ಮೇಲ್ಜಾತಿಗೆ ಸೇರಿದ ಸಹಪಾಠಿಗಳು ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿರುವುದಕ್ಕೆ ಬೇಸರಗೊಂಡ ದಲಿತ ಸಮುದಾಯದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ಕಿರನೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು 16 ವರ್ಷದ ವಿಷ್ಣು ಎಂದು ಗುರುತಿಸಲಾಗಿದೆ. ಸರ್ಕಾರಿ ಶಾಲೆಯಲ್ಲಿ ಈತ 11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಅದೇ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಮೇಲ್ಜಾತಿ ವಿದ್ಯಾರ್ಥಿನಿಯೊಬ್ಬಳ ಜೊತೆ ವಿಷ್ಣು ಮಾತನಾಡಿದ್ದಕ್ಕೆ ಮೇಲ್ಜಾತಿ ಸಮುದಾಯಕ್ಕೆ ಸೇರಿದ ಸಹಪಾಠಿಗಳು ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ್ದಾರೆ.
“ನಮ್ಮ ಮಗ ಶಾಲೆಯಿಂದ ಹಿಂತಿರುಗಿದ ನಂತರ ಜಾತಿ ನಿಂದನೆ ಹಾಗೂ ಹಲ್ಲೆಯಿಂದ ತುಂಬ ಬೇಸರಗೊಂಡಿದ್ದ. ಈ ಕಾರಣದಿಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎಂದು ವಿಷ್ಣು ಅವರ ತಾಯಿ ತಿಳಿಸಿದ್ದಾರೆ.
ಆರಂಭದಲ್ಲಿ, ಪೊಲೀಸರು ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿದ್ದರು. ಆದರೆ ಈಗ ಅದನ್ನು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಸೆಕ್ಷನ್‌ಗಳನ್ನು ಸೇರಿಸಲು ಬದಲಾಯಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ದಲಿತ ಕೌನ್ಸಿಲರ್ ಮೇಲೆ ಹಲ್ಲೆ – ಜಾತಿ ನಿಂದನೆ; ಪ್ರಕರಣ ದಾಖಲು
“ನಾವು ಶೀಘ್ರದಲ್ಲೇ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸುತ್ತೇವೆ. ಅಲ್ಲಿಯವರೆಗೆ ನಾವು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲು ಬಯಸುವುದಿಲ್ಲ. ಏಕೆಂದರೆ, ಅದು ವಿಚಾರಣೆ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಬಹುದು” ಎಂದು ಪೊಲೀಸರು ತಿಳಿಸಿದ್ದಾರೆ.
ಒಂದು ವಾರದ ಹಿಂದೆ ತಿರುನೆಲ್ವೇಲಿ ಜಿಲ್ಲೆಯಲ್ಲಿ ಇಬ್ಬರು ದಲಿತ ಸಮುದಾಯದ ಯುವಕರನ್ನು ಸವರ್ಣೀಯ ಸಮುದಾಯದ 6 ಮಂದಿ ಗುಂಪು ವಿವಸ್ತ್ರಗೊಳಿಸುವುದರ ಜೊತೆ ಮೂತ್ರವಿಸರ್ಜನೆ ಮಾಡಿ ಯುವಕರ ಬಳಿಯಿದ್ದ ಹಣ ಮತ್ತು ಮೊಬೈಲ್ ಫೋನುಗಳನ್ನು ದೋಚಿದ್ದರು.
ತಮಿಳುನಾಡಿನಲ್ಲಿ ದಲಿತರ ಮೇಲಿನ ಇತ್ತೀಚಿನ ದೌರ್ಜನ್ಯಗಳ ಸರಣಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಚೆನ್ನೈ ಮೂಲದ ದಲಿತ ಬೌದ್ಧಿಕ ಕಲೆಕ್ಟಿವ್, ಇದನ್ನು ಕೊನೆಗೊಳಿಸಲು ಮಾರ್ಗೋಪಾಯಗಳನ್ನು ಸಮಾಲೋಚಿಸಲು ಸರ್ವಪಕ್ಷ ಸಭೆಗೆ ಕರೆ ನೀಡುವಂತೆ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರನ್ನು ಒತ್ತಾಯಿಸಿದೆ.