ಸಹಪಾಠಿಗಳ ಜಾತಿ ನಿಂದನೆ ಮತ್ತು ದೌರ್ಜನ್ಯ ತಾಳಲಾರದೆ 11ನೇ ತರಗತಿಯ ದಲಿತ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ತಮಿಳುನಾಡಿನ ಕೊಯಮತ್ತೂರು ಸಮೀಪದ ಪೀಲಮೇಡುವಿನಲ್ಲಿ ನಡೆದಿದೆ. ಹಸುವಿನ ಮಾಂಸ (ಬೀಫ್) ಸೇವಿಸುವ ಆಹಾರ ಪದ್ಧತಿಯನ್ನು ನೆಪವಾಗಿಟ್ಟುಕೊಂಡು ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದ ಕಾರಣಕ್ಕೆ ನೊಂದ ಬಾಲಕ ತನ್ನ ನಿವಾಸದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ.
ಅಕ್ಟೋಬರ್ 21 ರಂದು ಈ ದುರ್ಘಟನೆ ಸಂಬಂವಿಸಿದೆ. ದಲಿತ ಬಾಲಕ ಸಾವಿನ ಪ್ರಕರಣದಲ್ಲಿ ಪೊಲೀಸರು ಮೃತ ಬಾಲಕನ ಇಬ್ಬರು ಸಹಪಾಠಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಬಾಲ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಲಾಗಿದ್ದು, ಸದ್ಯ ಅವರನ್ನು ಬಾಲಾಪರಾಧಿ ಕೇಂದ್ರಕ್ಕೆ ರವಾನಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿ ಕೂಡ ಕ್ರಮ ಕೈಗೊಂಡಿದ್ದು, ಶಾಲೆಯ ಮುಖ್ಯೋಪಾಧ್ಯಾಯ ಎಸ್. ಅರುಣ್‌ಕುಮಾರ್ ಮತ್ತು ತರಗತಿ ಶಿಕ್ಷಕ ಪಿ. ವಿಜಯ್‌ಕುಮಾರ್ ಅವರನ್ನು ಅಮಾನತುಗೊಳಿಸಿದೆ. ಅಷ್ಟೇ ಅಲ್ಲದೆ, ಪೊಲೀಸರು ಅವರಿಬ್ಬರನ್ನೂ ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸುತ್ತಿದ್ದಾರೆ.
ಮೃತ ಬಾಲಕನ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ, “ಕಳೆದ ಎರಡು ತಿಂಗಳುಗಳಿಂದ ತಮ್ಮ ಮಗನ ಮೇಲೆ ಜಾತಿ ಆಧಾರಿತ ಕಿರುಕುಳ ಮತ್ತು ಹೀಯಾಳಿಸುವಿಕೆ ಹೆಚ್ಚಾಗಿತ್ತು. ಆತ ಬಾಲಕರೊಡನೆ ಊಟ ಮಾಡುವಾಗ ಆತನ ಆಹಾರ ಪದ್ಧತಿಯನ್ನು ಗುರುತಿಸಿ ‘ಬೀಫ್ ಸೇವಿಸುತ್ತೀಯಾ’ ಎಂದು ಜಾತಿ ಸೂಚಕವಾಗಿ ನಿಂದಿಸುವುದು ಮತ್ತು ನಿರಂತರವಾಗಿ ಗೇಲಿ ಮಾಡುವುದು ನಡೆಯುತ್ತಿತ್ತು. ಈ ಮಾನಸಿಕ ಕಿರುಕುಳದ ಬಗ್ಗೆ ತಮ್ಮ ಮಗ ಹಲವು ಬಾರಿ ತನ್ನ ತರಗತಿ ಶಿಕ್ಷಕ ಮತ್ತು ಮುಖ್ಯೋಪಾಧ್ಯಾಯರ ಗಮನಕ್ಕೆ ತಂದರೂ, ದೂರು ನೀಡಿದ್ದರೂ, ಶಾಲಾ ಆಡಳಿತವು ಯಾವುದೇ ರಕ್ಷಣಾತ್ಮಕ ಅಥವಾ ಶಿಸ್ತಿನ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿತ್ತು” ಎಂದು ಆರೋಪಿಸಿದ್ದಾರೆ.
ಶಾಲಾ ಸಿಬ್ಬಂದಿಯ ಈ ನಿರ್ಲಕ್ಷ್ಯ ಮತ್ತು ಶಿಸ್ತು ಕ್ರಮದ ಕುರಿತು ಜಿಲ್ಲಾ ಶಿಕ್ಷಣ ಇಲಾಖೆಗೆ ಅಧಿಕೃತ ವರದಿಯನ್ನು ಸಲ್ಲಿಸಲಾಗಿದೆ. ದಲಿತ ಬಾಲಕನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಸಾರ್ವಜನಿಕರು ಮತ್ತು ದಲಿತ ಸಂಘಟನೆಗಳು ಒತ್ತಾಯಿಸಿವೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.




