ರಾಜಕೀಯದ ಸಂಧ್ಯಾಕಾಲದಲ್ಲಿರುವ ಹಿರಿಯ ನಾಯಕರೊಬ್ಬರು ಕಿರಿಯರಿಗೆ ಮಾರ್ಗದರ್ಶಕರಾಗಿ ನಿಲ್ಲುವ ಬದಲು ‘ಬೆದರಿಕೆ ತಂತ್ರ’ ಅನುಸರಿಸುತ್ತಿರುವುದು ಸರಿಯಲ್ಲ. ದಶಕಗಳ ಕಾಲ ಅಧಿಕಾರ ಉಂಡಿರುವ ಅವರು, ಹೊಸಬರಿಗೆ ಅವಕಾಶ ಮಾಡಿಕೊಟ್ಟು ಪಕ್ಷವನ್ನು ಸಂಘಟಿಸುವ ಬದಲು ರಾಜೀನಾಮೆಯ ಅಸ್ತ್ರ ಪ್ರಯೋಗಿಸುತ್ತಿದ್ದಾರೆ
ರಾಜ್ಯ ರಾಜಕಾರಣದಲ್ಲಿ ಇದೀಗ ಕಾಂಗ್ರೆಸ್‌ನ ಅತಿ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರ ನಡೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪ್ರಸ್ತುತ ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದಲೋ ಎಂಬಂತೆ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ವಿಚಾರ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಕೇವಲ ನಿರ್ದಿಷ್ಟ ಖಾತೆಗಾಗಿ ಅಥವಾ ಮಂತ್ರಿ ಸ್ಥಾನಕ್ಕಾಗಿ ಪಕ್ಷವನ್ನು ಮುಜುಗರಕ್ಕೀಡು ಮಾಡುವ ಇಂತಹ ನಡೆಗಳು ಸಾರ್ವಜನಿಕ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಇದು ಕೇವಲ ಒಂದು ಖಾತೆಯ ಮೇಲಿನ ಅಸಮಾಧಾನವೋ ಅಥವಾ ವ್ಯವಸ್ಥಿತ ರಾಜಕೀಯ ತಂತ್ರವೋ ಎಂಬ ಚರ್ಚೆಗಳು ಈಗ ಶುರುವಾಗಿದೆ.
ರಾಮಲಿಂಗಾರೆಡ್ಡಿ ಅವರು ಅಧಿಕಾರಕ್ಕಾಗಿ ಬಂಡಾಯದ ಬಾವುಟ ಹಾರಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ, ಉಭಯ ಪಕ್ಷಗಳ 17 ಶಾಸಕರು ರಾಜೀನಾಮೆ ನೀಡಿ ಬಂಡಾಯವೆದ್ದು, ಬಿಜೆಪಿ ಸೇರುವ ಮೂಲಕ ಸರ್ಕಾರವನ್ನು ಕೆಡವಿದ್ದರು. ಆ ನಿರ್ಣಾಯಕ ಹಾಗೂ ಬಿಕ್ಕಟ್ಟಿನ ಘಟ್ಟದಲ್ಲೂ ರಾಮಲಿಂಗಾರೆಡ್ಡಿ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ತುದಿಗಾಲಿನಲ್ಲಿ ನಿಂತಿದ್ದರು ಎಂಬ ಊಹಾಪೋಹಗಳು ಹರಿದಾಡಿದ್ದವು. ಅಧಿಕಾರಕ್ಕಾಗಿ ಪಕ್ಷ ನಿಷ್ಠೆಯನ್ನು ಬದಿಗೊತ್ತುವ ಇಂತಹ ಒಲವು ಅವರ ರಾಜಕೀಯ ತಂತ್ರಗಾರಿಕೆಯ ಒಂದು ಭಾಗವೇ ಆಗಿದೆ.
ಅವರ ಈ ಇಂದಿನ ನಡೆಗೂ, ಅವರ ಬೃಹತ್ ರಾಜಕೀಯ ಹಿನ್ನೆಲೆಗೂ ಭಾರಿ ವ್ಯತಿರಿಕ್ತತೆ ಇದೆ. ಎಪ್ಪತ್ತರ ದಶಕದಿಂದಲೇ ಸಕ್ರಿಯ ರಾಜಕಾರಣದಲ್ಲಿರುವ ಅವರು, 1989ರಿಂದ ಸತತ ಎಂಟು ಬಾರಿ ಶಾಸಕರಾಗಿ ಆಯ್ಕೆಯಾದವರು. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಹಲವು ಬಾರಿ ಮಂತ್ರಿಯಾಗಿ, ಗೃಹ, ಸಾರಿಗೆಯಂತಹ ಪ್ರಮುಖ ಖಾತೆಗಳನ್ನು ನಿಭಾಯಿಸಿದ ಅಪಾರ ಆಡಳಿತಾತ್ಮಕ ಅನುಭವ ಅವರಲ್ಲಿದೆ. ಅವರ ಪುತ್ರಿ ಕೂಡ ಒಮ್ಮೆ ಶಾಸಕಿಯಾಗಿದ್ದಾರೆ. ಇಷ್ಟೊಂದು ಅನುಭವವಿರುವ ಪಕ್ಷದ ಹಿರಿಯ ನಾಯಕರೊಬ್ಬರು ಈ ರೀತಿ ನಡೆದುಕೊಳ್ಳುತ್ತಿರುವುದು ಅಚ್ಚರಿ ಮೂಡಿಸಿದೆ.
ಇದನ್ನು ಓದಿದ್ದೀರಾ? ದೇವೇಗೌಡರ ರಾಜ್ಯಸಭೆ ಹಾದಿಗೆ ಅಡ್ಡಿಯಾಗಿರುವವರು ಯಾರು?
ಈ ಹೈಡ್ರಾಮಾ ಹಾಗೂ ಅಸಮಾಧಾನದ ಹಿಂದಿನ ಅಸಲಿ ಕಾರಣ ಬೆಂಗಳೂರು ನಗರಾಭಿವೃದ್ಧಿ ಖಾತೆಯ ಮೇಲಿನ ವ್ಯಾಮೋಹ ಹಾಗೂ ಆಂತರಿಕ ಪೈಪೋಟಿ. ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಕಂದಾಯ ಸಚಿವರಾಗಿರುವ ಕೃಷ್ಣ ಬೈರೇಗೌಡ ಅವರು ಆಡಳಿತದಲ್ಲಿ ಚುರುಕುತನ ತಂದು, ಜನಪರ ಕೆಲಸಗಳ ಮೂಲಕ ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದಾರೆ. ಉತ್ತಮವಾಗಿ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿರುವ ಕೃಷ್ಣ ಬೈರೇಗೌಡರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಮಣೆ ಹಾಕಿರುವುದು ರಾಮಲಿಂಗಾರೆಡ್ಡಿ ಅವರ ಹತಾಶೆಗೆ ಮುಖ್ಯ ಕಾರಣವಾಗಿದೆ ಎನ್ನಲಾಗುತ್ತಿದೆ.
ಪಕ್ಷದ ಈ ನಿರ್ಧಾರದ ಹಿಂದೆ ಮುಂಬರುವ ಜಿಬಿಎ (ಗ್ರೇಟರ್ ಬೆಂಗಳೂರು ಪ್ರಾಧಿಕಾರ) ಚುನಾವಣೆಯ ಕಾರ್ಯತಂತ್ರವೂ ಅಡಗಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಜನಮನ್ನಣೆ ಗಳಿಸಿರುವ ಮತ್ತು ಕಂದಾಯ ಇಲಾಖೆಯಲ್ಲಿ ಗಮನಾರ್ಹ ಸುಧಾರಣೆ ತಂದಿರುವ ಕೃಷ್ಣ ಬೈರೇಗೌಡರಂತಹ ನಾಯಕರ ಅಗತ್ಯ ಪಕ್ಷಕ್ಕಿದೆ. ಹೀಗಾಗಿಯೇ, ಬೆಂಗಳೂರಿನ ಹಳೆಯ ಹಾಗೂ ಹಿರಿಯ ನಾಯಕರಾಗಿದ್ದರೂ, ಬದಲಾದ ಸನ್ನಿವೇಶದಲ್ಲಿ ಪಕ್ಷವು ಕಾರ್ಯಕ್ಷಮತೆ ಮತ್ತು ಜನಪ್ರಿಯತೆಗೆ ಹೆಚ್ಚು ಒತ್ತು ನೀಡಿದೆ.
72 ವಯಸ್ಸಿನ ರಾಮಲಿಂಗಾರೆಡ್ಡಿ ಅವರು ರಾಜಕೀಯದ ಸಂಧ್ಯಾಕಾಲದಲ್ಲಿದ್ದಾರೆ. ಕಿರಿಯರಿಗೆ ಮಾರ್ಗದರ್ಶಕರಾಗಿ ನಿಲ್ಲುವ ಬದಲು ‘ಬೆದರಿಕೆ ತಂತ್ರ’ ಅನುಸರಿಸುತ್ತಿರುವುದು ಸರಿಯಲ್ಲ. ದಶಕಗಳ ಕಾಲ ಅಧಿಕಾರ ಉಂಡಿರುವ ಅವರು, ಹೊಸಬರಿಗೆ ಅವಕಾಶ ಮಾಡಿಕೊಟ್ಟು ಪಕ್ಷವನ್ನು ಸಂಘಟಿಸುವ ಬದಲು ರಾಜೀನಾಮೆಯ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಇದು ಅವರ ಇಷ್ಟುವರ್ಷಗಳ ಘನತೆಗೆ ಕುಂದು ತರುವುದರ ಜೊತೆಗೆ, ಅಧಿಕಾರ ಲಾಲಸೆಯ ರಾಜಕಾರಣಕ್ಕೆ ಸ್ಪಷ್ಟ ನಿದರ್ಶನವಾಗಿ ಗೋಚರಿಸುತ್ತಿದೆ.





