ದೆಹಲಿ ವಿಶ್ವವಿದ್ಯಾಲಯದ ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್ (SRCC) ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣ ಹಾಗೂ ವಿರೋಧ ಪಕ್ಷಗಳ ಕುರಿತು ನೀಡಿದ ಹೇಳಿಕೆಗಳ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ‘X’ ನಲ್ಲಿ ಪ್ರಧಾನಿ ಮೋದಿಯವರನ್ನು ಉದ್ದೇಶಿಸಿ ಸರಣಿ ಟೀಕೆ ಮಾಡಿರುವ ಖರ್ಗೆ, “ಮೋದಿ ಜೀ, ನಾಯಕರು ತಲುಪಲು ಸಾಧ್ಯವಾಗದಷ್ಟು ದೂರ ಹೋದಾಗ (Out of reach) ಮಾತ್ರ ಜನರನ್ನು ತಲುಪುವ (Outreach) ಪ್ರಯತ್ನದ ಅಗತ್ಯ ಬೀಳುತ್ತದೆ” ಎಂದು ಚುಚ್ಚಿದ್ದಾರೆ.
ಇದನ್ನೂ ಓದಿ: ಅಮೆರಿಕ ದಾಳಿ: ಇರಾನ್ ಅಧ್ಯಕ್ಷರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ
ಎಸ್‌ಆರ್‌ಸಿಸಿ ಶೈಕ್ಷಣಿಕ ವೇದಿಕೆಯು ದೇಶದ ಯುವಕರು, ಶಿಕ್ಷಣ ಮತ್ತು ಅವರ ಭವಿಷ್ಯದ ಬಗ್ಗೆ ಮುಕ್ತ ಸಂವಾದ ನಡೆಸಲು ಸಿಕ್ಕ ಉತ್ತಮ ಅವಕಾಶವಾಗಿತ್ತು. ಆದರೆ, ಯುವಜನತೆಯ ನೈಜ ಪ್ರಶ್ನೆಗಳನ್ನು ಎದುರಿಸುವ ಬದಲು ಪ್ರಧಾನಿಯವರ ಭಾಷಣವು ಮತ್ತೊಂದು ರಾಜಕೀಯ ಪ್ರಚಾರದ ಶೈಲಿಗೆ ತಿರುಗಿತು ಎಂದು ಖರ್ಗೆ ಆರೋಪಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಸರ್ಕಾರವನ್ನು ಪ್ರಶ್ನಿಸುವುದನ್ನು ತಡೆಯಲು ಮತ್ತು ತಮ್ಮ ಆಡಳಿತಾತ್ಮಕ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ವಿರೋಧ ಪಕ್ಷಗಳಿಗೆ ಪ್ರತೀವರ್ಷ ಹೊಸ ಹೊಸ ಹೆಸರುಗಳನ್ನು ನೀಡುವುದು ಪ್ರಧಾನಿ ಮೋದಿಯವರ ‘ಕಾರ್ಯವಿಧಾನ’ ಆಗಿದೆ ಎಂದು ಖರ್ಗೆ ಟೀಕಿಸಿದ್ದಾರೆ.
‘ನರಾಜ್ ಫೂಫಾ’ (ಕೋಪಗೊಂಡ ಭಾವ), ‘ಅರ್ಬನ್ ನಕ್ಸಲ್’, ‘ಖಾನ್ ಮಾರ್ಕೆಟ್ ಗ್ಯಾಂಗ್’, ‘ಆಂದೋಲನಜೀವಿ’ ಮುಂತಾದ ಪದಗಳನ್ನು ಬಳಸುವುದರ ಮೂಲಕ ಸರ್ಕಾರವು ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ, ಆದರೆ ಸರ್ಕಾರದ ಜನವಿರೋಧಿ ನೀತಿಗಳು ಮಾತ್ರ ಬದಲಾಗುತ್ತಿಲ್ಲ ಎಂದು ಖರ್ಗೆ ದೂರಿದ್ದಾರೆ.
ಪ್ರಧಾನಿ ಮೋದಿ ಅವರು ತಮ್ಮ ಸರ್ಕಾರದ ಸಾಧನೆಗಳ ರಿಪೋರ್ಟ್ ಕಾರ್ಡ್ ತೋರಿಸುತ್ತಿದ್ದಾರೆ, ಆದರೆ ದೇಶದ ಯುವಜನರು ಸಹ ತಮ್ಮದೇ ಆದ ‘ರಿಪೋರ್ಟ್ ಕಾರ್ಡ್’ ಹಿಡಿದು ನಿಂತಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ. ಯುವಕರ ಈ ರಿಪೋರ್ಟ್ ಕಾರ್ಡ್‌ನಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸರ್ಕಾರಿ ಹುದ್ದೆಗಳ ನೇಮಕಾತಿ, ಪ್ರಶ್ನೆಪತ್ರಿಕೆ ಸೋರಿಕೆಯಿಂದ ಕಂಗೆಟ್ಟಿರುವ ವಿದ್ಯಾರ್ಥಿಗಳ ಭವಿಷ್ಯ, ದುಬಾರಿಯಾಗುತ್ತಿರುವ ಶಿಕ್ಷಣ ಮತ್ತು ಕಡಿಮೆಯಾಗುತ್ತಿರುವ ಸ್ಕಾಲರ್‌ಶಿಪ್‌ಗಳು, ವಿಶ್ವವಿದ್ಯಾಲಯಗಳ ಸ್ವಾಯತ್ತತೆಯ ಮೇಲಿನ ಒತ್ತಡ ಕಾಣುತ್ತಿದೆ ಎಂದು ಖರ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಪ್ರಮುಖ ಸಮಸ್ಯೆಗಳನ್ನು ಪಟ್ಟಿ ಮಾಡಿರುವ ಖರ್ಗೆ, “ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ವಿಷಯವನ್ನು ಮರೆಮಾಚಿ ಮಾತನಾಡುವುದರಿಂದ ಪರಿಹಾರ ಸಿಗುವುದಿಲ್ಲ” ಎಂದು ಪ್ರಧಾನಿಯವರಿಗೆ ಸಲಹೆ ನೀಡಿದ್ದಾರೆ.
ಮೋದಿ ಹೇಳಿದ್ದೇನು?
ದೆಹಲಿಯ ಎಸ್‌ಆರ್‌ಸಿಸಿ ಕಾಲೇಜಿನ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಸರ್ಕಾರದ ಪ್ರಮುಖ ಯೋಜನೆಗಳಾದ ‘ಸ್ಟ್ಯಾಚ್ಯೂ ಆಫ್ ಯೂನಿಟಿ’, ‘ಯುಪಿಐ’, ಹೈಸ್ಪೀಡ್ ರೈಲು ಹಾಗೂ ಹೊಸ ಸಂಸತ್ ಭವನ ನಿರ್ಮಾಣಗಳನ್ನು ವಿರೋಧಿಸುವವರನ್ನು ಎನ್ಆರ್‌ಐ ಅಥವಾ ಹಿರಿಯ ಕೋಪಿಷ್ಟ ಸಂಬಂಧಿಕರಿಗೆ (‘Angry Uncles’ / ‘Phoofas’) ಹೋಲಿಸಿ ವ್ಯಂಗ್ಯವಾಡಿದ್ದರು. ಪ್ರತಿಯೊಂದು ಹೊಸ ಕೆಲಸಕ್ಕೂ “ಇದರ ಅಗತ್ಯವೇನಿತ್ತು?” ಎಂದು ಪ್ರಶ್ನಿಸುವುದೇ ಇವರ ಕೆಲಸ ಎಂದು ಪ್ರಧಾನಿ ಟೀಕಿಸಿದ್ದರು. ಪ್ರಧಾನಿಯವರ ಈ ಹೇಳಿಕೆಗೆ ಪ್ರತಿಯಾಗಿ ಖರ್ಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.





