- ನೈರುತ್ಯ ಮಾನ್ಸೂನ್ ಮಾರುತದಿಂದ ದಕ್ಷಿಣ ಭಾರತದಲ್ಲಿ ಮಳೆ
- ಉತ್ತರ ಪ್ರದೇಶ, ರಾಜಸ್ಥಾನದಲ್ಲಿ ಶಾಖದ ಅಲೆಗಳ ಸ್ಥಿತಿ
ನೈರುತ್ಯ ಮಾನ್ಸೂನ್ ಹಿನ್ನೆಲೆ ದೇಶದಲ್ಲಿ ಮುಂಬರುವ ದಿನಗಳಲ್ಲಿ ಲಘು ಹಾಗೂ ಭಾರೀ ಪ್ರಮಾಣದ ನಡುವೆ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ ಎಂದು ಶನಿವಾರ (ಮೇ 20) ವರದಿಯಾಗಿದೆ.
ಐಎಂಡಿ ಇತ್ತೀಚೆಗೆ ಹೊರಡಿಸಿರುವ ಅಧಿಸೂಚನೆಯಲ್ಲಿ ಈ ಕುರಿತು ಮಾಹಿತಿ ನೀಡಿದೆ.
ಹವಾಮಾನ ಇಲಾಖೆಯು, ಬಂಗಾಳ ಕೊಲ್ಲಿಯ ಕೆಲವು ಭಾಗಗಳಲ್ಲಿ ನೈರುತ್ಯ ಮಾನ್ಸೂನ್ ಬೀಸುತ್ತಿರುವ ಹಿನ್ನೆಲೆ ವ್ಯಾಪಕ ಮಳೆಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ ಎಂದು ಅಧಿಸೂಚನೆಯಲ್ಲಿ ಹೇಳಿದೆ.
ಅಲ್ಲದೆ ಇಂದು ಹಾಗೂ ನಾಳೆ ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಶಾಖದ ಅಲೆಗಳ ಪರಿಸ್ಥಿತಿ ಇರಲಿದೆ. ಛತ್ತೀಸಗಢ್ ಜಾರ್ಖಂಡ್‌ನಲ್ಲಿ ನಾಳೆಯ ನಂತರವೂ ಬಿಸಿ ಗಾಳಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ.
ಇಂದು ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೊಂಕಣ ಪ್ರದೇಶದಲ್ಲಿ ಇನ್ನೂ ನಾಲ್ಕು ದಿನ ಶಾಖ ಹಾಗೂ ಅಹಿತಕರ ವಾತಾವರಣ ಇರಲಿದೆ.
ನೈರುತ್ಯ ಮಾನ್ಸೂನ್ ಮಾರುತ ಹಿನ್ನೆಲೆ ದಕ್ಷಿಣ ಭಾರತದ ಬಹುತೇಕ ಭಾಗಗಳಲ್ಲಿ ಮುಂದಿನ ನಾಲ್ಕು ದಿನ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ.
ಮೇ 22 ಮತ್ತು 23 ರಂದು ಉತ್ತರ ಪ್ರದೇಶ ಮತ್ತು ರಾಜಸ್ಥಾನ ಪ್ರದೇಶಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಸಾಕಷ್ಟು ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.
ಇದೇ ರೀತಿಯ ಪರಿಸ್ಥಿತಿ ಛತ್ತೀಸ್‌ಗಢದಲ್ಲಿ ಮುಂದಿನ ನಾಲ್ಕು ದಿನ ಇರಲಿದೆ ಎಂದು ಐಎಂಡಿ ಹೇಳಿದೆ.
ಈ ಸುದ್ದಿ ಓದಿದ್ದೀರಾ? ಬ್ರಿಜ್ ಭೂಷಣ್ ಸಿಂಗ್ ರಕ್ಷಿಸಲು ಪ್ರಧಾನಿ ಮೋದಿ ಯತ್ನ: ರಣದೀಪ್ ಸುರ್ಜೇವಾಲಾ
ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನ ಪ್ರದೇಶಗಳಲ್ಲಿ ಇಂದು ಮತ್ತು ಮೇ 23 ರಂದು ಭಾರೀ ಮಳೆಯಾಗುವ ಮುನ್ಸೂಚನೆ ಇದೆ.
ನೈರುತ್ಯ ಮಾನ್ಸೂನ್ ಮಾರುತದಿಂದ ಅಸ್ಸಾಂ ಹಾಗೂ ಮೇಘಾಲಯದಲ್ಲಿ ಮೇ 23 ರಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.