ಕಳೆದ ವರ್ಷ ದೇಶದಲ್ಲಿ ಅಪ್ರಾಪ್ತರು ವಾಹನ ಚಲಾಯಿಸಿದಾಗ ನಡೆದ ರಸ್ತೆ ಅಪಘಾತ ಪ್ರಕರಣಗಳಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಬುಧವಾರ ರಾಜ್ಯಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. 2023-24ರಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸುತ್ತಿದ್ದಾಗ ಒಟ್ಟಾಗಿ 11,890 ರಸ್ತೆ ಅಪಘಾತಗಳು ವರದಿಯಾಗಿವೆ ಎಂದು ತಿಳಿಸಿದೆ.
ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಮಿಳುನಾಡಿನಲ್ಲಿ 2,063 ರಸ್ತೆ ಅಪಘಾತಗಳು ಸಂಭವಿಸಿದರೆ, ಎರಡನೇ ಸ್ಥಾನದಲ್ಲಿರುವ ಮಧ್ಯಪ್ರದೇಶದಲ್ಲಿ 1,138 ರಸ್ತೆ ಅಪಘಾತಗಳು ನಡೆದಿದೆ. ಮಹಾರಾಷ್ಟ್ರವು ಅಪ್ರಾಪ್ತ ವಯಸ್ಕ ವಾಹನ ಚಾಲಕರಿಂದ ಆದ ರಸ್ತೆ ಅಪಘಾತದ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಕಳೆದ ವರ್ಷ 1,067 ಅಪಘಾತಗಳು ವರದಿಯಾಗಿವೆ.
ಇದನ್ನು ಓದಿದ್ದೀರಾ? ಚಿಂತಾಮಣಿ | ರಸ್ತೆ ಅಪಘಾತ; ಯುವಕ ಸಾವು
ಕರ್ನಾಟಕಕ್ಕೆ ಯಾವ ಸ್ಥಾನ?
ನಾಲ್ಕನೇ ಸ್ಥಾನದಲ್ಲಿ ಉತ್ತರ ಪ್ರದೇಶ (935), ಐದನೇ ಸ್ಥಾನದಲ್ಲಿ ಆಂಧ್ರಪ್ರದೇಶ (766) ಮತ್ತು ಆರನೇ ಸ್ಥಾನದಲ್ಲಿ ಕರ್ನಾಟಕ (751) ರಾಜ್ಯವಿದೆ. ನಂತರ ಗುಜರಾತ್ (727), ಕೇರಳ (645), ಛತ್ತೀಸ್‌ಗಢ (504), ರಾಜಸ್ಥಾನ (450) ಇದೆ.
ಇನ್ನು ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸುವಾಗ ನಿಯಮಗಳನ್ನು ಉಲ್ಲಂಘಿಸಿದ್ದು, ಈ ವೇಳೆ ದಂಡ ವಿಧಿಸಿದ ಬಗ್ಗೆ ಕೇಳಿದ ಪ್ರಶ್ನೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಉತ್ತರಿಸುವ ವೇಳೆ ಈ ಡೇಟಾವನ್ನು ಬಹಿರಂಗಪಡಿಸಿದ್ದಾರೆ.
ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸುವುದರ ವಿರುದ್ಧ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಕಾಂಗ್ರೆಸ್ ಸಂಸದ ನೀರಜ್ ಡಾಂಗಿ ಪ್ರಶ್ನಿಸಿದ್ದು, ಇದಕ್ಕೆ ಉತ್ತರಿಸಿದ ಗಡ್ಕರಿ, “ಚಲನ್‌ಗಳ ಮೇಲ್ವಿಚಾರಣೆ ಮತ್ತು ಸರಿಯಾಗಿ ಚಲನ್ ಜಾರಿಗೊಳಿಸುವುದನ್ನು ನೋಡಿಕೊಳ್ಳಲು ಇ-ಚಲನ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ” ಎಂದು ಸದನಕ್ಕೆ ತಿಳಿಸಿದರು.
2023-24ರಲ್ಲಿ ಬಿಹಾರದಲ್ಲಿ ಅಪ್ರಾಪ್ತ ವಯಸ್ಕರಿಗೆ ವಾಹನ ಚಲಾಯಿಸಲು ಅವಕಾಶ ನೀಡಿದ್ದಕ್ಕಾಗಿ ಸುಮಾರು 1,316 ಚಲನ್‌ಗಳನ್ನು ನೀಡಲಾಗಿದೆ. ಈ ಮೂಲಕ ದಂಡವಾಗಿ ಅಧಿಕಾರಿಗಳು 44.27 ಲಕ್ಷ ರೂ. ಆದಾಯವನ್ನು ಸಂಗ್ರಹಿಸಿದ್ದಾರೆ ಎಂದು ಸಚಿವರು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಪ್ರಭಾವಿ ಸಚಿವರ ಹನಿಟ್ರ್ಯಾಪ್‌ಗೆ ಯತ್ನ ವಿಫಲ; ರಾಜ್ಯದಲ್ಲಿ ಸದ್ದು ಮಾಡಿದ್ದ ಹನಿಟ್ರ್ಯಾಪ್ ಪ್ರಕರಣಗಳಿವು
ಅದೇ ರೀತಿ ಛತ್ತೀಸ್‌ಗಢದಲ್ಲಿ ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸಲು ಅವಕಾಶ ನೀಡಿದ ಕಾರಣಕ್ಕಾಗಿ 71 ವಾಹನ ಮಾಲೀಕರಿಗೆ ಚಲನ್ ನೀಡಲಾಗಿದೆ. ಈ ಮೂಲಕ 1.3 ಲಕ್ಷ ರೂ. ಆದಾಯವನ್ನು ಸಂಗ್ರಹಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ (ಜೆ & ಕೆ) ಇದೇ ರೀತಿಯ ಅಪರಾಧ ಮಾಡಿದ 65 ಜನರಿಗೆ ದಂಡ ವಿಧಿಸಲಾಗಿದೆ. ದೆಹಲಿ ಮತ್ತು ಉತ್ತರಾಖಂಡದಲ್ಲಿ ಪ್ರತ್ಯೇಕವಾಗಿ 22 ಜನರಿಗೆ ದಂಡ ವಿಧಿಸಲಾಗಿದೆ ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ.
ಚಲನ್‌ಗಳ ಮೂಲಕ ಜಮ್ಮು ಮತ್ತು ಕಾಶ್ಮೀರ ಆಡಳಿತವು 1.36 ಲಕ್ಷ ರೂಪಾಯಿ, ದೆಹಲಿ ಮತ್ತು ಉತ್ತರಾಖಂಡ ಕ್ರಮವಾಗಿ 44,000 ಮತ್ತು 1.05 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ಸಚಿವರು ನೀಡಿದ ಉತ್ತರದಲ್ಲಿ ಉಲ್ಲೇಖಿಸಲಾಗಿದೆ.
ತಮ್ಮ ಮಕ್ಕಳು ಪ್ರೌಢ ಶಿಕ್ಷಣ ಪಡೆಯುತ್ತಿರುವಾಗಲೇ ಸ್ಕೂಟರ್, ಬೈಕ್, ಕಾರು ಚಲಾಯಿಸುವುದನ್ನು ಕಲಿಸುವುದು ಇತ್ತೀಚೆಗೆ ಕಡ್ಡಾಯವೆಂಬಂತಾಗಿದೆ. ಮಕ್ಕಳು ಸಣ್ಣ ವಯಸ್ಸಿನಲ್ಲೇ ವಾಹನ ಚಲಾಯಿಸುವುದು ಕಲಿಯಬೇಕು ಎಂಬ ಮನಸ್ಥಿತಿ ಇಂದಿನ ಪೋಷಕರಿಗಿದೆ. ಹಾಗೆಯೇ ಮಕ್ಕಳು ಆನ್‌ಲೈನ್ ರೇಸಿಂಗ್ ಗೇಮ್‌ಗಳನ್ನು ಆಡಿ, ತಮ್ಮ ನಿಜ ಜೀವನದಲ್ಲಿಯೂ ವಾಹನ ಚಲಾಯಿಸುವುದನ್ನು ಆನ್‌ಲೈನ್ ಆಟದಂತೆ ನೋಡುತ್ತಾರೆ. ವಯಸ್ಕರಾಗುವವರೆಗೂ, ಜವಾಬ್ದಾರಿಯಿಂದ ವಾಹನ ಚಲಾಯಿಸುವುದನ್ನು ಕಲಿಯುವವರೆಗೂ ಪೋಷಕರು ತಮ್ಮ ಮಕ್ಕಳಿಗೆ ವಾಹನ ಖರೀದಿಸಿ ನೀಡುವುದನ್ನು ತಪ್ಪಿಸಬೇಕು.
