ದೇವಸ್ಥಾನದಿಂದ ವಿಗ್ರಹಗಳನ್ನು ಕದ್ದಿದ್ದಾನೆಂದು ಶಂಕಿಸಿ ದಲಿತ ವ್ಯಕ್ತಿಯನ್ನು ಪ್ರಬಲ ಜಾತಿಗರು ಹತ್ಯೆಗೈದಿದ್ದ ಪ್ರಕರಣದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಘಟನೆ ನಡೆದಿತ್ತು. ದಲಿತ ಸಮುದಾಯದ ಚಿನ್ನ ಕಣಕ್ಕನಪಟ್ಟಿಯ ಸೇಕರ್ (70) ಅವರನ್ನು ಗುಂಪೊಂದು ಹೊಡೆದು ಕೊಂದಿತ್ತು. ಪ್ರಕರಣದಲ್ಲಿ ಪ್ರಬಲ ಜಾತಿಯ ಎಸ್ ಗೋಕುಲ್ (23), ವಿ ಪೆರುಮಾಳ್ (24) ಮತ್ತು ಟಿ ಸುರೇಶ್ (23) ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತಂಗರೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲವೆಂದು ಮೃತ ವ್ಯಕ್ತಿಯ ಮಗಳು ಮುರುಗವಲ್ಲಿ ಆರೋಪಿಸಿದ್ದಾರೆ.
“ನನ್ನ ತಂದೆಯ ಮೇಲೆ 15 ಮಂದಿ ಪ್ರಬಲ ಜಾತಿಯ ಯುವಕರು ಹಲ್ಲೆ ನಡೆಸಿದ್ದಾರೆ. ತನ್ನ ತಾಯಿ ನೀಡಿದ್ದ ಮೌಖಿಕ ದೂರನ್ನು ಅವರು ಪರಿಗಣಿಸಿಲ್ಲ. ಆರೋಪಿಗಳು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ” ಎಂದು ಮುರುಗವಲ್ಲಿ ಹೇಳಿದ್ದಾರೆ.