ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಇಬ್ಬರು ದಲಿತ ಸಮುದಾಯದ ರೈತರ ಮೇಲೆ ದಾಖಲಿಸಿದ್ದ ಪ್ರಕರಣವನ್ನು ಜಾರಿ ನಿರ್ದೇಶನಾಲಯ(ಇ.ಡಿ) ಹಿಂಪಡೆದಿದೆ.
ರೈತರ ಜಾತಿ ನಮೂದಾಗಿದ್ದ ಕಾರಣಕ್ಕಾಗಿ ಸಮನ್ಸ್ ಜಾರಿಗೊಳಿಸಿದ್ದ ಜಾರಿ ನಿರ್ದೇಶನಾಲಯದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಜಾರಿ ನಿರ್ದೇಶನಾಲಯದ ವಿರುದ್ಧ ಎಸ್ಸಿಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂದು ತಮಿಳುನಾಡಿನ ವಿಸಿಕೆ ಪಕ್ಷದ ಸಂಸದ ತಿರುಮವಲ್ಲವನ್ ಆಗ್ರಹಿಸಿದ್ದರು.
ತಮಿಳುನಾಡಿನ ಸೇಲಂ ಜಿಲ್ಲೆಯ ಅಟ್ಟೂರು ಗ್ರಾಮದಲ್ಲಿ ವಾಸವಾಗಿರುವ ದಲಿತ ಸಮುದಾಯದ ರೈತರಾದ ಕನ್ನೈಯನ್ ಹಾಗೂ ಅವರ ಸಹೋದರ ಕೃಷ್ಣನ್ ವಿರುದ್ಧ ‘ಹಿಂದೂ ಪಲ್ಲಾರ್’ಗಳು ಎಂದು ನಮೂದಿಸಿ ಜಾರಿ ನಿರ್ದೇಶನಾಲಯವು ಸಮನ್ಸ್ ಜಾರಿಗೊಳಿಸಿತ್ತು.
ರೈತರ ವಕೀಲರ ಪ್ರಕಾರ ಸಮನ್ಸ್ ನಲ್ಲಿ ಏನಿದೆ ಎಂಬುದು ರೈತರಿಬ್ಬರಿಗೆ ಗೊತ್ತಿರಲಿಲ್ಲ. ಸೇಲಂ ಜಿಲ್ಲೆಯ ಬಿಜೆಪಿಯ ಕಾರ್ಯದರ್ಶಿ ಗುಣಶೇಖರ್ ಎಂಬುವವರ ವಿರುದ್ಧ ತಮ್ಮ ಭೂಕಬಳಿಕೆ ವಿವಾದಕ್ಕೆ ಸಂಬಂಧಿಸಿದಂತೆ ಈ ರೈತರು ಹೋರಾಟ ಮಾಡುವ ಸಂದರ್ಭದಲ್ಲಿ ಸಮನ್ಸ್ ನೀಡಲಾಗಿತ್ತು.
ಈ ಸುದ್ದಿ ಓದಿದ್ದೀರಾ? ತಮಿಳುನಾಡಿನ ಬಿಜೆಪಿ ನಾಯಕನ ವಿರುದ್ಧ ಹೋರಾಡುತ್ತಿರುವ ದಲಿತ ರೈತರಿಗೆ ಇ.ಡಿ. ಸಮನ್ಸ್
ಆದಾಗ್ಯೂ, ಜಾರಿ ನಿರ್ದೇಶನಾಲಯವು ಇಬ್ಬರು ರೈತರಿಗೆ ತಮಿಳುನಾಡು ಅರಣ್ಯ ಇಲಾಖೆಯು 2021ರಲ್ಲಿ ಪತ್ರ ಬರೆದಿದ್ದ ಆಧಾರದ ಮೇಲೆ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿತ್ತು.
ಕನ್ನೈಯನ್ ಮತ್ತು ಕೃಷ್ಣನ್ ಅವರಿಗೆ ತಮಿಳುನಾಡು ಅರಣ್ಯ ಇಲಾಖೆಯು 2021ರಲ್ಲಿ ಪತ್ರ ಬರೆದಿದ್ದ ಆಧಾರದ ಮೇಲೆ ಮಾರ್ಚ್ 2022ರ ಅಕ್ರಮ ಹಣ ವರ್ಗಾವಣೆ ಕಾಯ್ದೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ. ಇದರೊಂದಿಗೆ ಕಾಡು ಪ್ರಾಣಿಗಳನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ವನ್ಯಜೀವಿ ರಕ್ಷಣಾ ಕಾಯ್ದೆಯಡಿಯಲ್ಲಿಯೂ ಪ್ರಕರಣ ದಾಖಲಿಸಲಾಗಿತ್ತು.
ಆರ್ಥಿಕ ಕ್ಷಿಪ್ರ ಕಾರ್ಯ ಪಡೆ ಹೊರಡಿಸಿದ ನ್ಯಾಯಾಲಯದ ಆದೇಶಗಳ ಅನುಗುಣವಾಗಿ ತನಿಖಾ ಸಂಸ್ಥೆಯು ಹಲವು ವನ್ಯಜೀವಿ ಪ್ರಕರಣಗಳನ್ನು ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದಾಗ್ಯೂ, ತನಿಖಾ ಸಂಸ್ಥೆಯು ವನ್ಯಜೀವಿ ಪ್ರಕರಣದಲ್ಲಿ ನ್ಯಾಯಾಲಯವು ಖುಲಾಸೆಗೊಳಿಸಿದ ನಂತರ ಇಬ್ಬರು ರೈತರ ಮೇಲಿನ ಪ್ರಕರಣವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ.
ಇ.ಡಿ. ಕಚೇರಿಗೆ ಹೋಗುವ ಖರ್ಚಿಗಾಗಿ ಇವರು ತಮ್ಮ ಭೂಮಿಯನ್ನು ಒತ್ತೆ ಇಟ್ಟು ಸಾಲ ಮಾಡಬೇಕಾಗಿತ್ತು. ಚೆನ್ನೈನಲ್ಲಿರುವ ಇ.ಡಿ. ಕಚೇರಿಯಲ್ಲಿ ಐಒ ಎದುರು ಹಾಜರಾಗುವಂತೆ ಸಮನ್ಸ್ ಬಂದಾಗ ಇವರ ಬ್ಯಾಂಕ್ ಖಾತೆಯಲ್ಲಿ ಇದ್ದದ್ದು ಕೇವಲ 450 ರೂಪಾಯಿ ಮಾತ್ರ. ವಾಹನ ಹಾಗೂ ಇತರೆ ವೆಚ್ಚಕ್ಕಾಗಿ 50 ಸಾವಿರ ರೂಪಾಯಿ ಸಾಲ ಮಾಡಿದ್ದು, ಅದನ್ನು ತೀರಿಸಲು ಪರದಾಡಬೇಕಾಗಿದೆ.