ದೇಶದ ಮೊದಲ ಪ್ರಧಾನಿ ನೆಹರು ನಮ್ಮದು ಅಹಿಂಸಾ ನೀತಿ, ಹಾಗಾಗಿ ದೇಶಕ್ಕೆ ಸೈನ್ಯವೇ ಬೇಡ ಎಂದು ಹೇಳಿ ಸೈನ್ಯವನ್ನು ವೀಕ್ ಮಾಡಿದ್ದರು. ಕಾಂಗ್ರೆಸ್ ಯಾವಾಗಲೂ ಪಾಕಿಸ್ತಾನಕ್ಕೆ ಶರಣಾಗಿತ್ತು. ಹಾಗಾಗಿ ಇದುವರೆಗೂ ನಾವು ಪಾಕಿಸ್ತಾನದ ವಿರುದ್ಧ ಗೆಲ್ಲಲು ಸಾಧ್ಯವಾಗಿರಲಿಲ್ಲ. ಈಗ ಮೋದಿ ಬಂದು ಪಾಕಿಸ್ತಾನದ ಒಳಗೆ ನುಗ್ಗಿ ಹೊಡೆದಿದ್ದೇವೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಂಸತ್ತಿನಲ್ಲಿ ನಿಂತು ನೂರಾರು ಸಂಸದರ ಎದುರೇ ಹಸೀ-ಹಸೀ ಸುಳ್ಳು ಹೇಳಿದ್ದಾರೆ. ಸ್ವಾತಂತ್ರ್ಯ ನಂತರದ ಭಾರತೀಯ ಇತಿಹಾಸವನ್ನು ತಿರುಚುವ ಕೃತ್ಯಕ್ಕೆ ಕೈಹಾಕಿದ್ದಾರೆ.
ಸೋಮವಾರ, ಸಂಸತ್ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ, ಪ್ರಧಾನಿ ಮೋದಿ ಅವರನ್ನು ಹೊಗಳುವ ಭರದಲ್ಲಿ ಹಸಿ ಸುಳ್ಳು ಹೇಳಿದ್ದಾರೆ. “ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಸೇನೆಯ ಅಗತ್ಯವಿಲ್ಲ ಎಂಬ ನೀತಿಯನ್ನು ನೆಹರು ಹೊಂದಿದ್ದರು. ಸೇನೆ ಮಾಡುವ ಕೆಲಸವನ್ನು ಪೊಲೀಸರೇ ಮಾಡುತ್ತಾರೆ ಎಂಬದಾಗಿ ಬ್ರಿಟಿಷ್ ಜನರಲ್ ಲಾಕ್‌ಹಾರ್ಟ್ ಮಾರ್ಟಿನ್ ಬಳಿ ನೆಹರು ಹೇಳಿದ್ದರು” ಎಂದು ಆರೋಪಿಸಿದ್ದಾರೆ.
“ತೇಜಸ್ವಿ ಸೂರ್ಯಗೆ ಇತಿಹಾಸದ ಅರಿವಿಲ್ಲ. ಅವರು ಮೊದಲು ಇತಿಹಾಸ ಓದಿಕೊಳ್ಳಬೇಕು. ತೇಜಸ್ವಿ ಸೂರ್ಯ ನಾಲಿಗೆ ಹರಿಬಿಟ್ಟು ಕೋಟ್ಯಂತರ ಸೈನಿಕರಿಗೆ ಅವಮಾನಿಸಿದ್ದಾರೆ. ಈ ಮೊದಲು ಸೇನೆ ಯಾವುದೇ ಶೌರ್ಯ ತೋರಿಯೇ ಇಲ್ಲ ಎಂದಿದ್ದಾರೆ. ಇತಿಹಾಸ ತಿಳಿಯದಿದ್ದರೆ, ಮೊದಲ ಹೋಗಿ ಓದಿಕೊಳ್ಳಲಿ ಅಥವಾ ಪಂಡಿತ್ ನೆಹರು ಬಗೆಗಿನ ಹೇಳಿಕೆಗೆ ಸಾಕ್ಷಿ ನೀಡಲಿ” ಎಂದು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಕಿಡಿಕಾರಿದ್ದಾರೆ.
ಭಾರತೀಯ ಸೇನೆಯ ಇತಿಹಾಸ ಮತ್ತು ಘಟನಾವಳಿಗಳು
1947-48ರಲ್ಲಿ ಜವಾಹರಲಾಲ್ ನೆಹರು ಪ್ರಧಾನಿಯಾಗಿದ್ದಾಗ ಜಮ್ಮು ಮತ್ತು ಕಾಶ್ಮೀರದ ರಾಜ್ಯಕ್ಕೆ ಪಾಕಿಸ್ತಾನದ ಬುಡಕಟ್ಟು ಆಕ್ರಮಣಕಾರರ ಬೆಂಬಲದೊಂದಿಗೆ ದಾಳಿ ನಡೆದಾಗ ಯುದ್ಧ ಆರಂಭವಾಯಿತು. ಭಾರತೀಯ ಸೇನೆಯು ಶ್ರೀನಗರವನ್ನು ರಕ್ಷಿಸಿ, ಆಕ್ರಮಿತ ಪ್ರದೇಶದ ಗಣನೀಯ ಭಾಗವನ್ನು ಮರಳಿ ಪಡೆಯಿತು. 1949ರಲ್ಲಿ ಯುಎನ್‌ನ ಮಧ್ಯಸ್ಥಿಕೆಯಿಂದ ಯುದ್ಧವಿರಾಮ ಒಪ್ಪಂದವಾಯಿತು, ಆದರೆ ಕಾಶ್ಮೀರದ ಒಂದು ಭಾಗ (PoK) ಪಾಕಿಸ್ತಾನದ ನಿಯಂತ್ರಣದಲ್ಲಿಯೇ ಉಳಿಯಿತು. ಭಾರತವು ತನ್ನ ಪ್ರದೇಶವನ್ನು ರಕ್ಷಿಸಿದ್ದರಿಂದ ಇದನ್ನು ಭಾರತದ ತಾಂತ್ರಿಕ ಗೆಲುವು ಎಂದು ಪರಿಗಣಿಸಲಾಗುತ್ತದೆ.
ಆಗಸ್ಟ್-ಸೆಪ್ಟೆಂಬರ್ 1965ರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಪ್ರಧಾನಿಯಾಗಿದ್ದಾಗ ಪಾಕಿಸ್ತಾನವು ಕಾಶ್ಮೀರದಲ್ಲಿ “ಆಪರೇಷನ್ ಜಿಬ್ರಾಲ್ಟರ್” ಆರಂಭಿಸಿ, ಒಳನುಸುಳುವಿಕೆಯ ಮೂಲಕ ದಾಳಿ ನಡೆಸಿತು. ಭಾರತವು ರಕ್ಷಣಾತ್ಮಕವಾಗಿ ಪ್ರತಿದಾಳಿ ನಡೆಸಿತು ಮತ್ತು ಪಾಕಿಸ್ತಾನದ ಗಡಿಯಾಚೆಗೆ ತನ್ನ ಸೇನೆಯನ್ನು ಕಳುಹಿಸಿತು, ಲಾಹೋರ್‌ನವರೆಗೂ ಮುನ್ನಡೆಯಿತು. ತಾಶ್ಕೆಂಟ್ ಒಪ್ಪಂದದ ಮೂಲಕ ಯುದ್ಧವಿರಾಮ ಘೋಷಿಸಲಾಯಿತು. ಭಾರತವು ತನ್ನ ಪ್ರದೇಶವನ್ನು ರಕ್ಷಿಸಿ, ಪಾಕಿಸ್ತಾನದ ದಾಳಿಯನ್ನು ವಿಫಲಗೊಳಿಸಿದ್ದರಿಂದ ಇದನ್ನು ಭಾರತದ ಗೆಲುವು ಎಂದು ಪರಿಗಣಿಸಲಾಗುತ್ತದೆ.
1971ರ ಭಾರತ-ಪಾಕಿಸ್ತಾನ ಯುದ್ಧ (ಬಾಂಗ್ಲಾದೇಶ ವಿಮೋಚನಾ ಯುದ್ಧ): ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಈ ಯುದ್ಧವು ಪೂರ್ವ ಪಾಕಿಸ್ತಾನದಲ್ಲಿ (ಈಗಿನ ಬಾಂಗ್ಲಾದೇಶ) ಪಾಕಿಸ್ತಾನದ ಸೇನೆಯಿಂದ ನಡೆದ ಜನಾಂಗೀಯ ಹತ್ಯಾಕಾಂಡದಿಂದ ಉಂಟಾಯಿತು. ಭಾರತವು ಬಾಂಗ್ಲಾದೇಶದ ಮುಕ್ತಿ ಬಾಹಿನಿಯನ್ನು ಬೆಂಬಲಿಸಿ, ಪಾಕಿಸ್ತಾನದ ವಿರುದ್ಧ ಯುದ್ಧ ಆರಂಭಿಸಿತು. ಭಾರತೀಯ ಸೇನೆಯು 13 ದಿನಗಳಲ್ಲಿ ಢಾಕಾವನ್ನು ವಶಪಡಿಸಿಕೊಂಡಿತು, ಮತ್ತು ಪಾಕಿಸ್ತಾನದ 93,000 ಸೈನಿಕರು ಶರಣಾದರು. ಈ ಯುದ್ಧವು ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕೆ ಕಾರಣವಾಯಿತು ಮತ್ತು ಭಾರತದ ಐತಿಹಾಸಿಕ ಗೆಲುವಾಗಿ ದಾಖಲಾಯಿತು.
1999ರ ಕಾರ್ಗಿಲ್ ಯುದ್ಧ: ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಪಾಕಿಸ್ತಾನದ ಸೇನೆ ಮತ್ತು ಉಗ್ರಗಾಮಿಗಳು ಕಾರ್ಗಿಲ್‌ನ ಲೈನ್ ಆಫ್ ಕಂಟ್ರೋಲ್ (LoC) ಒಳಗೆ ಒಳನುಸುಳಿದರು. ಭಾರತವು “ಆಪರೇಷನ್ ವಿಜಯ್” ಆರಂಭಿಸಿ, ಕಠಿಣ ಪರ್ವತ ಪ್ರದೇಶದಲ್ಲಿ ಯುದ್ಧ ನಡೆಸಿತು. ಭಾರತವು ತನ್ನ ಎಲ್ಲಾ ಪ್ರದೇಶಗಳನ್ನು ಮರಳಿ ವಶಪಡಿಸಿಕೊಂಡಿತು, ಮತ್ತು ಪಾಕಿಸ್ತಾನವು ಹಿಂದೆ ಸರಿಯಿತು. ಇದು ಭಾರತದ ನಿರ್ಣಾಯಕ ಗೆಲುವಾಗಿತ್ತು.
ಜವಾಬ್ದಾರಿಯುತ ಸಂಸದನಾಗಿ ದೇಶದ ಸೇನೆಯ ಬಗ್ಗೆ ಸಾಮಾನ್ಯ ತಿಳಿವಳಿಕೆಯೂ ಇಲ್ಲದಿದ್ದರೆ, ಆತ ಮೋದಿಯ ಭಕ್ತನಾಗುವುದು, ಭಜನಾ ಮಂಡಳಿಯ ನಾಯಕನಾಗುವುದು ಒಳ್ಳೆಯದು.