15 ವರ್ಷದ ಬಾಲಕಿ ಮೇಲೆ 14 ಜನರು 2 ವರ್ಷಗಳ ಕಾಲ ನಿರಂತರವಾಗಿ ಅತ್ಯಾಚಾರ ನಡೆಸಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದ್ದು, ಬಾಲಕಿ ಎಂಟು ತಿಂಗಳ ಗರ್ಭಿಣಿಯಾದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಬಾಲಕಿಯ ಮೇಲೆ ಎರಡು ವರ್ಷಗಳ ಕಾಲ 14 ಪುರುಷರು ಪದೇ ಪದೇ ಅತ್ಯಾಚಾರ ಎಸಗಿದ್ದಾರೆ. ಆಕೆ ಎಂಟು ತಿಂಗಳ ಗರ್ಭಿಣಿ ಎಂಬುದು ತಿಳಿದುಬಂದ ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಹುಟ್ಟುಹಬ್ಬ ಆಚರಣೆ ನೆಪದಲ್ಲಿ ಬಾಲಕಿ ಮೇಲೆ ಅತ್ಯಾಚಾರ; ದೂರು ದಾಖಲು
ಬಾಲಕಿ ಎಂಟನೇ ತರಗತಿಯಲ್ಲಿದ್ದಾಗ ಆಕೆ ಮೇಲೆ ಮೊದಲ ಬಾರಿಗೆ ಅತ್ಯಾಚಾರ ನಡೆದಿದೆ. ಅದಾದ ಬಳಿಕ ನಿರಂತರವಾಗಿ ಅತ್ಯಾಚಾರ ನಡೆದಿದೆ. ಸದ್ಯ ಬಾಲಕಿ ಹತ್ತನೇ ತರಗತಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ ರತ್ನಾ ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಬಾಲಕಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದಾಳೆ ಎಂದು ಹೇಳಲಾಗಿದೆ. ಬಾಲಕಿಯನ್ನು ಆರೋಪಿಗಳು ಬೆದರಿಸಿ ಬ್ಲ್ಯಾಕ್‌ಮೇಲ್ ಮಾಡಿದ್ದರು. ಬಾಲಕಿ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದಳು.
ಬಾಲಕಿ ಎಂಟು ತಿಂಗಳ ಗರ್ಭಿಣಿಯಾಗಿದ್ದಾಳೆ. ಈವರೆಗೂ ಆಕೆ ಗರ್ಭಿಣಿ ಎಂಬುದು ಆಕೆಯ ಮನೆಯವರಿಗೆ ಹೇಗೆ ತಿಳಿದುಬಂದಿಲ್ಲ ಎಂಬುದರ ಬಗ್ಗೆ ತನಿಖೆ ಆರಂಭಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ವಿ ರತ್ನಾ ಅವರು ಹೇಳಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಅಪ್ರಾಪ್ತ ಸೇರಿದಂತೆ 17 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
