬಾಂಬ್ ಸ್ಫೋಟದ ಅಪರಾಧಿಯನ್ನು ತಮಿಳುನಾಡು ಸರ್ಕಾರವು ಬೆಂಬಲಿಸುತ್ತಿದೆ ಎಂಬ ಆರೋಪಿಸಿ ಬ್ಯಾನರ್‌ಗಳನ್ನು ಪ್ರದರ್ಶಿಸಿದ್ದಾರೆ.
ಪ್ರತಿಭಟನೆಗೆ ಪೊಲೀಸರು ಅವಕಾಶ ನೀಡಿರಲಿಲ್ಲ. ಆದಾಗ್ಯೂ, ಬಿಜೆಪಿಗರು ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಅನುಮತಿಯಿಲ್ಲದ ರ್ಯಾಲಿಯಲ್ಲಿ ಭಾಗವಹಿಸಿದ್ದವರನ್ನು ಬಂಧಿಸಲಾಗಿದೆ.