ಸುಮಾರು 26 ಭಾರತೀಯರನ್ನು ಬಲಿ ಪಡೆದ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಇತ್ತೀಚೆಗೆ ಪಾಕಿಸ್ತಾನದಲ್ಲಿನ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇದಾದ ಬಳಿಕ ಭಾರತ ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಭಾರತ ಪಾಕಿಸ್ತಾನ ಸಂಘರ್ಷದ ಬಗ್ಗೆ ಇಂದು (ಮೇ 10) ವಿದೇಶಾಂಗ ಸಚಿವಾಲಯ ಪತ್ರಿಕಾಗೋಷ್ಠಿ ನಡೆಸಿದ್ದು, ಪ್ರಮುಖ ಹತ್ತು ಮಾಹಿತಿಗಳನ್ನು ನೀಡಿದೆ.
“ಪಾಕಿಸ್ತಾನವು ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಅನೇಕ ವಾಯು ದಾಳಿ ನಡೆಸುವ ಪ್ರಯತ್ನ ಮಾಡಿದೆ. ಕೆಲವು ನಾಗರಿಕರನ್ನು ಕೊಂದಿದೆ” ಎಂದು ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಭಾರತ-ಪಾಕಿಸ್ತಾನ ಸಂಘರ್ಷ | ರಾಂಚಿಯಲ್ಲಿ ನಕಲಿ ಸೇನಾ ಸಮವಸ್ತ್ರಗಳು ಪತ್ತೆ
“ಪಾಕಿಸ್ತಾನವು ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸುವ ಆಕ್ರಮಣಕಾರಿ ಉದ್ದೇಶವನ್ನು ಹೊಂದಿದ್ದು ಅವರ ಸೇನೆ ಮುನ್ನುಗ್ಗುತ್ತಿದೆ” ಎಂದಿದ್ದಾರೆ. ಹಾಗೆಯೇ ಭಾರತದಲ್ಲಿ ವಾಯುಪಡೆಯ ನೆಲೆಗಳ ನಾಶ ಮಾಡಿದ್ದೇವೆ ಎಂಬ ಪಾಕಿಸ್ತಾನದ ಹೇಳಿಕೆಗಳನ್ನು ಭಾರತೀಯ ಅಧಿಕಾರಿಗಳು ತಳ್ಳಿಹಾಕಿದ್ದಾರೆ.
- ಪಾಕಿಸ್ತಾನವು ಡ್ರೋನ್‌ಗಳು(UCAVs), ದೀರ್ಘ-ಶ್ರೇಣಿಯ ಶಸ್ತ್ರಾಸ್ತ್ರಗಳು, ಯುದ್ಧ ವಿಮಾನಗಳನ್ನು, ನಾಗರಿಕ ಪ್ರದೇಶಗಳು ಮತ್ತು ಪಶ್ಚಿಮ ಮುಂಭಾಗದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಲು ಬಳಸಿದೆ ಎಂದು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
- ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಉದ್ದಕ್ಕೂ ಪಾಕಿಸ್ತಾನ ಸೇನೆಯು ಡ್ರೋನ್‌ಗಳನ್ನು ಬಳಸಿದೆ, ಗುಂಡು ಹಾರಿಸಿದೆ. ಉಧಮ್‌ಪುರ, ಪಠಾಣ್‌ಕೋಟ್, ಆದಮ್‌ಪುರ ಮತ್ತು ಭುಜ್‌ನಲ್ಲಿರುವ ಭಾರತೀಯ ವಾಯುಪಡೆಯ ಕೇಂದ್ರಗಳಲ್ಲಿ ಉಪಕರಣಗಳು ಮತ್ತು ಸಿಬ್ಬಂದಿಗೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.
- ಪಾಕಿಸ್ತಾನವು ಶ್ರೀನಗರ, ಅವಂತಿಪೋರಾ ಮತ್ತು ಉಧಮ್‌ಪುರ ವಾಯುನೆಲೆಗಳಲ್ಲಿನ ವೈದ್ಯಕೀಯ ಕೇಂದ್ರ ಮತ್ತು ಶಾಲಾ ಆವರಣಗಳ ಮೇಲೆ ದಾಳಿ ಮಾಡಿದೆ. ನಮ್ಮ ನಾಗರಿಕ ಮೂಲಸೌಕರ್ಯವನ್ನು ಬೇಜವಾಬ್ದಾರಿಯಿಂದ ಗುರಿಯಾಗಿಸಿಕೊಂಡಿದೆ. ಇದು ಖಂಡನೀಯ, ಹೇಡಿತನದ ಕೃತ್ಯ ಎಂದು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ತಿಳಿಸಿದರು.
- ಎಲ್‌ಒಸಿ ಉದ್ದಕ್ಕೂ ಪಾಕಿಸ್ತಾನವು ಡ್ರೋನ್‌ಗಳನ್ನು ಬಳಸಿಕೊಂಡು ಅನೇಕ ಬಾರಿ ಒಳನುಸುಳುವ ಪ್ರಯತ್ನ ಮಾಡಿದೆ. ಬಂದೂಕುಗಳನ್ನು ಬಳಸಿ ಶೆಲ್ ದಾಳಿಗಳನ್ನು ನಡೆಸಿದೆ. ನಾಗರಿಕ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಕೆಲವು ನಾಗರಿಕರನ್ನು ಕೊಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
- ಕುಪ್ವಾರಾ, ಬಾರಾಮುಲ್ಲಾ, ಪೂಂಚ್, ರಾಜೌರಿ ಮತ್ತು ಅಖ್ನೂರ್ ವಲಯಗಳಲ್ಲಿ ಗುಂಡಿನ ಚಕಮಕಿ ಮುಂದುವರೆದಿದೆ. ಭಾರತೀಯ ಸೇನೆಯು ಪರಿಣಾಮಕಾರಿಯಾಗಿ ಪ್ರತಿದಾಳಿ ನಡೆಸಿದೆ. ಪಾಕಿಸ್ತಾನ ಸೇನೆಗೆ ಭಾರೀ ಹಾನಿಯುಂಟಾಗಿದೆ.
- ಭಾರತೀಯ ಸೇನೆಯು ಮಿಲಿಟರಿ ಗುರಿಗಳ ಮೇಲೆ ಮಾತ್ರ ನಿಖರವಾದ ದಾಳಿಯನ್ನು ನಡೆಸಿದೆ. ತಾಂತ್ರಿಕ ಮೂಲಸೌಕರ್ಯ, ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು, ರಾಡಾರ್ ತಾಣಗಳು ಮತ್ತು ಶಸ್ತ್ರಾಸ್ತ್ರ ಸಂಗ್ರಹಣಾ ಪ್ರದೇಶಗಳಂತಹ ಮಿಲಿಟರಿ ಸಂಬಂಧಿತ ಸ್ಥಳಗಳ ಮೇಲೆ ಮಾತ್ರ ದಾಳಿ ನಡೆಸಿದೆ.
- ರಫಿಕಿ, ಮುರಿಯದ್, ಚಕ್ಲಾಲಾ, ರಹೀಮ್ ಯಾರ್ ಖಾನ್, ಸುಕ್ಕೂರ್ ಮತ್ತು ಚುನಿಯನ್‌ನಲ್ಲಿರುವ ಪಾಕಿಸ್ತಾನಿ ಮಿಲಿಟರಿ ನೆಲೆಗಳ ಮೇಲೆ ಭಾರತೀಯ ಯುದ್ಧ ವಿಮಾನಗಳಿಂದ ದಾಳಿ ನಡೆದಿದೆ. ಪಸ್ರೂರ್ ಮತ್ತು ಸಿಯಾಲ್‌ಕೋಟ್ ವಾಯುಯಾನ ನೆಲೆಗಳಲ್ಲಿನ ರಾಡಾರ್ ತಾಣಗಳ ಮೇಲೆಯೂ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಕನಿಷ್ಠ ಹಾನಿಯಾಗಿದೆ.
- ಪಾಕಿಸ್ತಾನವು ತನ್ನ ಸೇನೆಯನ್ನು ಮುಂದಕ್ಕೆ ಕಳುಹಿಸುತ್ತಿದೆ. ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸುವ ಆಕ್ರಮಣಕಾರಿ ಉದ್ದೇಶವನ್ನು ಪಾಕಿಸ್ತಾನ ಹೊಂದಿದೆ ಎಂಬುದನ್ನು ಇದು ಸೂಚಿಸುತ್ತದೆ.
- ಎಲ್ಲಾ ಪ್ರತಿಕೂಲ ಕ್ರಮಗಳನ್ನು ಭಾರತೀಯ ಸಶಸ್ತ್ರ ಪಡೆಗಳು ಪರಿಣಾಮಕಾರಿಯಾಗಿ ಎದುರಿಸಿವೆ ಮತ್ತು ಸೂಕ್ತವಾಗಿ ಪ್ರತಿಕ್ರಿಯಿಸಿವೆ. ಭಾರತೀಯ ಸಶಸ್ತ್ರ ಪಡೆಗಳು ಕಾರ್ಯಾಚರಣೆಗೆ ಸನ್ನದ್ಧವಾಗಿದೆ.
- “ಆದಂಪುರದಲ್ಲಿ ಭಾರತೀಯ S-400 ವ್ಯವಸ್ಥೆಯನ್ನು ನಾಶಪಡಿಸಲಾಗಿದೆ, ಸೂರತ್ ಮತ್ತು ಸಿರ್ಸಾದಲ್ಲಿ ವಾಯುನೆಲೆಗಳನ್ನು ನಾಶಪಡಿಸಲಾಗಿದೆ ಎಂಬ ತಪ್ಪು ಮಾಹಿತಿಯನ್ನು ಪಾಕಿಸ್ತಾನ ನಿರಂತರವಾಗಿ ನೀಡುತ್ತಿದೆ. ಪಾಕಿಸ್ತಾನದಿಂದ ಹರಡುತ್ತಿರುವ ಈ ಸುಳ್ಳು ಹೇಳಿಕೆಗಳನ್ನು ಭಾರತ ತಿರಸ್ಕರಿಸುತ್ತದೆ ಎಂದು ಇಬ್ಬರು ಮಹಿಳಾ ಅಧಿಕಾರಿಗಳೂ ಹೇಳಿದರು.
ಭಾರತ ಮತ್ತು ಪಾಕಿಸ್ತಾನ ಸಂಘರ್ಷದ ಬಗ್ಗೆ ವಿದೇಶಾಂಗ ಸಚಿವಾಲಯವು ಪ್ರತಿದಿನ ಮಾಹಿತಿಯನ್ನು ನೀಡುತ್ತಿದೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ಪ್ರತಿದಿನ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
