ದೇಶಾದ್ಯಂತ ಕೇವಲ ಒಂದು ದಿನ ತೀವ್ರ ಬಿಸಿಲು ದಾಖಲಾದರೂ ಸುಮಾರು 3,400 ಹೆಚ್ಚುವರಿ ಸಾವುಗಳು ಸಂಭವಿಸುತ್ತವೆ. ಒಂದು ವೇಳೆ ಸತತ 5 ದಿನಗಳ ಕಾಲ ಶಾಖದ ಅಲೆ ಮುಂದುವರಿದರೆ, ದೇಶದಲ್ಲಿ ಸುಮಾರು 30,000 ಜನರು ಬಿಸಿಲಿನ ತಾಪಕ್ಕೆ ಬಲಿಯಾಗುತ್ತಾರೆ.
ಇತ್ತೀಚಿನ ವರ್ಷಗಳಲ್ಲಾಗುತ್ತಿರುವ ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಉಂಟಾಗುತ್ತಿರುವ ಹೀಟ್ವೇವ್ಗಳನ್ನ ಸಾಮಾನ್ಯ ವಿದ್ಯಮಾನವಾಗಿ ನೋಡಲಾಗುತ್ತಿಲ್ಲ. ಅಧ್ಯಯನಗಳ ಪ್ರಕಾರ, ಇದು ದೇಶದಾದ್ಯಂತ ಸದ್ದಿಲ್ಲದೆ ಸಾವಿರಾರು ಜನರ ಪ್ರಾಣಹರಣ ಮಾಡುತ್ತಿರುವ ಜಾಗತಿಕ ಆರೋಗ್ಯ ತುರ್ತುಸ್ಥಿತಿಯಾಗಿ ಮಾರ್ಪಟ್ಟಿದೆ. ತಾಪಮಾನ ಮಿತಿಮೀರಿ ಹೆಚ್ಚಾದಾಗ ಸಂಭವಿಸುವ ಇಂತಹ ಸಾವುಗಳನ್ನು ವೈದ್ಯಕೀಯ ಮತ್ತು ಸಂಶೋಧನಾ ವಲಯದಲ್ಲಿ ‘ಹೆಚ್ಚುವರಿ ಸಾವುಗಳು’ (Excess Deaths) ಎಂದು ಗುರುತಿಸಲಾಗುತ್ತದೆ.
ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ‘ಇಂಡಿಯಾ ಎನರ್ಜಿ ಆಂಡ್ ಕ್ಲೈಮೇಟ್ ಸೆಂಟರ್’ನ ಸಂಶೋಧಕರಾದ ಪಿಯೂಷ್ ನಾರಂಗ್ ಮತ್ತು ಅಶೋಕ್ ಗಾಡ್ಗೀಳ್ ಅವರು ನಡೆಸಿರುವ ಇತ್ತೀಚಿನ ಜಂಟಿ ಅಧ್ಯಯನವು ಭಾರತದಲ್ಲಿನ ಶಾಖದ ಅಲೆಗಳ ಭೀಕರತೆಯನ್ನು ಬಿಚ್ಚಿಟ್ಟಿದೆ.
ಅಮೆರಿಕದ ‘ಫ್ರಾಂಟಿಯರ್ಸ್ ಇನ್ ಎನ್ವಿರಾನ್ಮೆಂಟಲ್ ಹೆಲ್ತ್’ ಜರ್ನಲ್ನಲ್ಲಿ ಪ್ರಕಟವಾಗಿರುವ ಈ ವರದಿಯು ಭಾರತದ ಜಿಲ್ಲಾ ಮಟ್ಟದ ನಾಗರಿಕ ನೋಂದಣಿ ವ್ಯವಸ್ಥೆ (CRS) ಮತ್ತು ಜನಸಂಖ್ಯೆಯ ಪ್ರಕ್ಷೇಪಣಗಳನ್ನು ಆಧರಿಸಿ ಕೆಲ ಅಂಕಿ-ಅಂಶಗಳನ್ನು ನೀಡಿದೆ.

ದೇಶದಾದ್ಯಂತ ಕೇವಲ ಒಂದು ದಿನ ತೀವ್ರ ಬಿಸಿಲು ದಾಖಲಾದರೂ ಸುಮಾರು 3,400 ಹೆಚ್ಚುವರಿ ಸಾವುಗಳು ಸಂಭವಿಸುತ್ತವೆ. ಒಂದು ವೇಳೆ ಸತತ 5 ದಿನಗಳ ಕಾಲ ಶಾಖದ ಅಲೆ ಮುಂದುವರಿದರೆ, ದೇಶದಲ್ಲಿ ಸುಮಾರು 30,000 ಜನರು ಬಿಸಿಲಿನ ತಾಪಕ್ಕೆ ಬಲಿಯಾಗುತ್ತಾರೆ. ಐದು ದಿನಗಳ ಶಾಖದ ಅಲೆಯ ಅವಧಿಯಲ್ಲಿ ಕೇವಲ ಉತ್ತರ ಪ್ರದೇಶ ಒಂದರಲ್ಲೇ ಅಂದಾಜು 8,100 ಹೆಚ್ಚುವರಿ ಸಾವುಗಳು ಸಂಭವಿಸುತ್ತವೆ. ಅಹಮದಾಬಾದ್, ಜೈಪುರ ಮತ್ತು ಸೂರತ್ನಂತಹ ಪ್ರಮುಖ ನಗರಗಳ ಒಂದೊಂದು ಜಿಲ್ಲೆಯಲ್ಲೇ ತಲಾ 250ಕ್ಕೂ ಹೆಚ್ಚು ಜನರು ಒಂದೇ ಶಾಖದ ಅಲೆಯ ಘಟನೆಗೆ ಬಲಿಯಾಗುತ್ತಿದ್ದಾರೆ. ಭಾರತದ ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗವನ್ನು ಹೊಂದಿರುವ ದೇಶದ ಪ್ರಮುಖ 100 ಜಿಲ್ಲೆಗಳಲ್ಲೇ ಶೇ. 44 ರಷ್ಟು ಹೆಚ್ಚುವರಿ ಸಾವುಗಳು ಸಂಭವಿಸುತ್ತಿವೆ.
ಈ ಸಂಶೋಧನೆಯು ಭಾರತದಲ್ಲಿನ ಸಾಮಾಜಿಕ-ಆರ್ಥಿಕ ಅಸಮಾನತೆಯ ಮೇಲೆ ಬೆಳಕು ಚೆಲ್ಲಿದೆ. ದೇಶದಲ್ಲಿ ಬಿಸಿಲಿನ ತಾಪದಿಂದ ಅತಿ ಹೆಚ್ಚು ಸಾವುಗಳು ಸಂಭವಿಸುವ ಮೊದಲ 5 ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಗುಜರಾತ್ ಒಟ್ಟಾಗಿ ದೇಶದ ಒಟ್ಟು ಹೆಚ್ಚುವರಿ ಸಾವುಗಳಲ್ಲಿ ಶೇ. 66ರಷ್ಟು ಪಾಲು ಹೊಂದಿವೆ.
ಆದರೆ, ಆತಂಕಕಾರಿ ವಿಷಯವೆಂದರೆ ಈ ರಾಜ್ಯಗಳು ಭಾರತದ ಒಟ್ಟು ಜಿಡಿಪಿಗೆ (GDP) ನೀಡುವ ಕೊಡುಗೆ ಕೇವಲ ಶೇ. 29ರಷ್ಟು ಮಾತ್ರ. ಇದರರ್ಥ, ಆರ್ಥಿಕವಾಗಿ ಹಿಂದುಳಿದಿರುವ ಮತ್ತು ಹವಾಮಾನ ವೈಪರೀತ್ಯಕ್ಕೆ ತಕ್ಕಂತೆ ಹೊಂದಿಕೊಳ್ಳುವ ಆರ್ಥಿಕ ಸಾಮರ್ಥ್ಯ ಕೂಡ ಕಡಿಮೆ ಇರುವ ರಾಜ್ಯಗಳ ಮೇಲೆಯೇ ಶಾಖದ ಅಲೆಯ ಪರಿಣಾಮ ತೀವ್ರವಾಗಿದೆ.
ಏನಿದು ‘ಹೆಚ್ಚುವರಿ ಸಾವುಗಳು’?
ಯಾವುದೇ ಒಂದು ನಿರ್ದಿಷ್ಟ ಅವಧಿಯಲ್ಲಿ (ಉದಾಹರಣೆಗೆ ತೀವ್ರ ಬೇಸಿಗೆಯಲ್ಲಿ) ಸಂಭವಿಸಬಹುದಾದ ಸಾಮಾನ್ಯ ಸಾವಿನ ಪ್ರಮಾಣಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಾವುಗಳು ದಾಖಲಾದರೆ, ಅದನ್ನು ‘ಹೆಚ್ಚುವರಿ ಸಾವುಗಳು’ ಎನ್ನಲಾಗುತ್ತದೆ. ಅಂದರೆ ಹಳೆಯ ದತ್ತಾಂಶಗಳ ಆಧಾರದ ಮೇಲೆ ನಿರೀಕ್ಷಿಸಬಹುದಾದ ಸಾಮಾನ್ಯ ಮರಣ ಪ್ರಮಾಣಕ್ಕಿಂತ ಹೆಚ್ಚಿನ ಸಾವುಗಳು ಇಲ್ಲಿ ಸಂಭವಿಸುತ್ತವೆ.
ಮಾನ ದೇಹದ ಸಾಮಾನ್ಯ ಆಂತರಿಕ ತಾಪಮಾನ (Core Body Temperature 37°C ಇರುತ್ತದೆ. ಆದರೆ, ಸುತ್ತಲಿನ ತೀವ್ರ ಬಿಸಿಲಿನ ಕಾರಣದಿಂದ ದೇಹದ ಒಳಗಿನ ತಾಪಮಾನ 40°C ಅಥವಾ ಅದಕ್ಕಿಂತ ಹೆಚ್ಚಾದಾಗ ದೇಹದ ಆಂತರಿಕ ಅಂಗಗಳು ಮತ್ತು ಮೆದುಳು ನಿಷ್ಕ್ರಿಯಗೊಳ್ಳಲು ಆರಂಭಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಉತ್ತರ, ಮಧ್ಯ ಮತ್ತು ಪೂರ್ವ ಭಾರತದ ರಾಜ್ಯಗಳಲ್ಲಿ ತಾಪಮಾನ ಸತತವಾಗಿ 45 ಡಿಗ್ರಿ ಸೆಲ್ಸಿಯಸ್ ದಾಟುತ್ತಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ.
ಅತಿಯಾದ ಶಾಖವಿರುವಾಗ ದೇಹವನ್ನು ತಂಪಾಗಿಸಲು ಹೃದಯವು ಹೆಚ್ಚು ವೇಗವಾಗಿ ರಕ್ತವನ್ನು ಪಂಪ್ ಮಾಡಬೇಕಾಗುತ್ತದೆ. ಇದರಿಂದಾಗಿ ಈಗಾಗಲೇ ಆರೋಗ್ಯ ಸಮಸ್ಯೆ ಇರುವವರಲ್ಲಿ ಅಂಗಾಂಗ ವೈಫಲ್ಯ ಉಂಟಾಗಿ ಸಾವು ಸಂಭವಿಸುತ್ತದೆ. ರಣಬಿಸಿಲಿನಿಂದ ದೇಹದಲ್ಲಿನ ನೀರಿನ ಮತ್ತು ಲವಣಾಂಶಗಳ ಪ್ರಮಾಣ ಕಡಿಮೆಯಾಗಿ ರಕ್ತದೊತ್ತಡ ತೀವ್ರವಾಗಿ ಕುಸಿಯುತ್ತದೆ.
“ಕೇಂದ್ರ ಸರ್ಕಾರವು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA) ಮತ್ತು ಹವಾಮಾನ ಬದಲಾವಣೆಯ ರಾಷ್ಟ್ರೀಯ ಕ್ರಿಯಾ ಯೋಜನೆ (NAPCC) ಅಡಿಯಲ್ಲಿ ನೀಡುವ ಹವಾಮಾನ ಅನುದಾನವನ್ನು ಕೇವಲ ಜನಸಂಖ್ಯೆಯ ಆಧಾರದ ಮೇಲೆ ಹಂಚಬಾರದು. ಬದಲಿಗೆ, ಬಿಸಿಲಿನ ತೀವ್ರ ಹೊರೆ ಹೊತ್ತಿರುವ, ಆದರೆ ಆರ್ಥಿಕವಾಗಿ ಹಿಂದುಳಿದಿರುವ ರಾಜ್ಯಗಳಿಗೆ ಹೆಚ್ಚಿನ ಆದ್ಯತೆಯ ಮೇಲೆ ಹಣಕಾಸಿನ ನೆರವು ನೀಡಬೇಕು” ಎನ್ನುತ್ತಾರೆ ಸಂಶೋಧಕರಾದ ಪಿಯೂಷ್ ನಾರಂಗ್ ಮತ್ತು ಅಶೋಕ್ ಗಾಡ್ಗೀಳ್.

ಆಡಳಿತ ವ್ಯವಸ್ಥೆ ಕೈಗೊಳ್ಳಲೇಬೇಕಾಗಿರುವ ಕ್ರಮ:
- ಜಿಲ್ಲಾ ಮಟ್ಟದಲ್ಲಿ ತಂಪು ಆಶ್ರಯ ಕೇಂದ್ರಗಳು, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಆಸ್ಪತ್ರೆಗಳಲ್ಲಿ ತುರ್ತು ಹೀಟ್-ಸ್ಟ್ರೋಕ್ ವಾರ್ಡ್ಗಳನ್ನು ಕೂಡಲೇ ಸಜ್ಜುಗೊಳಿಸುವುದು.
- ಬಿಸಿಲಿನಲ್ಲಿ ಕೆಲಸ ಮಾಡುವ ಕಾರ್ಮಿಕರು ನಿಯಮಿತವಾಗಿ ನೀರು, ಮಜ್ಜಿಗೆ, ಅಥವಾ ಒಆರ್ಎಸ್ (ORS) ದ್ರಾವಣವನ್ನು ಸೇವಿಸುವಂತೆ ಪ್ರೇರೇಪಿಸುವುದು.
- ನಗರಗಳಲ್ಲಿ ಕಾಂಕ್ರೀಟ್ ಶಾಖ ಕಡಿಮೆ ಮಾಡಲು ತಂಪು ಛಾವಣಿ ತಂತ್ರಜ್ಞಾನ ಮತ್ತು ಸಸ್ಯವರ್ಗವನ್ನು ಹೆಚ್ಚಿಸುವುದು.
ಇದನ್ನೂ ಓದಿ: ಆತ್ಮಹತ್ಯೆ ದರದಲ್ಲಿ ಸಿಲಿಕಾನ್ ಸಿಟಿಗೆ ಪ್ರಥಮ ಸ್ಥಾನ: ಕಳವಳಕಾರಿ ಮಾಹಿತಿ ಬಿಡುಗಡೆ ಮಾಡಿದ NCRB
ಇದರ ಹೊರತಾಗಿ ಸಾರ್ವಜನಿಕರೂ ಕೂಡ ಸಾಧ್ಯವಾದಷ್ಟು ನೇರ ಬಿಸಿಲಿಗೆ ಒಡ್ಡಿಕೊಳ್ಳುವುದನ್ನು ನಿಯಂತ್ರಿಸಬೇಕು. ಮಕ್ಕಳು, ವೃದ್ಧರನ್ನು ತುಸು ಹೆಚ್ಚು ಕಾಳಜಿಯಿಂದ ಆರೈಕೆ ಮಾಡಬೇಕು. ಉತ್ತರ ಪ್ರದೇಶ, ಬಿಹಾರದಂತಹ ಕಡಿಮೆ ಜಿಡಿಪಿ ಹೊಂದಿರುವ ಬಡ ರಾಜ್ಯಗಳು ಹವಾಮಾನ ವೈಪರೀತ್ಯದ ಗರಿಷ್ಠ ನಷ್ಟವನ್ನು ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA) ಮತ್ತು ಹವಾಮಾನ ಕ್ರಿಯಾ ಯೋಜನೆಗಳ (NAPCC) ಅಡಿಯಲ್ಲಿ ನೀಡುವ ಅನುದಾನವನ್ನು ಬಿಸಿಲಿನ ತೀವ್ರ ಆಘಾತ ಎದುರಿಸುತ್ತಿರುವ ಬಡ ರಾಜ್ಯಗಳಿಗೆ ಆದ್ಯತೆಯ ಮೇರೆಗೆ ಹಂಚಿಕೆ ಮಾಡಬೇಕಿದೆ. ಜಿಲ್ಲಾ ಮಟ್ಟದಲ್ಲಿ ನಿಖರ ದತ್ತಾಂಶಗಳ ಕ್ರೋಢೀಕರಣ, ಸ್ಥಳೀಯ ಮಟ್ಟದ ಹೀಟ್ ಆಕ್ಷನ್ ಪ್ಲಾನ್ಗಳ ಜಾರಿ, ಕಾಂಕ್ರೀಟ್ ಕಾಡುಗಳ ತಡೆಗೆ ಹಸಿರು ವಲಯಗಳ ನಿರ್ಮಾಣ ಮತ್ತು ತಳಮಟ್ಟದ ಜಾಗೃತಿ ಮಾತ್ರ ಮುಂದಿನ ದಿನಗಳಲ್ಲಿ ನಮ್ಮನ್ನು ರಕ್ಷಿಸಬಲ್ಲದು.




