ತಮಿಳುನಾಡು ರಾಜಕಾರಣ | ಕರುಣಾನಿಧಿ, ಸ್ಟಾಲಿನ್ ನಂತರ ಸಿಎಂ ಕುರ್ಚಿಯತ್ತ ಉದಯನಿಧಿ?

Date:

Advertisements

ತಮಿಳುನಾಡು ರಾಜಕಾರಣದಲ್ಲಿ ಎಂ ಕರುಣಾನಿಧಿ ಕುಟುಂಬದಿಂದ ಮೂರನೇ ತಲೆಮಾರು ರಾಜ್ಯದ ಚುಕ್ಕಾಣಿ ಹಿಡಿಯಲು ಪೂರ್ವ ತಯಾರಿಯ ವೇದಿಕೆ ಸಿದ್ಧವಾಗುತ್ತಿದೆ. ಕೇವಲ ಐದು ವರ್ಷದ ಹಿಂದಷ್ಟೆ ಚುನಾವಣಾ ರಾಜಕೀಯಕ್ಕೆ ಕಾಲಿಟ್ಟು ಶಾಸಕ, ಮಂತ್ರಿಯಾಗಿದ್ದ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್‌ ಪುತ್ರ ಉದಯನಿಧಿ ಸ್ಟಾಲಿನ್‌ ಕೆಲವೇ ದಿನಗಳಲ್ಲಿ ಉಪ ಮುಖ್ಯಮಂತ್ರಿ ಪಟ್ಟ ಅಲಂಕರಿಸಲಿದ್ದಾರೆ. ಇವೆಲ್ಲವೂ ಸಿಎಂ ಹುದ್ದೆಗೆ ಪಟ್ಟ ಕಟ್ಟಲು ಪೂರ್ವಭಾವಿ ಯೋಜನೆ ಎಂದು ರಾಜಕಾರಣದಲ್ಲಿ ವಿಶ್ಲೇಷಿಸಲಾಗುತ್ತಿದೆ.

1967ರಲ್ಲಿ ಕಾಂಗ್ರೆಸ್‌ನ ಎಂ ಭಕ್ತವತ್ಸಲಂ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ನಂತರ ಕಳೆದ 57 ವರ್ಷಗಳ ತಮಿಳುನಾಡಿನ ರಾಜಕಾರಣವನ್ನು ದ್ರಾವಿಡ ಪಕ್ಷಗಳೆ ಆಳುತ್ತಿವೆ. ಎಷ್ಟೆ ಅವಿರತ ಪ್ರಯತ್ನ ಪಟ್ಟರೂ ರಾಷ್ಟ್ರೀಯ ಪಕ್ಷಗಳು ಕಳೆದ ಐದು ದಶಕಗಳಿಂದಲೂ ನೆಲೆಯೂರಲು ಸಾಧ್ಯವಾಗಿಲ್ಲ. ಡಿಎಂಕೆಯ ಮೊದಲ ಮುಖ್ಯಮಂತ್ರಿ ಅಣ್ಣಾದೊರೈ ನಿಧನದ ನಂತರ ಮುಖ್ಯಮಂತ್ರಿಯಾದ ಎಂ ಕರುಣಾನಿಧಿ ನಾಲ್ಕು ಬಾರಿ ಸಿಎಂ ಆಗಿ 18 ವರ್ಷಗಳಿಗೂ ಹೆಚ್ಚು ಕಾಲ ಆಳ್ವಿಕೆ ನಡೆಸಿದ್ದರು.

ಮತ್ತೊಂದು ದ್ರಾವಿಡ ಪಕ್ಷ ಎಐಎಡಿಎಂಕೆಯ ಪರಮೋಚ್ಛ ನಾಯಕರುಗಳಾದ ಎಂ ಜಿ ರಾಮಚಂದ್ರನ್‌, ಜಯಲಲಿತಾ ಅವರ ವಿರುದ್ಧದ ಹೋರಾಟದಲ್ಲಿ ಕರುಣಾನಿಧಿ ಹಲವು ಏಳುಬೀಳುಗಳನ್ನು ಕಂಡವರು.

Advertisements

ಡಿಸಿಎಂ ಆಗಿದ್ದ ಎಂ ಕೆ ಸ್ಟಾಲಿನ್‌

ತಂದೆಯ ಕೃಪಾಕಟಾಕ್ಷದ ಜೊತೆ 14ನೇ ವಯಸ್ಸಿನಿಂದಲೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಎಂ ಕೆ ಸ್ಟಾಲಿನ್‌ ಚೆನ್ನೈ ಮೇಯರ್‌, ಶಾಸಕ, ಮಂತ್ರಿಯಾಗಿ ಅನುಭವ ಹೊಂದಿದ್ದರು. ಕರುಣಾನಿಧಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ 2006ರಲ್ಲಿ ಮಂತ್ರಿಯಾಗಿದ್ದ ಸ್ಟಾಲಿನ್‌ ಅವರನ್ನು 2011ರಲ್ಲಿ ಬಡ್ತಿ ನೀಡಿ ಡಿಸಿಎಂ ಆಗಿ ನೇಮಕಗೊಳಿಸಲಾಗಿತ್ತು. ಸ್ಟಾಲಿನ್ ಕೂಡ 2009ರ ಲೋಕಸಭಾ ಚುನಾವಣೆಯ ನಂತರ ಸಂಪುಟದಲ್ಲಿ ಡಿಸಿಎಂ ಆಗಿ ಬಡ್ತಿ ಪಡೆದಿದ್ದರು.

ಈ ಸುದ್ದಿ ಓದಿದ್ದೀರಾ? ಉದಯನಿಧಿ ಸ್ಟಾಲಿನ್ ತಮಿಳುನಾಡಿನ ಡಿಸಿಎಂ ಆಗಿ ಆಯ್ಕೆಯಾಗುವ ಸಾಧ್ಯತೆ: ವರದಿ    

ಜಯಲಲಿತಾ ನಿಧನದ ನಂತರ ಎಐಎಡಿಎಂಕೆ ಪಕ್ಷದಲ್ಲಿ ಪಕ್ಷವನ್ನು ಮುನ್ನಡೆಸುವ ಪ್ರಬಲ ನಾಯಕರ ಕೊರತೆ ಎದುರಾಯಿತು. ಭ್ರಷ್ಟಾಚಾರ, ಆಂತರಿಕ ಕಚ್ಚಾಟದಿಂದಾಗಿ 2021ರ ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಅಣ್ಣಾ ಡಿಎಂಕೆ ಭಾರಿ ಸೋಲು ಅನುಭವಿಸಿತ್ತು. ಕರುಣಾನಿಧಿಯವರ ನಂತರ ಡಿಎಂಕೆಯ ನೇತೃತ್ವ ವಹಿಸಿದ್ದ ಪುತ್ರ ಎಂ ಕೆ ಸ್ಟಾಲಿನ್‌ ಪಕ್ಷದ ಗೆಲುವಿನೊಂದಿಗೆ ಮೊದಲ ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.

ಕರುಣಾನಿಧಿ ಮೂರನೇ ಕುಡಿ ರಾಜಕಾರಣಕ್ಕೆ  

ಎಂ ಕೆ ಸ್ಟಾಲಿನ್‌ ಪುತ್ರ ಉದಯನಿಧಿ ಆರಂಭದಲ್ಲಿ ಹೆಚ್ಚಾಗಿ ರಾಜಕಾರಣದಲ್ಲಿ ಗುರುತಿಸಿಕೊಂಡವರಲ್ಲ. ನಟನೆ, ನಿರ್ಮಾಪಕ, ವಿತರಕರಾಗಿ ಸಿನಿಮಾರಂಗದಲ್ಲಿ ಹೆಚ್ಚು ಹೆಸರಾದವರು. ತಮ್ಮದೆ ನಿರ್ಮಾಣ ಸಂಸ್ಥೆ ರೆಡ್‌ ಜೈಂಟ್‌ ಮೂವೀಸ್‌ ಮೂಲಕ ಹಲವು ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಕುಟುಂಬ ರಾಜಕೀಯ ಸೆಳೆತದ ಕಾರಣದಿಂದಲೋ ಏನೋ 2019ರ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆಯ ಯುವ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ರಾಜ್ಯದಾದ್ಯಂತ ಉದಯನಿಧಿ ಸುತ್ತಾಡಿ ಪಕ್ಷದ ಪರ ಪ್ರಚಾರ ನಡೆಸಿದ್ದರು. ಫಲಿತಾಂಶ ಪ್ರಕಟವಾದಾಗ ಡಿಎಂಕೆ ಒಟ್ಟು 39 ಕ್ಷೇತ್ರಗಳ ಪೈಕಿ 38 ಕ್ಷೇತ್ರಗಳಲ್ಲಿ ಗೆಲುವು ಗಳಿಸಿತ್ತು. ಡಿಎಂಕೆ ಹಲವು ಕ್ಷೇತ್ರಗಳಲ್ಲಿ ಜಯಗಳಿಸಲು ಉದಯನಿಧಿ ಸಂಘಟನೆ ಕೂಡ ಪ್ರಮುಖವಾಗಿತ್ತು.

ಇದೇ ಕಾರಣದಿಂದ 2021ರ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆಯ ಭದ್ರಕೋಟೆ ಚೆನ್ನೈನ ಚೆಪಾಕ್‌ ತಿರುವಲ್ಲಿಕೇಣಿ ಕ್ಷೇತ್ರದಿಂದ ಟಿಕೆಟ್ ನೀಡಲಾಯಿತು. ಕುಟುಂಬದ ಹಿನ್ನೆಲೆಯ ಜೊತೆ ಸ್ವಯಂ ಜನಪ್ರಿಯತೆಯೊಂದಿಗೆ ಭಾರಿ ಅಂತರದಿಂದ ಗೆದ್ದ ಉದಯನಿಧಿ ಮೊದಲ ಬಾರಿಗೆ ಶಾಸಕರಾದರು. ಇದರ ಜೊತೆ ರಾಜ್ಯದಲ್ಲಿ ಪ್ರವಾಸ ಕೈಗೊಂಡು ಹಿಂದೆ ಅಧಿಕಾರದಲ್ಲಿದ್ದ ಎಐಎಡಿಎಂಕೆ- ಬಿಜೆಪಿ ನೇತೃತ್ವದ ಸರ್ಕಾರದ ಹಲವು ಕ್ಷೇತ್ರಗಳನ್ನು ಡಿಎಂಕೆ ತೆಕ್ಕೆಗೆ ತೆಗೆದುಕೊಳ್ಳಲು ಶ್ರಮಿಸಿದ್ದರು. ಪಕ್ಷದ ಸಂಘಟನೆಯಲ್ಲಿ ಅತ್ಯುತ್ತಮವಾಗಿ ತೊಡಗಿಸಿಕೊಂಡಿದ್ದ 46 ವರ್ಷದ ಉದಯನಿಧಿ ಅವರನ್ನು ತಂದೆ ಎಂ ಕೆ ಸ್ಟಾಲಿನ್‌ ತಮ್ಮ ಸಂಪುಟದಲ್ಲಿ ಕ್ರೀಡಾ ಮಂತ್ರಿಯಾಗಿ ನೇಮಿಸಿಕೊಂಡರು.

ಕ್ರೀಡಾ ಮಂತ್ರಿಯಾದ ಉದಯನಿಧಿ ರಾಜ್ಯದಲ್ಲಿ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಡಿಎಂಕೆ ಪಕ್ಷ ಸಾಮಾಜಿಕ ಮಾಧ್ಯಮದಲ್ಲೂ ಬಹಳ ಸಕ್ರಿಯವಾಗಿದೆ. ಕಾರ್ಯಕರ್ತರು ಹಾಗೂ ಸಾಮಾನ್ಯ ಜನರ ಬೇಕುಬೇಡಗಳನ್ನು ಪೂರೈಸಲು ಡಿಎಂಕೆಯ ಸಾಮಾಜಿಕ ಮಾಧ್ಯಮ ಚುರುಕಾಗಿ ಕೆಲಸ ಮಾಡುತ್ತಿದೆ. ಇವೆಲ್ಲದರ ಹಿಂದೆ ಉದಯನಿಧಿ ಸ್ಟಾಲಿನ್‌ ಹೆಚ್ಚು ಕೆಲಸ ಮಾಡಿದ್ದಾರೆ.

ಈಗ ಉದಯನಿಧಿ ತಮಿಳುನಾಡು ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾಗಿ ನೇಮಕಗೊಳ್ಳುವುದು ಬಹುತೇಕ ಖಚಿತವಾಗಿದೆ. ಈ ನಡೆ ಮುಂದೆ ಸಿಎಂ ಹುದ್ದೆಗೆ ಕೂರಿಸುವ ಯೋಜನೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಮೂರು ವರ್ಷಗಳನ್ನು ಪೂರೈಸಿರುವ ಡಿಎಂಕೆ ಸರ್ಕಾರ ಇನ್ನೆರಡು ವರ್ಷಗಳಲ್ಲಿ ಚುನಾವಣೆಗೆ ಸಿದ್ದವಾಗಬೇಕಿದೆ. ಮುಂದಿನ ಚುನಾವಣೆಯಲ್ಲಿ ಒಂದು ವೇಳೆ ಡಿಎಂಕೆಯೇ ಅಧಿಕಾರಕ್ಕೆ ಬಂದರೆ ಉದಯನಿಧಿ ಮುಖ್ಯಮಂತ್ರಿಯಾಗಿ ನೇಮಕಗೊಳ್ಳಬಹುದು ಅಥವಾ ಮಧ್ಯಂತರ ಅವಧಿಯಲ್ಲಾದರೂ ಮುಖ್ಯಮಂತ್ರಿಯಾಗಿ ನೇಮಿಸುವ ಸಾಧ್ಯತೆ ಹೆಚ್ಚಿದೆ.

ಕೋಮುವಾದಿಗಳಿಗೆ ಬುದ್ಧಿ ಕಲಿಸಿದ್ದ ಉದಯನಿಧಿ

ಸೆಪ್ಟೆಂಬರ್ 2023 ರಲ್ಲಿ ಚೆನ್ನೈನಲ್ಲಿ ನಡೆದ ಸನಾತನ ವಿರೋಧಿ ಸಮ್ಮೇಳನದಲ್ಲಿ ಮಾತನಾಡಿದ ಉದಯನಿಧಿ ಸ್ಟಾಲಿನ್ ಕೋಮುವಾದಿಗಳಿಗೆ ತಮ್ಮ ಮಾತಿನ ಚಾಟಿಯ ಮೂಲಕ ಬುದ್ಧಿ ಕಲಿಸಿದ್ದರು. ”ನೀವು ಸನಾತನ ವಿರೋಧಿ ಸಮ್ಮೇಳನ ಎಂಬುದಾಗಿ ಆಯೋಜಿಸುವ ಬದಲು ಸನಾತನ ನಿರ್ಮೂಲನಾ ಸಮ್ಮೇಳನ ಎಂದು ಕಾರ್ಯಕ್ರಮ ಆಯೋಜಿಸಿದ್ದು ನನಗೆ ಇಷ್ಟವಾಯಿತು. ನಾವು ಕೆಲವು ವಿಷಯಗಳನ್ನು ವಿರೋಧಿಸುವ ಬದಲು ಅವುಗಳನ್ನು ನಿರ್ಮೂಲನೆ ಮಾಡುವುದೇ ಒಳ್ಳೆಯದು. ನಾವು ಡೆಂಘೀ, ಮಲೇರಿಯಾ ಅಥವಾ ಕೋವಿಡ್‌ ಸೋಂಕನ್ನು ವಿರೋಧಿಸಬಾರದು, ಅವುಗಳನ್ನು ನಿರ್ಮೂಲನೆ ಮಾಡಬೇಕು. ಹಾಗೆಯೇ ಸನಾತನ ಧರ್ಮವನ್ನೂ ನಾವು ವಿರೋಧಿಸಬಾರದು, ಬದಲು ನಿರ್ಮೂಲನೆ ಮಾಡಬೇಕು” ಎಂದಿದ್ದರು.

ಈ ಹೇಳಿಕೆಗೆ ಕೋಮುವಾದಿಗಳಿಂದ ವಿರೋಧ ವ್ಯಕ್ತವಾಯಿತಾದರೂ ಸಮಾಜಮುಖಿ ಚಿಂತನೆಯ ಕೋಟ್ಯಂತರ ಮಂದಿ ಉದಯನಿಧಿಗೆ ಬೆಂಬಲ ವ್ಯಕ್ತಪಡಿಸಿ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ್ದರು.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಾಂತ್ರಿಕ ದೋಷ: ಮತ್ತೊಂದು ಏರ್‌ ಇಂಡಿಯಾ ವಿಮಾನ ರದ್ದು, ವಾರದಲ್ಲೇ ಮೂರನೇ ಘಟನೆ

110 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಮುಂಬೈನಿಂದ ಜೋಧ್‌ಪುರಕ್ಕೆ ಹಾರುತ್ತಿದ್ದ ಏರ್‌ ಇಂಡಿಯಾ ವಿಮಾನವನ್ನು...

ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಕಳವಳ ವ್ಯಕ್ತಪಡಿಸಿದ ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್

ಬಿಹಾರದಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆ(SIR) ಬಗ್ಗೆ ನೊಬೆಲ್ ಪ್ರಶಸ್ತಿ ವಿಜೇತ...

ಹಿಂದೂ ಧರ್ಮ ಪ್ರಚಾರಕ ಪ್ರೇಮಾನಂದರಿಗೆ ತನ್ನ ಕಿಡ್ನಿ ದಾನ ಮಾಡಲು ಮುಂದಾದ ಮುಸ್ಲಿಂ ಯುವಕ

ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯ 26 ವರ್ಷದ ಮುಸ್ಲಿಂ ಯುವಕನೊಬ್ಬ ತನ್ನ ಒಂದು...

ಬಿಹಾರ ಎಸ್ಐಆರ್ | ʼಆಧಾರ್ʼ ಅನ್ನು ಪುರಾವೆಯಾಗಿ ಸ್ವೀಕರಿಸಲು ಚುನಾವಣಾ ಆಯೋಗಕ್ಕೆ ಸುಪ್ರೀಂ ನಿರ್ದೇಶನ

ಬಿಹಾರ ಎಸ್ಐಆರ್‌ಗೆ ಪುರಾವೆಯಾಗಿ ಆಧಾರ್ ಅನ್ನು ಸ್ವೀಕರಿಸಬೇಕು ಎಂದು ಸುಪ್ರೀಂ ಕೋರ್ಟ್...

Download Eedina App Android / iOS

X