ಗಂಡು ಮೇಲೆಂಬ ಈ ರೋಗಗ್ರಸ್ತ ಸಮಾಜದಲ್ಲಿ ಹೆಣ್ಣನ್ನು ಭೋಗದ ವಸ್ತುವಾಗಿ, ಸಂತೋಷದ ಸರಕಿನಂತೆ ನೋಡಲಾಗುತ್ತಿದೆ. ದೇಶದಲ್ಲಿ ಕಾಮ ಪಿಪಾಸುಗಳು ತಮ್ಮ ತೆವಲು ತೀರಿಸಿಕೊಳ್ಳಲು ಮಹಿಳೆಯರ ಮೇಲೆ ಮಾತ್ರವಲ್ಲದೇ, ಪುಟ್ಟ ಕಂದಮ್ಮಗಳು, ಬಾಲಕಿಯರ ಮೇಲೂ ಕ್ರೌರ್ಯ ಮೆರೆಯುತ್ತಿದ್ದಾರೆ. ಪುಟ್ಟಕಂದಮ್ಮಗಳಿಗೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಹಿಂಸೆ ನೀಡಲಾಗುತ್ತಿದೆ. ದಿನದಿಂದ ದಿನಕ್ಕೆ ಈ ಪ್ರಕರಣಗಳು ಹೆಚ್ಚುತ್ತಿವೆಯೇ ಹೊರತು ಇಂದಿಗೂ ಕೂಡ ಕಡಿಮೆಯಾಗಿಲ್ಲ. ಇದೀಗ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟಲು ಸುಪ್ರೀಂ ಕೋರ್ಟ್ ಮತ್ತೊಂದು ಮಹತ್ವದ ಹೆಜ್ಜೆಯಿಟ್ಟಿದ್ದು, ಇರುವ ಪೋಕ್ಸೋ ಕಾನೂನನ್ನು ಮತ್ತಷ್ಟು ಬಲಪಡಿಸಿ ಮಹತ್ವದ ತೀರ್ಪು ನೀಡಿದೆ.
ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ ಹಾಗೂ ಅಶ್ಲೀಲತೆಯ ಅಪರಾಧಗಳಿಂದ ಮಕ್ಕಳ ರಕ್ಷಣೆಗಾಗಿ ಒಂದು ದೃಢವಾದ ಕಾನೂನು ಚೌಕಟ್ಟನ್ನ ಒದಗಿಸಲು ‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ’ಯನ್ನು 2012ರಲ್ಲಿ ಜಾರಿಗೆ ತರಲಾಗಿತ್ತು. ಈ ಕಠಿಣ ಕಾಯ್ದೆ ಅಸ್ತಿತ್ವದಲ್ಲಿದ್ದರೂ, ಮಕ್ಕಳ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಲೇ ಇವೆ ಎಂಬುದು ವಿಷಾದದ ಸಂಗತಿ.
ಭಾರತದಲ್ಲಿ ಮಕ್ಕಳ ಮೇಲಿನ ದೌರ್ಜನ್ಯಗಳು ವಿಶೇಷವಾಗಿ ಲೈಂಗಿಕ ದೌರ್ಜನ್ಯಗಳು ಗಮನಾರ್ಹವಾಗಿ ಹೆಚ್ಚಳವನ್ನು ಕಂಡಿವೆ. ಇತ್ತೀಚೆಗೆ, ಮಗುವಿಗೆ ಶಿಕ್ಷಣ ನೀಡಬೇಕಾಗಿದ್ದ ಪ್ರಾಂಶುಪಾಲವೊಬ್ಬ ಆರು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಕೃತ್ಯವನ್ನು ವಿರೋಧಿಸಿದ ಬಾಲಕಿಯನ್ನ ಉಸಿರುಗಟ್ಟಿಸಿ ಕೊಂದು, ಆಕೆಯ ಮೃತದೇಹವನ್ನು ಶಾಲೆಯ ಕಾಂಪೌಂಡ್‌ನಲ್ಲಿ ಹೂತುಹಾಕಿದ್ದಾನೆ. ಇಂತಹ ಹಲವಾರು ಘಟನೆಗಳು ದೇಶದಲ್ಲಿ ನಡೆಯುತ್ತಲೇ ಇವೆ. ಮಕ್ಕಳ ಮೇಲೆ ಕಾಮುಕರ ಕ್ರೌರ್ಯ ಹೆಚ್ಚುತ್ತಲೇ ಇದೆ.
2022ರಲ್ಲಿ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿ ಮಾಡಿದಂತೆ, ಭಾರತವು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ 8.7% ನಷ್ಟು ಹೆಚ್ಚಳವನ್ನು ಕಂಡಿದೆ. ಅಂದರೆ, ಆ ವರ್ಷ ಒಟ್ಟು 1,62,000 ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 46% ಅಪಹರಣ ಪ್ರಕರಣಗಳಾಗಿವೆ. ಆಘಾತಕಾರಿಯಾಗಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವು 2016 ರಿಂದ 2022ರ ವೇಳೆಗೆ 96% ರಷ್ಟು ಹೆಚ್ಚಾಗಿದೆ. 2021ರಲ್ಲಿ 36,381 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದರೆ, 2022ರಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ 38,911ಕ್ಕೆ ಏರಿಕೆಯಾಗಿದೆ.
ಇಂತಹ ಕೃತ್ಯಗಳು ನಡೆಯುತ್ತಿರುವ ಸಮಯದಲ್ಲಿ ಸುಪ್ರೀಂ ಕೋರ್ಟ್ ಪೋಕ್ಸೋ ಕಾನೂನನ್ನ ಮತ್ತಷ್ಟು ಬಲಪಡಿಸಿದೆ. “ಯಾವುದೇ ವ್ಯಕ್ತಿ ಮೊಬೈಲ್ ಸೇರಿದಂತೆ ಇನ್ನಿತರ ಸಾಧನದಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳು ಅಥವಾ ವಿಡಿಯೋಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು, ಸಂಗ್ರಹಿಸಿದ್ದನ್ನು ಡಿಲೀಟ್ ಮಾಡದೇ ಇರುವುದು, ನೋಡುವುದು, ಹಂಚುವುದು ಹಾಗೂ ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೇ ಇರುವುದೂ ಕೂಡ ಪೋಕ್ಸೋ ಅಡಿಯಲ್ಲಿ ಅಪರಾಧವಾಗಿರುತ್ತದೆ” ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಇನ್ನು ‘ಮಕ್ಕಳ ಅಶ್ಲೀಲ ಚಿತ್ರ’ ಎಂಬ ಪದವನ್ನು ‘ಮಕ್ಕಳ ಲೈಂಗಿಕ ಶೋಷಣೆ’ ಎಂಬುದಾಗಿ ಬದಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಜೊತೆಗೆ, ಎಲ್ಲ ನ್ಯಾಯಾಲಯಗಳೂ ಕೂಡ ತಮ್ಮ ಆದೇಶಗಳಲ್ಲಿ ‘ಮಕ್ಕಳ ಅಶ್ಲೀಲ ಚಿತ್ರ’ ಎಂಬ ಪದದ ಬದಲಾಗಿ ‘ಮಕ್ಕಳ ಲೈಂಗಿಕ ಶೋಷಣೆ’ ಎಂದೇ ಪದ ಬಳಕೆ ಮಾಡುವಂತೆ ಮುಖ್ಯ ನ್ಯಾಯನಮೂರ್ತಿ ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲ ಹಾಗೂ ಮನೋಜ್ ಅವರಿದ್ದ ತ್ರಿಸದಸ್ಯ ಪೀಠ ತೀರ್ಪು ಪ್ರಕಟಿಸಿದೆ.
ಮಕ್ಕಳ ಅಶ್ಲೀಲ ವಿಡಿಯೋ ವೀಕ್ಷಣೆ ಮಾಡುವುದು ಪೋಕ್ಸೋ ಹಾಗೂ ಐಟಿ ಕಾಯ್ದೆ ಪ್ರಕಾರ ಅಪರಾಧವಲ್ಲ ಎಂದು ಇದೇ ವರ್ಷದ ಜನವರಿ 11ರಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಫರಿದಾಬಾದ್ ಮೂಲದ ಸರ್ಕಾರೇತರ ಸಂಸ್ಥೆಯಾದ, ಮಕ್ಕಳ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿರುವ ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ಅಲೈಯನ್ಸಸ್ ಮತ್ತು ದೆಹಲಿ ಮೂಲದ ಬಚ್ಪನ್ ಬಚಾವೊ ಆಂದೋಲನ್ ಸಂಘಟನೆಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದ್ದು, ಆ ವೇಳೆ ಈ ಮಹತ್ವ ತೀರ್ಪು ನೀಡಿದೆ. ಮದ್ರಾಸ್ ಹೈಕೋರ್ಟ್ ಹೊರಡಿಸಿದ್ದ ತೀರ್ಪನ್ನು ರದ್ದು ಮಾಡಿದೆ.
ಏನಿದು ಪ್ರಕರಣ?
28 ವರ್ಷದ ಚೆನ್ನೈನ ನಿವಾಸಿಯೊಬ್ಬರು ಮಕ್ಕಳ ಅಶ್ಲೀಲ ಚಿತ್ರವನ್ನು ತನ್ನ ಮೊಬೈಲ್‌ನಲ್ಲಿ ಡೌನ್ಲೋಡ್ ಮಾಡಿ ವೀಕ್ಷಣೆ ಮಾಡುತ್ತಿದ್ದನು. ಈ ಹಿನ್ನೆಲೆ, ಆತನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಆದರೆ, ಆ ಪ್ರಕರಣವನ್ನು ಅಧೀನ ನ್ಯಾಯಾಲಯವು ಖುಲಾಸೆಗೊಳಿಸಿತ್ತು. ಬಳಿಕ, ಆತನ ವಿರುದ್ಧ ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ಅಲೈಯನ್ಸಸ್ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಕುರಿತು ಜನವರಿ 11ರಂದು ವಿಚಾರಣೆ ನಡೆಸಿ, ತೀರ್ಪು ನೀಡಿದ್ದ ಮದ್ರಾಸ್ ಹೈಕೋರ್ಟ್, “ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಮತ್ತು ಪೊಕ್ಸೋ ಕಾಯ್ದೆ 2012ರ ಅಡಿ ಮಕ್ಕಳ ಅಶ್ಲೀಲ ಚಿತ್ರ ವೀಕ್ಷಣೆ ಮತ್ತು ಡೌನ್ಲೋಡ್ ಮಾಡುವುದು ಅಪರಾಧವಲ್ಲ” ಎಂದು ಹೇಳಿತ್ತು.
ತೀರ್ಪು ನೀಡುವ ವೇಳೆ ಮದ್ರಾಸ್ ಹೈಕೋರ್ಟ್, “ಆರೋಪಿಯು ವಿಡಿಯೋಗಳನ್ನು ತನ್ನ ಮೊಬೈಲ್‌ನಲ್ಲಿ ಡೌನ್ಲೋಡ್ ಮಾಡಿಕೊಂಡಿದ್ದಾನೆ. ಆದರೆ, ತನ್ನೊಬ್ಬನ ಮನರಂಜನೆಗಾಗಿ ಅವುಗಳನ್ನು ನೋಡಿದ್ದಾನೆ. ವೈಯಕ್ತಿಕ ಮನರಂಜನೆಗಾಗಿ ಪೋರ್ನೋಗ್ರಫಿ ಡೌನ್‌ಲೋಡ್ ಮಾಡಿ ನೋಡಿರುವುದರಿಂದ ಆತ ಯಾರಿಗೂ ಇದನ್ನು ಪಸರಿಸುವ ಉದ್ದೇಶ ಹೊಂದಿಲ್ಲ. ಮಕ್ಕಳನ್ನು ಆತ ಬಳಸಿಕೊಂಡು ಆ ವಿಡಿಯೋ ಚಿತ್ರೀಕರಣ ಮಾಡಿಲ್ಲ. ಬೇರೆ ಯಾರೋ ಮಾಡಿದ್ದ ವಿಡಿಯೋಗಳನ್ನು ಆತ ಡೌನ್‌ಲೋಡ್ ಮಾಡಿದ್ದಾನಷ್ಟೇ ಹಾಗಾಗಿ, ಆತನನ್ನು ಖುಲಾಸೆ ಮಾಡಬಹುದು” ಎಂದು ಹೇಳಿತ್ತು. ಮದ್ರಾಸ್ ಹೈಕೋರ್ಟ್‌ನ ಈ ಆದೇಶವನ್ನು ಪ್ರಶ್ನಿಸಿ ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ಅಲೈಯನ್ಸಸ್ ಸಂಸ್ಥೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.
ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮದ್ರಾಸ್ ಹೈಕೋರ್ಟ್ ನೀಡಿದ ತೀರ್ಪು ಸಾಕಷ್ಟು ಪ್ರಮಾದದಿಂದ ಕೂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಮದ್ರಾಸ್ ಹೈಕೋರ್ಟ್‌ನ ಆದೇಶವನ್ನು ರದ್ದು ಮಾಡಿದೆ. ಅಲ್ಲದೆ, ಮದ್ರಾಸ್ ಹೈಕೋರ್ಟ್ ಈ ಬಗ್ಗೆ ಆದೇಶ ನೀಡುವಾಗ ಘೋರ ತಪ್ಪು ಮಾಡಿದ್ದು, ಪ್ರಕರಣದಲ್ಲಿ ಖುಲಾಸೆಯಾಗಿರುವ ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ಮರು ಸ್ಥಾಪಿಸಲಿದೆ ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ಕೇರಳದಲ್ಲಿ ಬಿಜೆಪಿಗೆ ನೆರವು ನೀಡಿದವರಾರು?; ಸಿಎಂ ಪಿಣರಾಯಿ ಸರ್ಕಾರಕ್ಕೆ ಸವಾಲಿನ ಪ್ರಶ್ನೆ
ಯಾವುದೇ ವ್ಯಕ್ತಿಯು ತನ್ನಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳನ್ನು, ವಿಡಿಯೋಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದ ಎಂದ ಮೇಲೆ ಆತ ಅವುಗಳನ್ನು ಬೇರೆಯವರ ಮುಂದೆ ಪ್ರದರ್ಶಿಸುವ ಅಥವಾ ಬೇರೆಯವರಿಗೆ ಕಳುಹಿಸುವ ಕೆಟ್ಟ ಉದ್ದೇಶ ಹೊಂದಿದ್ದಾನೆಂದೇ ಅರ್ಥ. ತನ್ನಲ್ಲಿ ಇಂಥ ದೃಶ್ಯಗಳಿವೆ ಎಂಬುದನ್ನು ಪೊಲೀಸರಿಗೆ ಮಾಹಿತಿ ನೀಡದಿರುವುದೂ ಸಹ ಆತನ ಮೇಲೆ ಅನುಮಾನದ ದೃಷ್ಟಿ ಬೀರುವಂತೆ ಮಾಡುತ್ತವೆ. ಹೀಗೆ ಮಾಡುವುದರಿಂದ ಈ ಫೋಟೋ, ವಿಡಿಯೋಗಳನ್ನು ಬೇರೆ ಕಡೆಗೆ ರವಾನಿಸುವ ಕೆಟ್ಟ ಉದ್ದೇಶವನ್ನು ಆ ವ್ಯಕ್ತಿ ಹೊಂದಿದ್ದಾನೆಂದೇ ಪರಿಗಣಿಸಬಹುದು. ಇಂಥ ಪ್ರಸಂಗಗಳನ್ನು ಪೋಕ್ಸೊ ಕಾಯ್ದೆಯಡಿ ತರಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇನ್ನು ಮಕ್ಕಳ ಅಶ್ಲೀಲತೆ ವಿಷಯವನ್ನು ಪ್ರಕಟಿಸುವುದು ಮತ್ತು ಅದನ್ನು ಹಂಚಿಕೊಳ್ಳುವುದು ಅಪರಾಧ. ಇದನ್ನು ಡೌನ್ಲೋಡ್ ಮಾಡಿಕೊಳ್ಳುವುದು ಇನ್ನಷ್ಟು ಅಪಾಯಕಾರಿ ಬೆಳವಣಿಗೆ. ಕೇಂದ್ರ ಸರ್ಕಾರ ಈ ಬಗ್ಗೆ ಹೊಸದಾಗಿ ಮಾರ್ಗಸೂಚಿ ಪ್ರಕಟಿಸಬೇಕು. ಮಕ್ಕಳನ್ನು ಲೈಂಗಿಕವಾಗಿ ನಿಂದಿಸುವ ಮತ್ತು ಶೋಷಣೆ ಮಾಡುವ ವಸ್ತು ಎಂಬ ಪದದ ಬದಲಿಗೆ ತಿದ್ದುಪಡಿ ತರಲು ಸಾಧ್ಯವೇ ಎಂಬುದನ್ನು ಕೇಂದ್ರ ಸರ್ಕಾರ ಪರಿಶೀಲನೆ ಮಾಡಬೇಕು. ಅಲ್ಲದೆ ಇನ್ನುಮುಂದೆ ದೇಶದ ಯಾವುದೇ ನ್ಯಾಯಾಲಯಗಳು ಮಕ್ಕಳ ಅಶ್ಲೀಲತೆ ಎಂಬ ಪದವನ್ನು ಬಳಸದಂತೆ ಮುಖ್ಯ ನ್ಯಾಯಮೂರ್ತಿಗಳ ಪೀಠ ಸೂಚಿಸಿದೆ.