ಟ್ಯೂಷನ್‌ನಲ್ಲಿ ಶಿಕ್ಷಕಿಯೊಬ್ಬರು ಕಪಾಳಕ್ಕೆ ಹೊಡೆದ ಪರಿಣಾಮ, ವಿದ್ಯಾರ್ಥಿನಿಯ ಮೆದುಳಿಗೆ ತೀವ್ರವಾಗಿ ಪೆಟ್ಟಾಗಿದ್ದು, ಆಕೆ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಮುಂಬೈ ಬಳಿಯ ನಲ್ಲಸೊಪಾರದಲ್ಲಿ ನಡೆದಿದೆ.
ಅಕ್ಟೋಬರ್ 5ರಂದು ಟ್ಯೂಷನ್‌ನಲ್ಲಿ 8 ವರ್ಷದ ಬಾಲಕಿ ದೀಪಿಕಾಗೆ ಶಿಕ್ಷಕಿ ಎರಡು ಬಾರಿ ಕಪಾಳಕ್ಕೆ ಹೊಡೆದಿದ್ದಾರೆ. ಕಿವಿಯ ಕೆಳಭಾಗಕ್ಕೆ ಪೆಟ್ಟು ಬಿದ್ದಿದ್ದರಿಂದ ಮೆದುಳಿಗೂ ಪೆಟ್ಟಾಗಿದೆ. ಬಳಿಕ, ಆಕೆಯ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಂಡಿದೆ. ಆಕೆಯನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಿಸದೆ ಆಕೆ ಬುಧವಾರ ಸಾವನ್ನಪ್ಪಿದ್ದಾಳೆ.
ಪೊಲೀಸರ ಪ್ರಕಾರ, 20 ವರ್ಷದ ಖಾಸಗಿ ಟ್ಯೂಷನ್ ಶಿಕ್ಷಕಿ ರತ್ನಾ ಸಿಂಗ್ ಎಂಬಾಕೆ ಬಾಲಕಿಗೆ ಹೊಡೆದಿದ್ದಾಳೆ. ಬಾಲಕಿ ಟ್ಯೂಷನ್ ತರಗತಿಯಲ್ಲಿ ಚೇಷ್ಟೆ ಮಾಡುತ್ತಿದ್ದಳೆಂದು ಭಾವಿಸಿ, ಆಕೆಗೆ ಶಿಕ್ಷಕಿ ಹೊಡೆದಿದ್ದಾರೆ. ಆಕೆಯ ಹೊಡೆತ ಎಷ್ಟು ಗಟ್ಟಿಯಾಗಿತ್ತೆಂದರೆ, ಕಿವಿಯೋಲೆ ಬಾಲಕಿಯ ಕೆನ್ನೆಯೊಳಗೆ ಸಿಲುಕಿಕೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
“ಬಾಲಕಿಯನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರತರವಾದ ಮಿದುಳಿನ ಗಾಯ, ದವಡೆಯ ಬಿಗಿತ, ಶ್ವಾಸನಾಳ ಗಾಯ ಮತ್ತು ಧನುರ್ವಾಯು ಸೋಂಕಿನಿಂದಾಗಿ ಆಕೆಯನ್ನು ವೆಂಟಿಲೇಟರ್‌ನಲ್ಲಿ ಇರಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಆದರೂ, ಆಕೆ ಬದುಕುಳಿಯಲಿಲ್ಲ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಲಕಿಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಶಿಕ್ಷಕಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ನಾವು ಶಿಕ್ಷಕಿಗೆ ನೋಟಿಸ್ ನೀಡಿದ್ದೇವೆ. ತನಿಖೆ ನಡೆಸಿ ವೈದ್ಯರ ವಿವರವಾದ ಅಭಿಪ್ರಾಯ ಪಡೆದು, ಚಾರ್ಜ್‌ಶೀಟ್ ಹಾಕುವ ಬಗ್ಗೆ ನಿರ್ಧರಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.