ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ವಿವಿಧ ಪರೀಕ್ಷೆಗಳ ಅಧ್ವಾನಕ್ಕೆ ಕಾರಣವಾದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ನಡೆಸುತ್ತಿದೆ. ಈ ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಸೇರಿದ್ದಾರೆ. ವಿದ್ಯಾರ್ಥಿಗಳು, ಯುವಜನರು ಮಾತ್ರವಲ್ಲದೆ, ಪ್ರತಿಭಟನೆಯಲ್ಲಿ ಪೋಷಕರು ಕೂಡಾ ಭಾಗಿಯಾಗಿದ್ದಾರೆ.
ಪ್ರತಿಭಟನೆಯಲ್ಲಿ ಡಿಬಿ ನ್ಯೂಸ್ ಎಂಬ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಪೋಷಕರೊಬ್ಬರು, “4ನೇ ತರಗತಿ ಪಾಸ್ ಆದವರನ್ನು ಪ್ರಧಾನಿ ಮಾಡಿ ದೊಡ್ಡ ತಪ್ಪು ಮಾಡಿದ್ದೇವೆ. ಈಗ ಪ್ರಧಾನಿ ಅವರನ್ನು ಕುರ್ಚಿಯಿಂದ ಕೆಳಗಿಳಿಸುವ ಸಮಯ ಬಂದಿದೆ ಎಂದು ಜನರು ಅರಿಯುವ ಸಮಯ ಬಂದಿದೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಶಿಕ್ಷಣ ಸಚಿವರು ರಾಜೀನಾಮೆ ನೀಡಲಿ: ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಆರಂಭ
“ದೇಶ ಸಂಕಟದಲ್ಲಿದೆ. ಆದ್ದರಿಂದ ಅಡುಗೆ ಎಣ್ಣೆ, ಚಿನ್ನ ಮೊದಲಾದವುಗಳನ್ನು ಖರೀದಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನೀವು ಪ್ರತಿಭಟನೆ ನಡೆಸಿ ಮೋದಿ ಅವರನ್ನು ಇನ್ನಷ್ಟೂ ಸಂಕಷ್ಟಕ್ಕೆ ಸಿಲುಕಿಸುತ್ತಿದ್ದೀರಾ?” ಎಂಬ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೋಷಕರೊಬ್ಬರು ಕೇಂದ್ರದ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
“ನಮಗೆ ಸಂಕಟ ನೀಡಿರುವುದು ಪ್ರಧಾನಿ ಮೋದಿ ಅವರು. ಅಮೆರಿಕಕ್ಕೆ ಹೋಗಿ ಡೊನಾಲ್ಡ್ ಟ್ರಂಪ್ ಮಾತನ್ನು ಕೇಳುವ ಪ್ರಧಾನಿ ಇಂದು ನಮ್ಮ ದೇಶವನ್ನುದ್ದೇಶಿಸಿ ಮಾತನಾಡಲಿ. ನಮ್ಮ ದೇಶದ ಜನರಿಗಾಗಿ, ನಮ್ಮ ಮಕ್ಕಳೊಂದಿಗೆ ನಿಲ್ಲುತ್ತೇನೆ ಎಂದು ಹೇಳಲಿ. ಬಡ ಜನರಲ್ಲಿ ಚಿನ್ನ ಇರುತ್ತದೆಯೆ” ಎಂದು ಪ್ರಶ್ನಿಸಿದ್ದಾರೆ.
“ಇಂದಿನ ಕಾಲದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಇರುವ ಚಿನ್ನವನ್ನೂ ನಾವು ಮಾರಬೇಕಾಗುತ್ತದೆ. ಭವಿಷ್ಯವೇ ಇಲ್ಲದಾಗ ನಾವು ಚಿನ್ನ ಎಲ್ಲಿಂದ ಖರೀದಿಸುವುದು? ಪಕೋಡಾ (ಬಜ್ಜಿ) ಮಾರಿ ಜೀವನ ನಡೆಸಿ ಎಂದು ಹೇಳುವವರು ನಮ್ಮ ಪ್ರಧಾನಿ. ಆದರೆ ಈಗ ಅಡುಗೆ ಎಣ್ಣೆಯನ್ನೇ ಕಡಿಮೆ ಬಳಸಿ ಎಂದು ಹೇಳುತ್ತಾರೆ. ನಾವು ಅಡುಗೆ ಎಣ್ಣೆಯನ್ನು ಹೆಚ್ಚು ಬಳಸಿದ್ದರೆ ಬಜ್ಜಿ ಮಾಡಿ ಮಾರುವುದಾದರೂ ಹೇಗೆ” ಎಂದು ವ್ಯಂಗ್ಯವಾಡಿದರು.
“ಈಗ ಮಕ್ಕಳು ಏನು ಮಾಡುವುದು ವಿದ್ಯಾಭ್ಯಾಸ ಪಡೆಯುವುದೋ ಬೇಡವೋ? 4ನೇ ತರಗತಿ ಪಾಸ್ ಆದವರನ್ನು ಪ್ರಧಾನಿ ಮಾಡಿ ದೊಡ್ಡ ತಪ್ಪು ಮಾಡಿದ್ವಿ. ಈಗ ಅವರನ್ನು ಅಧಿಕಾರದಿಂದ ಕೆಳಕ್ಕೆ ಇಳಿಸುವ ಸಮಯ ಬಂದಿದೆ ಎಂದು ಜನರು ಅರಿಯಬೇಕು” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ನೀಟ್ ಸೋರಿಕೆ | ಐವರ ಆತ್ಮಹತ್ಯೆ; ಶಿಕ್ಷಣ ಸಚಿವರು ರಾಜೀನಾಮೆ ನೀಡಲೇಬೇಕು: ಅಭಿಜೀತ್ ದೀಪ್ಕೆ
ಇನ್ನೋರ್ವ ಪೋಷಕರು, “ನಮ್ಮಂತಹ ಪೋಷಕರು ತಮ್ಮ ಚಿನ್ನವನ್ನು ಅಡವಿಟ್ಟು ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಾರೆ. ಆದರೆ ಈ ಸರ್ಕಾರ ಒಮ್ಮೆ ಪರೀಕ್ಷೆ ನಡೆಸುತ್ತದೆ, ಮತ್ತೊಮ್ಮೆ ಪರೀಕ್ಷೆ ರದ್ದು ಮಾಡುತ್ತದೆ. ನೀವು ಎಷ್ಟರವರೆಗೆ ಹಿಂದೂ ಮುಸ್ಲಿಂ ಎಂದು ಹೇಳಿಕೊಂಡು ನಮ್ಮ ಗಮನ ಬೇರೆಡೆ ಸೆಳೆಯಲು ಸಾಧ್ಯ? ಜನರಿಗೆ ಈಗ ಅರ್ಥವಾಗುತ್ತಿದೆ. ಯುವಜನರಿಗೆ ಎಲ್ಲವೂ ತಿಳಿಯುತ್ತಿದೆ” ಎಂದು ತಿಳಿಸಿದ್ದಾರೆ.
ಸಿಜೆಪಿ ಬೆಂಬಲಿಗೆ, ಯುವತಿಯೊಬ್ಬರು ಮಾತನಾಡಿ, “ನಮ್ಮ ಹಕ್ಕನ್ನು, ಸಮಸ್ಯೆಯನ್ನು ಪ್ರಶ್ನಿಸಿದ್ದಕ್ಕೆ ನಮ್ಮನ್ನು ಪಾಕಿಸ್ತಾನಿ, ದೇಶದ್ರೋಹಿ ಎನ್ನುತ್ತೀರಿ. ಇಷ್ಟೆಲ್ಲ ನಮ್ಮ ಮೇಲೆ ಅಪವಾದ ಹೊರಿಸುವುದಕ್ಕಿಂತ ನಮ್ಮನ್ನು ಗುಂಡಿಕ್ಕಿ ಸಾಯಿಸಿಬಿಡಿ. ವಿದ್ಯಾರ್ಥಿಗಳು, ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿಯನ್ನು ಸರ್ಕಾರ ಸೃಷ್ಟಿಸಿದೆ. ನಾವು ದೇಶ ಅಭಿವೃದ್ಧಿಯಾಗುವ ನಿರೀಕ್ಷೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದು. ಆದರೆ ಇಂದು ಈ ಸರ್ಕಾರ ಏನು ಮಾಡುತ್ತಿದೆ” ಎಂದು ಪ್ರಶ್ನಿಸಿದ್ದಾರೆ.
ಇನ್ನೋರ್ವ ವಿದ್ಯಾರ್ಥಿ, “ನನ್ನ ಸ್ನೇಹಿತ ಮೂರನೇ ಬಾರಿಗೆ ನೀಟ್ ಪರೀಕ್ಷೆ ಬರೆದಿದ್ದ. ಈ ಬಾರಿ ಪರೀಕ್ಷೆಯನ್ನು ಉತ್ತೀರ್ಣವಾಗುವ ಎಲ್ಲ ಭರವಸೆ ಆತನಿಗಿತ್ತು. ಆದರೆ ಈಗ ಪರೀಕ್ಷೆ ರದ್ದು ಮಾಡಲಾಗಿದೆ. ಈಗ ನನ್ನ ಸ್ನೇಹಿತ ಒತ್ತಡದಲ್ಲಿದ್ದಾನೆ, ಅಳುತ್ತಿದ್ದಾನೆ. ಮತ್ತೊಮ್ಮೆ ಪರೀಕ್ಷೆ ಬರೆಯಬೇಕಾಗಿದೆ. ಆತನ ಪರವಾಗಿ ನಾನು ಇಲ್ಲಿ ಪ್ರತಿಭಟನೆಗೆಯಲ್ಲಿ ಭಾಗಿಯಾಗಿದ್ದೇನೆ. ಇದಕ್ಕೆ ಯಾರು ಜವಾಬ್ದಾರಿ? ನಾವು ಕಟ್ಟಡ ನಿರ್ಮಾಣ ಕಾರ್ಯ ತಿಳಿಯದವರಿಂದ ಕೆಲಸ ಮಾಡಿಸುವುದಿಲ್ಲ ತಾನೇ? ಹಾಗಿದ್ದಾಗ ಶಿಕ್ಷಣ ವ್ಯವಸ್ಥೆಯನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗದವರು ಯಾಕೆ ಕೆಲಸ ಮಾಡಬೇಕು? ರಾಜೀನಾಮೆ ನೀಡಲಿ. ಸಮರ್ಥರು ಬಂದು ಕೆಲಸ ಮಾಡುತ್ತಾರೆ” ಎಂದು ಹೇಳಿದ್ದಾರೆ.





