ಸುಮನಸಾ ಕೊಡವೂರು (ರಿ.) ಸಂಸ್ಥೆಯ ರಜತ ಸಂಭ್ರಮ ಉದ್ಘಾಟನಾ ಸಮಾರಂಭ ಭಾನುವಾರ ಉಡುಪಿಯ ಕುಂಜಿಬೆಟ್ಟುವಿನ ಐವೈಸಿ ಸಭಾಂಗಣದಲ್ಲಿ ನಡೆಯಿತು. ಕಳೆದ 25 ವರ್ಷಗಳಿಂದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಯುವಜನ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಸಂಸ್ಥೆಯು ತನ್ನ ರಜತ ಸಂಭ್ರಮ ವರ್ಷವನ್ನು ವಿವಿಧ ಕಾರ್ಯಕ್ರಮಗಳ ಮೂಲಕ ಆಚರಿಸಲು ಚಾಲನೆ ನೀಡಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಜತ ಸಂಭ್ರಮ ಸಮಿತಿ ಅಧ್ಯಕ್ಷ ಹರಿಪ್ರಸಾದ್ ರೈ, “ವಿದ್ಯಾರ್ಥಿ ಜೀವನದಲ್ಲಿ ರಂಗ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವವರು ವೃತ್ತಿ ಜೀವನದಲ್ಲೂ ಉತ್ತಮ ಕೌಶಲ್ಯ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ರಂಗ ಚಟುವಟಿಕೆಗಳು ಇನ್ನಷ್ಟು ವಿಸ್ತಾರಗೊಳ್ಳಬೇಕಾಗಿದೆ. ಸುಮನಸಾ ಸಂಸ್ಥೆಯು 25 ವರ್ಷಗಳ ಯಶಸ್ವಿ ಪಯಣವನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಒಂದು ವರ್ಷದ ಅವಧಿಯಲ್ಲಿ 25 ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಗುರಿ ಹೊಂದಿದ್ದು, ಎಲ್ಲರ ಸಹಕಾರ ಅಗತ್ಯವಾಗಿದೆ” ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯಸ್ಪೆನ್ ಸ್ಪೆಶಲ್ ಎಕನಾಮಿಕ್ ಜೋನ್, ಪಡುಬಿದ್ರಿಯ ಹಿರಿಯ ಮಹಾ ಪ್ರಬಂಧಕ ಹಾಗೂ ಮುಖ್ಯಸ್ಥ ಅಶೋಕ್ ಕುಮಾರ್ ಶೆಟ್ಟಿ, “ನಿಸ್ವಾರ್ಥ ಸೇವೆ ಮತ್ತು ಸಾಮಾಜಿಕ ಕಳಕಳಿಯಿಂದ ಆರಂಭವಾದ ಸುಮನಸಾ ಇಂದು ಕೇವಲ ಒಂದು ಸಂಘಟನೆಯಾಗಿ ಉಳಿದಿಲ್ಲ. ಕೊಡವೂರಿನಲ್ಲಿ ಅಗ್ನಿ ಅವಘಡದಿಂದ ಸಂಕಷ್ಟಕ್ಕೊಳಗಾದ ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಹುಟ್ಟಿದ ಈ ತಂಡ, ಇಂದು ಸಾಂಸ್ಕೃತಿಕ, ಕಲಾ ಹಾಗೂ ಮಾನವೀಯ ಮೌಲ್ಯಗಳ ಬೆಳವಣಿಗೆಯ ಕೇಂದ್ರವಾಗಿ ರೂಪುಗೊಂಡಿದೆ. ಯುವಕರ ಪ್ರತಿಭೆಯನ್ನು ಗುರುತಿಸಿ ಅವರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಯಕ್ಷಗಾನ ಗುರು ಹಾಗೂ ಯಕ್ಷ ಸಂಜೀವ ಟ್ರಸ್ಟ್ನ ಅಧ್ಯಕ್ಷ ಬನ್ನಂಜೆ ಸಂಜೀವ ಸುವರ್ಣ ರಜತ ಸಂಭ್ರಮದ ಲಾಂಛನವನ್ನು ಅನಾವರಣಗೊಳಿಸಿ ಮಾತನಾಡಿ, “ಸುಮನಸಾ ಕೇವಲ ಸಂಘಟನೆಯಲ್ಲ, ಅದು ಒಂದು ಕುಟುಂಬವಾಗಿದೆ. ಸದಸ್ಯರೊಂದಿಗೆ ಕುಟುಂಬದವರೂ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವುದು ಅದರ ವಿಶೇಷತೆ. ಉಡುಪಿ ಜಿಲ್ಲೆಯ ಗಡಿಯನ್ನು ಮೀರಿ ಇತರ ಜಿಲ್ಲೆಗಳಲ್ಲಿಯೂ ಸಂಸ್ಥೆಯ ಕಾರ್ಯಚಟುವಟಿಕೆಗಳು ಗುರುತಿಸಿಕೊಂಡಿರುವುದು ಸಂತಸದ ವಿಚಾರ” ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ಮರಣಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, “ಉಡುಪಿ ಜಿಲ್ಲೆಯಲ್ಲಿ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಅನೇಕ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ ಸುಮನಸಾ ವಿಶಿಷ್ಟ ಸ್ಥಾನ ಪಡೆದಿದೆ. ಹಲವು ವರ್ಷಗಳಿಂದ ಈ ತಂಡದ ಕಾರ್ಯಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸುತ್ತಿದ್ದೇನೆ. ಯುವ ಸಮುದಾಯವನ್ನು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆ ಪ್ರತಿವರ್ಷ ಹೊಸ ಪ್ರಯೋಗಗಳ ಮೂಲಕ ಜನರಲ್ಲಿ ಕುತೂಹಲ ಮೂಡಿಸುತ್ತಿದೆ” ಎಂದು ಶ್ಲಾಘಿಸಿದರು.

ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿ ಸಂಸ್ಥೆಯ ಸಮಾಜಮುಖಿ ಕಾರ್ಯಗಳನ್ನು ಪ್ರಶಂಸಿಸಿದರು. ರಜತ ಸಂಭ್ರಮ ಸಮಿತಿಯ ಗೌರವಾಧ್ಯಕ್ಷ ಎಂ.ಎಲ್. ಸಾಮಗ ಶುಭ ಹಾರೈಸಿದರು. ಸುಮನಸಾ ಕೊಡವೂರು ಸಂಸ್ಥೆಯ ಗೌರವಾಧ್ಯಕ್ಷ ಎಂ.ಎಸ್. ಭಟ್ ಧನ್ಯವಾದ ಸಲ್ಲಿಸಿದರು. ವೇದಿಕೆಯಲ್ಲಿ ಸುಮನಸಾ ಕೊಡವೂರು ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಸಂಚಾಲಕ ಭಾಸ್ಕರ್ ಪಾಲನ್ ಬಾಚನಬೈಲು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದಯಾನಂದ್ ಉಪ್ಪೂರು ನಿರೂಪಿಸಿದರು.
ರಜತ ಸಂಭ್ರಮ ವರ್ಷದ ಅಂಗವಾಗಿ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಯುವಜನ ಅಭಿವೃದ್ಧಿಗೆ ಸಂಬಂಧಿಸಿದ 25 ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜದ ವಿವಿಧ ವರ್ಗಗಳನ್ನು ಒಗ್ಗೂಡಿಸುವ ಸಂಕಲ್ಪವನ್ನು ಸುಮನಸಾ ಸಂಸ್ಥೆ ವ್ಯಕ್ತಪಡಿಸಿದೆ. ಈ ಮೂಲಕ ಸಂಸ್ಥೆಯ 25 ವರ್ಷಗಳ ಸೇವಾ ಪಯಣಕ್ಕೆ ಹೊಸ ಆಯಾಮ ದೊರೆತಿದೆ.





