ಈಶಾನ್ಯ ನವದೆಹಲಿಯ ಭಜನ್‌ಪುರ್ ಚೌಕ್‌ನಲ್ಲಿ ಭಾನುವಾರ ಬೆಳಗ್ಗೆ(ಜುಲೈ 2) ಮೇಲ್ಸೇತುವೆ ನಿರ್ಮಾಣಕ್ಕೆ ಭಾರೀ ಪೊಲೀಸ್ ಬಂದೋಬಸ್ತ್ ನಡುವೆ ದೇವಸ್ಥಾನ ಮತ್ತು ಮಜಾರ್ (ಮುಸ್ಲಿಂ ದೇಗುಲ)ಗಳನ್ನು ತೆರವುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಹರನ್ಪುರ ಹೆದ್ದಾರಿಯ ನಿರ್ಮಾಣ ನಡೆಯುತ್ತಿರುವುದರಿಂದ ರಸ್ತೆಯನ್ನು ವಿಸ್ತರಿಸಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಭಜನ್‌ಪುರ್ ಚೌಕ್‌ನಿಂದ ದೇವಾಲಯ ಮತ್ತು ಮಜಾರ್ ತೆರವುಗೊಳಿಸುವ ನಿರ್ಧಾರವನ್ನು ನವದೆಹಲಿಯ ಧಾರ್ಮಿಕ ಸಮಿತಿಯ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಎಲ್ಲವೂ ಶಾಂತಿಯುತವಾಗಿ ನೆರವೇರಿಸಲಾಗಿದೆ ಎಂದು ಈಶಾನ್ಯ ಡಿಸಿಪಿ ಡಾ. ಜಾಯ್ ಎನ್ ಟಿರ್ಕಿ ತಿಳಿಸಿದ್ದಾರೆ.
“ಎರಡೂ ದಾರ್ಮಿಕ ಸ್ಥಳಗಳ ತೆರವುಗೊಳಿಸುವ ನಿರ್ಧಾರವನ್ನು ಧಾರ್ಮಿಕ ಸಮಿತಿಯು ಅನುಮೋದಿಸಿದೆ ಮತ್ತು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರ ಆದೇಶದ ಮೇರೆಗೆ ಈ ಧ್ವಂಸ ಕಾರ್ಯಾಚರಣೆಯನ್ನು ನಡೆಸಲಾಗಿದೆ. ಕಾರ್ಯಾಚರಣೆಯು ಶಾಂತಿಯುತವಾಗಿ ನಡೆದಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸಲಿಲ್ಲ. ನಿವಾಸಿಗಳು ಮತ್ತು ಸ್ಥಳೀಯ ಮುಖಂಡರೊಂದಿಗೆ ಸೂಕ್ತ ಸಂವಾದ ನಡೆಸಲಾಯಿತು” ಎಂದು ಈಶಾನ್ಯ ಡಿಸಿಪಿ ಡಾ. ಜಾಯ್ ಎನ್ ಟಿರ್ಕಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಜ್ಯಪಾಲರು ಜನರಿಂದ ಆಯ್ಕೆಯಾದ ಸರ್ಕಾರಕ್ಕಿಂತ ದೊಡ್ಡವರೇ?
ಭಜನಪುರ ಚೌಕ್‌ನ ರಸ್ತೆಯ ಎದುರು ಹನುಮಾನ್ ದೇವಸ್ಥಾನ ಮತ್ತು ಮಜಾರ್ ಇತ್ತು. ಕೆಲವು ದಿನಗಳ ಹಿಂದೆ, ಸಹರನ್ಪುರ ಮೇಲ್ಸೇತುವೆ ನಿರ್ಮಾಣಕ್ಕಾಗಿ ರಸ್ತೆಯನ್ನು ವಿಸ್ತರಿಸಲು ಎರಡೂ ಸ್ಥಳಗಳನ್ನು ತೆರವುಗೊಳಿಸಬೇಕು ಎಂದು ಧಾರ್ಮಿಕ ಸಮಿತಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.
ನವದೆಹಲಿ ಭಜನ್‌ಪುರ್ ಚೌಕ್ ಅನ್ನು ಕೋಮು ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲಾಗಿದೆ. 2020ರಲ್ಲಿ ಈ ಪ್ರದೇಶದಲ್ಲಿ ಗಲಭೆ ಉಂಟಾಗಿ 50ಕ್ಕೂ ಹೆಚ್ಚು ಮಂದಿ ಮೃತಪಟ್ಟು, 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.