ತಿರುಚ್ಚಿಯಿಂದ ಶಾರ್ಜಾಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದೊಳಗೆ ಹಾರಾಟದ ಮಧ್ಯದಲ್ಲೇ ಹೈಡ್ರಾಲಿಕ್ ಸಮಸ್ಯೆ ಉಂಟಾಗಿದ್ದು, ಲ್ಯಾಂಡಿಂಗ್ ಗೇರ್ ಅಸಮರ್ಪಕವಾಗಿದೆ.
140 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ತಿರುಚಿ ವಿಮಾನ ನಿಲ್ದಾಣಕ್ಕೆ ಹಿಂತಿರುಗುತ್ತಿದ್ದು ಪ್ರಸ್ತುತ ತುರ್ತು ಭೂಸ್ಪರ್ಶ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಂಧನವನ್ನು ಖಾಲಿ ಮಾಡುವ ಸಲುವಾಗಿ ಪೈಲಟ್ ಗಳು ಆಗಸದಲ್ಲೇ ಹಾರಾಟ ನಡೆಸುತ್ತಿದ್ದಾರೆ.
ಲ್ಯಾಂಡಿಂಗ್ ಸಮಯದಲ್ಲಿ ಬೆಂಕಿಯ ಅಪಾಯವನ್ನು ತಪ್ಪಿಸಲು, ವಿಮಾನದಲ್ಲಿನ ಇಂಧನ ಲೋಡ್ ಅನ್ನು ಕಡಿಮೆ ಮಾಡಿದ ನಂತರ ತುರ್ತು ಭೂಸ್ಪರ್ಶಕ್ಕೆ ಪ್ರಯತ್ನಿಸಲಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ವಿಮಾನ ನಿಲ್ದಾಣದಲ್ಲಿ 20ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳು ಮತ್ತು ಅಗ್ನಿಶಾಮಕ ವಾಹನಗಳನ್ನು ಸ್ಟ್ಯಾಂಡ್‌ಬೈನಲ್ಲಿ ಇರಿಸಲಾಗಿದ್ದು, ಸಂಭವನೀಯ ಬೆಲ್ಲಿ ಲ್ಯಾಂಡಿಂಗ್‌ಗೆ ಸಿದ್ಧತೆಗಳನ್ನು ಮಾಡಲಾಗುತ್ತಿದೆ.
ಸಂಜೆ 5.43ರ ಸುಮಾರಿಗೆ ವಿಮಾನ ಟೇಕ್ ಆಫ್ ಆಗಿತ್ತು. ನಂತರ ವಿಮಾನದಲ್ಲಿ ಹೈಡ್ರಾಲಿಕ್ ಸಮಸ್ಯೆ ಪತ್ತೆಯಾದ ಕೂಡಲೇ ಪೈಲಟ್ ಗಳು ವಿಮಾನವನ್ನು ಮತ್ತು ತಿರುಚಿಗೆ ಡೈವರ್ಟ್ ಮಾಡಿದ್ದು ಸುರಕ್ಷಿತ ಲ್ಯಾಂಡಿಂಗ್ ಗಾಗಿ ಪ್ರಯತ್ನಿಸುತ್ತಿದ್ದಾರೆ. ಸತತ 3 ಗಂಟೆಯಿಂದ ವಿಮಾನವನ್ನು ಆಗಸದಲ್ಲೇ ಗಿರಕಿ ಹೊಡೆಸಲಾಗುತ್ತಿದ್ದು ಇಂಧನದ ಲೋಡ್ ಕಡಿಮೆಯಾದ ನಂತರ ತುರ್ತು ಭೂಸ್ಪರ್ಶಕ್ಕೆ ಯತ್ನಿಸಲಾಗುತ್ತದೆ.
ವಿಮಾನ ನಿಲ್ದಾಣದ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ.