ಒಂದು ದೇಶಕ್ಕೆ ನೀರು ಹರಿಯದಂತೆ ನಿರ್ಬಂಧಿಸುವುದು ಯುದ್ಧ ಅಪರಾಧವಾಗಿದೆ. ಭಾರತವು ಇಂತಹ ಅಪರಾಧವನ್ನು ಮಾಡಲು ಮುಂದಾದರೆ, ಜಗತ್ತಿನ ಎದುರು ಖಳನಾಯಕನಂತೆ ಬಿಂಬಿತವಾಗುತ್ತದೆ. ಯಾಕೆಂದರೆ, ಅರುಣಾಚಲ ಪ್ರದೇಶದ ಗಡಿ ಭಾಗದಲ್ಲಿ ಬ್ರಹ್ಮಪುತ್ರ ನದಿಗೆ ಬೃಹತ್ ಅಣೆಕಟ್ಟು ಕಟ್ಟಲು ಮುಂದಾಗಿರುವ ಚೀನಾವನ್ನು ಭಾರತ ವಿರೋಧಿಸುತ್ತಿದೆ.
1960ರಲ್ಲಿ ವಿಶ್ವ ಬ್ಯಾಂಕ್, ಭಾರತ ಹಾಗೂ ಪಾಕಿಸ್ತಾನ ಸಹಿ ಹಾಕಿದ ಸಿಂಧು ನದಿ ನೀರು ಒಪ್ಪಂದವನ್ನು ಅಂತರರಾಷ್ಟ್ರೀಯ ಸಹಕಾರದ ದೊಡ್ಡ ಯಶಸ್ಸುಗಳಲ್ಲಿ ಒಂದು ಎಂಬುದಾಗಿ ಪರಿಗಣಿಸಲಾಗಿದೆ. 1965 ಮತ್ತು 1971ರಲ್ಲಿ ಭಾರತ ಮತ್ತು ಪಾಕ್ ನಡುವೆ ನಡೆದ ಎರಡು ಪೂರ್ಣ ಪ್ರಮಾಣದ ಯುದ್ಧಗಳು ಹಾಗೂ ಕಾರ್ಗಿಲ್‌ನಂತಹ ಸಣ್ಣ ಸಂಘರ್ಷಗಳ ಹೊರತಾಗಿಯೂ, ಈ ಒಪ್ಪಂದವು ಜಾರಿಯಲ್ಲಿದೆ. ಆದರೂ, ಬಹುಸಂಖ್ಯಾತ ಜನರಿಗೆ ಈ ಒಪ್ಪಂದದ ಕುರಿತು ಹೆಚ್ಚು ತಿಳಿವಳಿಕೆ (ಮಾಹಿತಿ) ಇಲ್ಲದ ಕಾರಣ, ಒಪ್ಪಂದದ ಯಶಸ್ಸು ತಪ್ಪಾಗಿ ಅರ್ಥೈಸಲಾಗುತ್ತಿದೆ. ಅದರಲ್ಲೂ ಬಿಜೆಪಿ ಮತ್ತು ಸಂಘಪರಿವಾರವು ಕಾಂಗ್ರೆಸ್‌ಅನ್ನು ದೂಷಿಸಲು ಈ ಒಪ್ಪಂದವನ್ನೂ ಅಸ್ತ್ರ ಮಾಡಿಕೊಂಡಿವೆ. ಈಗ, ಸಿಂಧು ಜಲ ಒಪ್ಪಂದವನ್ನು ರದ್ದುಗೊಳಿಸುವುದಾಗಿ ಭಾರತ ಹೇಳಿಕೊಳ್ಳುತ್ತಿದೆ.
ಆದರೆ, ಆ ರೀತಿಯಲ್ಲಿ ಒಪ್ಪಂದವನ್ನು ರದ್ದುಗೊಳಿಸಬಹುದೇ? ಭಾರತ-ಪಾಕ್ ನಡುವಿನ ಸಿಂಧು ಒಪ್ಪಂದವನ್ನು ಉಭಯ ರಾಷ್ಟ್ರಗಳು ಒಮ್ಮತದಿಂದ ಬದಲಾಯಿಸಬಹುದು ಅಥವಾ ಹೊಸ ಒಪ್ಪಂದದ ಮಾತುಕತೆ ಮಾಡಬಹುದು. ಆದರೆ, ಯಾವುದೇ ಒಂದು ರಾಷ್ಟ್ರ ಏಕಪಕ್ಷೀಯವಾಗಿ ಒಪ್ಪಂದವನ್ನು ಬದಲಿಸುವ ಅಥವಾ ರದ್ದುಗೊಳಿಸುವ ಅಧಿಕಾರ ಹೊಂದಿಲ್ಲ ಎಂಬುದೇ ವಾಸ್ತವ.
ಹಾಗಿದ್ದರೂ, ಭಾರತ ‘ಒಪ್ಪಂದವನ್ನು ಸ್ಥಗಿತ’ಗೊಳಿಸುವ ಮಾತನಾಡುತ್ತಿದೆ. ಆದರೆ, ಭಾರತ ಸರ್ಕಾರದ ಅಂತಹ ನಿರ್ಧಾರ ತೆಗೆದುಕೊಳ್ಳಲು ಕಾನೂನುಬದ್ಧ ಅವಕಾಶ ಇಲ್ಲ. ಅದೇ ರೀತಿ ಪಾಕಿಸ್ತಾನ ಕೂಡ ಏಕ ಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ, ಭಾರತದ ನಿರ್ಧಾರವನ್ನು ಪಾಕಿಸ್ತಾನವು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ, ಭಾರತ ಸೋಲನುಭವಿಸಬೇಕಾಗುತ್ತದೆ.
ಒಪ್ಪಂದಕ್ಕೆ ಸಂಬಂಧಿಸಿದಂತೆ ಮೋದಿ ಆಡಳಿತವು ಕಾನೂನುಬದ್ಧವಾಗಿ ವಿವಾದಾತ್ಮಕ ವಿಧಾನಗಳನ್ನು ಬಳಸಲು ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. 2016ರ ಆಗಸ್‌ನಲ್ಲಿ, ಕಿಶೆಂಗಂಗಾ-ರಾಟಲ್ ಯೋಜನೆಗೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನ ನಡುವಿನ ತಿಕ್ಕಾಟವನ್ನು ನಿಭಾಯಿಸಲು ಒಪ್ಪಂದದ ಅಡಿಯನ್ನು ತಟಸ್ಥ ತಜ್ಞರನ್ನು ನೇಮಿಸಬೇಕೆಂಬ ತನ್ನ ವಿನಂತಿಯನ್ನು ಪಾಕಿಸ್ತಾನ ಹಿಂಪಡೆಯಿತು. ಬದಲಾಗಿ, ಮಧ್ಯಸ್ಥಿಕೆ ನ್ಯಾಯಾಲಯ (CoI) ರಚಿಸಬೇಕೆಂಬ ಬೇಡಿಕೆ ಇಟ್ಟಿತು.
ಒಪ್ಪಂದದ ಪರಿಭಾಷೆಯಲ್ಲಿ, ವಿವಾದ vs ವ್ಯತ್ಯಾಸ, ತಟಸ್ಥ ತಜ್ಞರು vs ಮಧ್ಯಸ್ಥಿಕೆ ನ್ಯಾಯಾಲಯ – ಎರಡೂ ಹೆಚ್ಚಿನ ಮಟ್ಟದ ಸವಾಲನ್ನು ಎದುಸುತ್ತವೆ. ಪಾಕಿಸ್ತಾನ ಸರ್ಕಾರವು ಮಧ್ಯಸ್ಥಿಕೆ ನ್ಯಾಯಾಲಯದ ಬೇಡಿಕೆ ಇಟ್ಟಿದ್ದಕ್ಕೆ ಸ್ಪಷ್ಟ ಕಾರಣ ನೀಡಿಲ್ಲ. ಆದರೆ, ಮಧ್ಯಸ್ಥಿಕೆ ನ್ಯಾಯಾಲಯವನ್ನು ವಿಶ್ವಬ್ಯಾಂಕ್ ನೇಮಿಸುವುದಕ್ಕೂ ಮೊದಲೇ, 2016ರ ಅಕ್ಟೋಬರ್‌ನಲ್ಲಿ ಇದೇ ವಿವಾದಕ್ಕೆ ಸಂಬಂಧಿಸಿದಂತೆ ತಟಸ್ಥ ತಜ್ಞರನ್ನು ನೇಮಿಸಬೇಕೆಂದು ಮನವಿ ಸಲ್ಲಿಸಿತು.
ಈ ವಿವಾದವನ್ನು ತಟಸ್ಥ ತಜ್ಞರು ಪರಿಶೀಲನೆ ನಡೆಸುವಾಗ, ಮಧ್ಯಸ್ಥಿಕೆ ನ್ಯಾಯಾಲಯ ರಚಿಸುವುದು ಕಾನೂನುಬಾಹಿರವೆಂದು ಭಾರತ ವಾದಿಸಿತು. ದುರದೃಷ್ಟವಶಾತ್, ಭಾರತದ ವಾದಕ್ಕೆ ಮನ್ನಣೆ ದೊರೆಯಲಿಲ್ಲ. ಯಾಕೆಂದರೆ, ಒಪ್ಪಂದದಲ್ಲಿ ಒಂದೇ ವಿವಾದಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ನ್ಯಾಯಾಲಯ ಮತ್ತು ತಟಸ್ಥ ತಜ್ಞರನ್ನು ನೇಮಿಸಬಾರದು ಎಂಬ ನಿಯಮವಿಲ್ಲ. ಅಂತೆಯೇ, ತಟಸ್ಥ ತಜ್ಞರು ಅಥವಾ ಮಧ್ಯಸ್ಥಿಕೆ ನ್ಯಾಯಾಲಯ ರಚನೆಯ ವಿನಂತಿಯನ್ನು ನಿರಾಕರಿಸುವ ಸ್ವಾತಂತ್ರ್ಯವು ವಿಶ್ವಬ್ಯಾಂಕ್‌ಗೂ ಇಲ್ಲ.
ಹೀಗಾಗಿ, ಭಾರತ ಅಥವಾ ಪಾಕಿಸ್ತಾನ ಸರ್ಕಾರಗಳನ್ನು ಒಂದು ಉತ್ತಮ ಮಾರ್ಗವನ್ನು ಕಂಡುಕೊಳ್ಳುವಂತೆ ಮಾಡಲು ವಿಶ್ವ ಬ್ಯಾಂಕ್ ವರ್ಷಗಳಿಂದ ಪ್ರಯತ್ನಿಸುತ್ತಿದೆ. ಆದರೆ, ಅದು ಸಾಧ್ಯವಾಗಲಿಲ್ಲ. ಪರಿಣಾಮವಾಗಿ, 2022ರ ಅಕ್ಟೋಬರ್‌ನಲ್ಲಿ ಮಧ್ಯಸ್ಥಿಕೆ ನ್ಯಾಯಾಲಯ ಮತ್ತು ಇಬ್ಬರು ತಟಸ್ಥ ತಜ್ಞರನ್ನು ನೇಮಿಸುವುದಾಗಿ ವಿಶ್ವ ಬ್ಯಾಂಕ್ ಘೋಷಿಸಿತು.
ವಿಶ್ವಬ್ಯಾಂಕ್ ತನ್ನ ಎಲ್ಲ ವಾದಗಳನ್ನು ತಿರಸ್ಕರಿಸಿದ್ದರಿಂದ ಅವಮಾನ ಅನುಭವಿಸಿರುವ ಭಾರತ ಸರ್ಕಾರವು, ವಿಶ್ವ ಬ್ಯಾಂಕ್‌ನ ನಿರ್ಧಾರವು ಕಾನೂನುಬದ್ಧವಲ್ಲ ಎಂದು ವಾಗ್ದಾಳಿ ನಡೆಸುತ್ತಿದೆ. ಅಲ್ಲದೆ, ತಟಸ್ಥ ತಜ್ಞರ ಪ್ರಕ್ರಿಯೆಗಳಲ್ಲಿ ಮಾತ್ರವೇ ಭಾರತ ಭಾಗವಹಿಸುತ್ತಿದ್ದು, ಮಧ್ಯಸ್ಥಿಕೆ ನ್ಯಾಯಾಲಯವನ್ನು ಬಹಿಷ್ಕರಿಸುತ್ತಿದೆ.
ಇಷ್ಟೆಲ್ಲ ನಡೆಯುತ್ತಿರುವ ನಡುವೆ, ಈಗ ಒಪ್ಪಂದವನ್ನು ಉಲ್ಲಂಘಿಸುವುದಾಗಿ ಭಾರತ ಸರ್ಕಾರ ಹೇಳಿಕೊಳ್ಳುತ್ತಿದೆ ಅದು ಸಾಧ್ಯವೇ?
ಸಿಮ್ಲಾ ಒಪ್ಪಂದದಲ್ಲಿ ಎರಡೂ ದೇಶಗಳು ಪರಸ್ಪರ ಭದ್ರತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುತ್ತವೆ ಹಾಗೂ ಎಲ್ಲವನ್ನೂ ಶಾಂತಿಯುತವಾಗಿ ಪರಿಹರಿಸುತ್ತವೆ ಎಂದು ಹೇಳಲಾಗಿದೆ. ಈ ಒಪ್ಪಂದದ ಜಾರಿಯ ವಿಚಾರದಲ್ಲಿ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ನಡೆಯುವ ಘಟನೆಗಳು ಅಥವಾ ಭಯೋತ್ಪಾದಕ ಚಟುವಟಿಕೆಗಳು ತೊಡಕಾಗುವುದಿಲ್ಲ ಎಂದೂ ಹೇಳಲಾಗಿದೆ.
ಸಿಂಧು ಜಲ ಒಪ್ಪಂದ ಮುಂದುವರಿಯಲು ಪ್ರಮುಖ ಕಾರಣವೆಂದರೆ, ಒಪ್ಪಂದದ ವಿಚಾರಗಳನ್ನು ಅನುಸರಿಸುವುದು ಬಹಳ ಸುಲಭ. ಒಪ್ಪಂದದ ಅಡಿಯಲ್ಲಿ ಭಾರತವು ಪಂಜಾಬ್‌ನಲ್ಲಿನ ನೀರಿನ ಮೂಲಸೌಕರ್ಯ ವ್ಯವಸ್ಥೆಗಳಿಗಾಗಿ ವಿಶ್ವ ಬ್ಯಾಂಕ್‌ನಿಂದ ಭಾರಿ ಹೂಡಿಕೆಗಳನ್ನು ಪಡೆಯಿತು. ಪಂಜಾಬ್‌ಅನ್ನು ಭಾರತದ ಆಹಾರ ಬುಟ್ಟಿಯಾಗಿ ಪರಿವರ್ತಿಸಿತು. ಇದಕ್ಕೆ ಪ್ರತಿಯಾಗಿ, ಪಾಕಿಸ್ತಾನಕ್ಕೆ ಹರಿಯುವ ಪಶ್ಚಿಮ ನದಿಗಳಲ್ಲಿ ನೀರಿನ ಮುಕ್ತ ಹರಿವಿಗೆ ಯಾವುದೇ ಅಡ್ಡಿ ಮಾಡುವುದಿಲ್ಲ ಎಂಬ ಭರವಸೆ ನೀಡಿತು. ಅಂದರೆ, ನದಿಗಳಿಗೆ ಯಾವುದೇ ಹೊಸ ದೊಡ್ಡ ಜಲಾಶಯಗಳನ್ನು ನಿರ್ಮಿಸುವುದಿಲ್ಲ. ನದಿಯ ಹರಿವನ್ನು ಬೇರೆಡೆಗೆ ತಿರುಗಿಸುವುದಿಲ್ಲ ಎಂದು ಹೇಳಿತ್ತು.
ಈ ವರದಿ ಓದಿದ್ದೀರಾ?: ಖಂಡನೆ, ಸಭೆ, ಬಂದ್, ಪ್ರತಿಭಟನೆ – ಇವು ಪಹಲ್ಗಾಮ್ ದಾಳಿಗೆ ರಾಜಕೀಯ ಪಕ್ಷಗಳ ಪ್ರತಿಕ್ರಿಯೆ; ಅಸಹ್ಯ ಮೆರೆದ ಬಿಜೆಪಿ
ಈ ಒಪ್ಪಂದದಿಂದ ನಿಜಕ್ಕೂ ಪರಿಣಾಮ ಅನುಭವಿಸುತ್ತಿರುವುದು ಭಾರತದ ಜಮ್ಮು ಮತ್ತು ಕಾಶ್ಮೀರ ಮಾತ್ರ. ಯಾಕೆಂದರೆ, ಯಾವುದೇ ದೊಡ್ಡ ಜಲಾಶಯಗಳು ಇಲ್ಲದ ಕಾರಣ, ಚಳಿಗಾಲದಲ್ಲಿ ನೀರಿನ ಹರಿವು ಕಡಿಮೆಯಾದಾಗ, ಕಾಶ್ಮೀರದಲ್ಲಿನ ಅಣೆಕಟ್ಟುಗಳಲ್ಲಿ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯ ಕಡಿಮೆಯಾಗುತ್ತದೆ. ಪರಿಣಾಮ, ಚಳಿಗಾಲದ ತಿಂಗಳುಗಳಲ್ಲಿ ಹೆಚ್ಚು ಅಗತ್ಯವಿರುವಾಗ ವಿದ್ಯುತ್‌ನಿಂದಲೇ ಕಾಶ್ಮೀರಿಗಳು ವಂಚಿತರಾಗುತ್ತಾರೆ. ಸೀಮಿತ ವಿದ್ಯುತ್‌ನಲ್ಲಿಯೇ ದಿನ ದೂಡುತ್ತಾರೆ.
ದುರದೃಷ್ಟ ಸಂಗತಿ – ಕಠು ಸತ್ಯವೆಂದರೆ, ಭಾರತ ಅಥವಾ ಪಾಕಿಸ್ಥಾನ ಯಾವುದೇ ಸರ್ಕಾರವು ಕಾಶ್ಮೀರಿಗಳ ಜೀವನ, ಜೀವನ ಪರಿಸ್ಥಿತಿಗಳು ಅಥವಾ ಜೀವನೋಪಾಯದ ಬಗ್ಗೆ ಎಂದಿಗೂ ಕಾಳಜಿ ತೋರಿಸಿಲ್ಲ. ಹೀಗಾಗಿ, ಒಪ್ಪಂದವನ್ನು ಉಲ್ಲಂಘಿಸುವ ಮೂಲಯ ಯಾವ ರಾಷ್ಟ್ರೀಯ ಭದ್ರತಾ ಹಿತಾಸಕ್ತಿಗಳನ್ನು ಪೂರೈಸಲು ಸಾಧ್ಯ?
ಮೊದಲನೆಯದಾಗಿ, ಭಾರತವು ಪಾಕಿಸ್ತಾನಕ್ಕೆ ಹರಿಯುವ ನೀರಿನಲ್ಲಿ ಒಂದು ಸಣ್ಣ ಪ್ರಮಾಣದ ನೀರಿನ್ನು ನಿಯಂತ್ರಿಸಲು ಮಾತ್ರ ಸಾಧ್ಯ. ಹೆಚ್ಚಿನ ನೀರು ಹಿಮ ಕರಗುವಿಕೆ, ಮೇಘಸ್ಫೋಟ ಹಾಗೂ ಮಾನ್ಸೂನ್ ಮಳೆಯಿಂದ ಪಾಕಿಸ್ಥಾನಕ್ಕೆ ಹರಿದುಹೋಗುತ್ತದೆ. ಈ ಎಲ್ಲ ನೀರನ್ನೂ ತಡೆಯಬೇಕೆಂದರೆ, ಭಾರತವು ಹತ್ತಾರು ವರ್ಷಗಳ ಕಾಲ ಸಾವಿರಾರು ಕೋಟಿ ರೂ. ಖರ್ಚು ಮಾಡಿ ದೊಡ್ಡ ಅಣೆಕಟ್ಟುಗಳನ್ನು ಕಟ್ಟಬೇಕಾಗುತ್ತದೆ. ಆ ಅಣೆಕಟ್ಟುಗಳು ತಲೆ ಎತ್ತುವ ವೇಳೆಗೆ ಪರಿಸ್ಥಿತಿಗಳು ಹೇಗೆ ಬೇಕಾದರೂ ಬದಲಾಗಬಹುದು. ಹೀಗಾಗಿ, ಮೋದಿ ಸರ್ಕಾರವು ಸದ್ಯಕ್ಕೆ ಪಾಕಿಸ್ತಾನವನ್ನು ಬೆದರಿಸುವುದರ ಹೊರತಾಗಿ, ನೀರಿನ ವಿಚಾರದಲ್ಲಿ ಯಾವುದೇ ನಿರ್ದಿಷ್ಟ ನಿರ್ಧಾರ ಅಥವಾ ಉದ್ದೇಶಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ, ಅಣೆಕಟ್ಟು ಕಟ್ಟುತ್ತೇವೆ ಎಂದಾದರೆ, ಆ ಹಣದಲ್ಲಿ ಭಾರತವು ತನ್ನ ಮಿಲಿಟರಿ ಸಾಮರ್ಥ್ಯಗಳನ್ನು ಸುಲಭವಾಗಿ ಮತ್ತು ಹೆಚ್ಚು ವೇಗವಾಗಿ ಉನ್ನತೀಕರಿಸಬಹುದು.
ಅದಕ್ಕಿಂತಲೂ ಮುಖ್ಯವಾದ ಮತ್ತೊಂದು ವಿಚಾರವೆಂದರೆ, ಒಂದು ದೇಶಕ್ಕೆ ನೀರು ಹರಿಯದಂತೆ ನಿರ್ಬಂಧಿಸುವುದು ಯುದ್ಧ ಅಪರಾಧವಾಗಿದೆ. ಭಾರತವು ಇಂತಹ ಅಪರಾಧವನ್ನು ಮಾಡಲು, ಅಣೆಕಟ್ಟು ನಿರ್ಮಿಸಲು ಮುಂದಾದರೆ, ಜಗತ್ತಿನ ಎದುರು ಖಳನಾಯಕನಂತೆ ಬಿಂಬಿತವಾಗುತ್ತದೆ. ಯಾಕೆಂದರೆ, ಅರುಣಾಚಲ ಪ್ರದೇಶದ ಗಡಿ ಭಾಗದ ಸಮೀಪದಲ್ಲಿ ಯಾರ್ಲಂಗ್ ಸಂಗ್ಪೊ (ಬ್ರಹ್ಮಪುತ್ರ) ನದಿಗೆ ಬೃಹತ್ ಅಣೆಕಟ್ಟು ಕಟ್ಟಲು ಮುಂದಾಗಿರುವ ಚೀನಾವನ್ನು ಭಾರತ ವಿರೋಧಿಸುತ್ತಿದೆ. ಚೀನಾದ ನಡೆ ಭಾರತಕ್ಕೆ ಅಪಾಯಕಾರಿ ಎಂದು ವಾದಿಸುತ್ತಿದೆ. ಒಂದೆಡೆ, ತಾನೇ ಮತ್ತೊಂದು ರಾಷ್ಟ್ರ ಅಣೆಕಟ್ಟು ಕಟ್ಟುವುದನ್ನು ವಿರೋಧಿಸುತ್ತಾ, ಮತ್ತೊಂದೆಡೆ, ಇನ್ನೊಂದು ರಾಷ್ಟ್ರಕ್ಕೆ ನೀರು ಹರಿಯದಂತೆ ತಡೆಯಲು ಅಣೆಕಟ್ಟು ಕಟ್ಟುತ್ತೇವೆ ಎಂಬುದು ವಿರೋಧಾಬಾಸವೂ, ವಿಪರ್ಯಾಸವೂ, ಹಾಸ್ಯಾಸ್ಪದವೂ ಆಗುತ್ತದೆ. ಭಾರತ ಅಣೆಕಟ್ಟು ಕಟ್ಟಲು ಮುಂದಾದರೆ, ಚೀನಾಗೆ ಅಣೆಕಟ್ಟು ಕಟ್ಟಲು ಭಾರತವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ.
ಈ ವರದಿ ಓದಿದ್ದೀರಾ?: ಹತ್ಯೆಗೆ ಮುನ್ನ ಹೆಸರು ಕೇಳಿದ್ದೇಕೆ? ಪ್ರವಾಸಿಗರನ್ನೇ ಕೊಂದ ಮರ್ಮವೇನು
ಇಂತಹ ನಿರ್ಧಾರಗಳ ಕೆಟ್ಟ ಪರಿಣಾಮವೆಂದರೆ, ಭಾರತವು ಪಾಕಿಸ್ತಾನವನ್ನು ಲಷ್ಕರ್-ಎ-ತೈಬಾ (LeT) ರೀತಿಯ ಉಗ್ರಗಾಮಿ ಗುಂಪುಗಳು ಮತ್ತು ಪಾಕಿಸ್ತಾನಿ ಭದ್ರತಾ ಸಂಸ್ಥೆಯಲ್ಲಿರುವ ಉಗ್ರಗಾಮಿಗಳ ತೆಕ್ಕೆಗೆ ತಳ್ಳುತ್ತದೆ.
2010-15ರ ನಡುವೆ ಭಾರತ ಮತ್ತು ಪಾಕಿಸ್ತಾನ ನಡುವೆ ನೀರಿಗೆ ಸಂಬಂಧಿಸಿದಂತೆ ಹಲವಾರು ಸುತ್ತಿನ ಮಾತುಕತೆಗಳು ನಡೆದಿವೆ. ಆ ಸಂದರ್ಭದಲ್ಲಿ ಎಲ್‌ಇಟಿ ಸಂಸ್ಥಾಪಕ ಹಫೀಜ್ ಸಯೀದ್, ಸಿಂಧು ನೀರಿನ ವಿಚಾರವಾಗಿ ‘ನೀರು ಹರಿಯುತ್ತದೆ ಅಥವಾ ರಕ್ತ ಹರಿಯುತ್ತದೆ’ ಎಂದಿದ್ದರು. ಆತನ ಹೇಳಿಕೆಯು ಭಾರತ-ಪಾಕಿಸ್ತಾನ ನಡುವಿನ ಮಾತುಕತೆಯು ಒಪ್ಪಂದವನ್ನು ಮುಂದುವರೆಸುವ ನಿರ್ಧಾರ ಕೈಗೊಳ್ಳುವಂತೆ ಮಾಡಿತು. ಆದಾಗ್ಯೂ, 2016ರಲ್ಲಿ ಮೋದಿ ಸರ್ಕಾರವು ಸಿಂಧು ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ರೀತಿಯ ಮಾತನ್ನಾಡಲು ಆರಂಭಿಸಿತ್ತು. ಆಗಲೂ, ಅದೇ ರೀತಿಯ ಹೇಳಿಕೆಗಳನ್ನು ಎಲ್‌ಇಟಿ ನೀಡಿತ್ತು. ಈಗ, ಮತ್ತೆ ಒಪ್ಪಂದವನ್ನು ಸ್ಥಗಿತಗೊಳಿಸುವ ಮಾತನಾಡುತ್ತಿದೆ. ಭಾರತದ ಈ ಹೇಳಿಕೆ ಬಂದ ಬೆನ್ನಲ್ಲೇ, ಪಾಕಿಸ್ತಾನದ ಪ್ರಮುಖ ಮುಖ್ಯವಾಹಿನಿಯ ನಾಯಕರಲ್ಲಿ ಒಬ್ಬರಾದ ಬಿಲಾವಲ್ ಭುಟ್ಟೋ ಕೂಡ ಹಫೀಜ್ ಸಯೀದ್ ನೀಡಿದ್ದ ಹೇಳಿಕೆ ರೀತಿಯಲ್ಲೇ ಮಾತನಾಡುತ್ತಿದ್ದಾರೆ.
ಪಾಕಿಸ್ತಾನದ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳು ಉಗ್ರಗಾಮಿ ಗುಂಪುಗಳ ವಾಕ್ಚಾತುರ್ಯವನ್ನು ಅಳವಡಿಸಿಕೊಳ್ಳುವಂತೆ ಮಾಡುವುದು ಭಾರತದ ಭದ್ರತಾ ಹಿತಾಸಕ್ತಿಗಳ ಭಾಗವಾಗಿಲ್ಲ. ಪಾಕಿಸ್ತಾನದ ಮೇಲೆ ಒತ್ತಡ ಹೇರಲು ಭಾರತವು ಇಂತಹ ಘೋಷಣೆಗಳನ್ನು ಮಾಡುತ್ತಿರಬಹುದು. ಆದರೆ, ಇದು ಒತ್ತಡ ಹೇರುವುದಕ್ಕಿಂತ ಹಗೆತನವನ್ನು ಹೆಚ್ಚಿಸುತ್ತದೆ.
ಈ ಎಲ್ಲ ಕಾರಣಕ್ಕಾಗಿ, ಸಿಂಧು ಜಲ ಒಪ್ಪಂದವು ಪರಿಪೂರ್ಣವಾಗಿತ್ತು ಅಥವಾ ಪರಿಪೂರ್ಣವಾಗಿದೆ ಎಂದು ಅರ್ಥವಲ್ಲ. ಗಮನಾರ್ಹವಾಗಿ, 1960ರ ಭಾರತ ಮತ್ತು ಪಾಕಿಸ್ತಾನ ನಡುವಿನ ಜಲ ಒಪ್ಪಂದವು ಸಿಂಧು ನದಿ ಜಲಾನಯನ ಪ್ರದೇಶದ ಜಂಟಿ ನಿರ್ವಹಣೆಯ ಬದಲಾಗಿ, ವಿಭಜನೆಯನ್ನು ಆಯ್ಕೆ ಮಾಡಿದೆ. ಇದು ಅಂತರ್ಜಲವನ್ನು ನಿರ್ಲಕ್ಷಿಸಿದೆ, ಜನಸಂಖ್ಯಾ ಬದಲಾವಣೆ, ನೀರಿನ ಗುಣಮಟ್ಟ (ಮಾಲಿನ್ಯ) ಕುಸಿತವನ್ನು ನಿರ್ಲಕ್ಷಿಸಿದೆ.
ಕಳೆದ ದಶಕದಲ್ಲಿ ಮೋದಿ ಆಡಳಿತವು ಸಿಂಧೂ ಜಲ ಒಪ್ಪಂದದ ವಿರುದ್ಧ ತೆಗೆದುಕೊಂಡ ನಿರ್ಧಾರಗಳು ಭಾರತಕ್ಕೆ ಪ್ರತಿಕೂಲ ಪರಿಣಾಮ ಉಂಟುಮಾಡಿವೆ. ಸಾರ್ವಜನಿಕ ಅವಮಾನಗಳ ಸರಣಿಯನ್ನು ಎದುರಾಗಿಸಿದೆ. ಇತ್ತೀಚಿನ ಕ್ರಮಗಳು ವೈಫಲ್ಯದ ಹಾದಿಯಲ್ಲಿಯೇ ಮುಂದುವರೆದಿವೆ. ಹೀಗಾಗಿ, ಭಾರತ ಸರ್ಕಾರ ಅರ್ಥಾತ್ ಮೋದಿ ಸರ್ಕರವು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳುವುದೇ ಬುದ್ಧಿವಂತಿಕೆ ಲಕ್ಷಣವಾಗಿದೆ.
ಮೂಲ: ದಿ ವೈರ್
ಈ ಲೇಖನ ಇದೇ ವಿಷಯದ ಮೇಲಿನ thewire.in ನಲ್ಲಿ ಪ್ರಕಟವಾದ Omair Ahmed ಅವರ ಲೇಖನದ ಭಾವಾನುವಾದದಂತಿದೆ. ಆದರೆ ಮೂಲ ಲೇಖಕರ ಹೆಸರು ಎಲ್ಲೂ ಇಲ್ಲ ! ಪರಿಶೀಲಿಸುವುದು.