‘ದೇಶದಲ್ಲಿ ಈಗ ಜಾರಿಯಲ್ಲಿರುವ ತುರ್ತುಪರಿಸ್ಥಿತಿಯನ್ನು ಬುಡಮೇಲು ಮಾಡುವುದು ಬಹು ಕಠಿಣ’ ಎಂದು ಹಿರಿಯ ಚಿಂತಕ ಆಶೀಶ್ ನಂದಿ ಹೇಳಿದ್ದಾರೆ.
50 ವರ್ಷಗಳ ಹಿಂದೆ ಇಂದಿರಾಗಾಂಧೀ ಅವರು ಹೇರಿದ್ದು ಘೋಷಿತ ತುರ್ತುಪರಿಸ್ಥಿತಿ. ಆದರೆ ಇಂದು ಜಾರಿಯಲ್ಲಿರುವುದು ಆಘೋಷಿತ ತುರ್ತುಪರಿಸ್ಥಿತಿ. ಅಘೋಷಿತ ತುರ್ತುಪರಿಸ್ಥಿತಿಯನ್ನು ಬುಡಮೇಲು ಮಾಡುವುದು ಘೋಷಿತ ತುರ್ತುಪರಿಸ್ಥಿತಿಯ ವಿರುದ್ಧ ಹೋರಾಡಿದಷ್ಟು ಸುಲಭ ಅಲ್ಲ ಎಂದು ಅವರು ಬುಧವಾರ ದೆಹಲಿಯಲ್ಲಿ ವಿವರಿಸಿದ್ದಾರೆ.
ಸುಗತ ಶ್ರೀನಿವಾಸರಾಜು ಅವರು ತುರ್ತುಪರಿಸ್ಥಿತಿಯ ಕುರಿತು ಬರೆದಿರುವ ಪುಸ್ತಕ The Conscience Network ನ ಬಿಡುಗಡೆ ಸಮಾರಂಭದಲ್ಲಿ ಅವರು ಭಾಗವಹಿಸಿದ್ದರು.
ಈಗ ನಾವಿರುವುದು ಅತ್ಯಂತ ಕೇಡಿನ ಸ್ಥಿತಿ. ಇಂದಿರಾಗಾಂಧೀ ಹೇರಿದ ತುರ್ತುಪರಿಸ್ಥಿತಿ ಅತೀವ ಒರಟು ಮತ್ತು ಹಸಿಬಿಸಿಯಿಂದ ಕೂಡಿತ್ತು. ಅದನ್ನು ಭೇದಿಸುವುದು ಕಠಿಣ ಕಾರ್ಯವೇನೂ ಆಗಿರಲಿಲ್ಲ. ಹೀಗಾಗಿಯೇ ಅದು ಕೇವಲ ಎರಡೇ ವರ್ಷಗಳಲ್ಲಿ ಕುಸಿದು ಬಿತ್ತು. ಹಾಲಿ ತುರ್ತುಪರಿಸ್ಥಿತಿಯು ಹೆಚ್ಚು ಕುತಂತ್ರಿಯೂ ಕುಟಿಲವೂ ಆದದ್ದು. ಹೀಗಾಗಿ ಅದನ್ನು ಸೋಲಿಸುವುದು ಸುಲಭವಲ್ಲ ಎಂದು ಅವರು ಹೇಳಿದರು.
‘ಇಂಡಿಯನ್ಸ್ ಫಾರ್ ಡೆಮಕ್ರಸಿ’ ಎಂಬ ಸಂಘಟನೆಯ ಮೂಲಕ ಅಮೆರಿಕೆಯ ಅಂದಿನ ಆದರ್ಶವಾದಿ ಯುವ ಅನಿವಾಸಿ ಭಾರತೀಯರು ಇಂದಿರಾ ಅವರ ತುರ್ತುಪರಿಸ್ಥಿತಿಯ ವಿರುದ್ಧ ಕಟ್ಟಿದ ದಿಟ್ಟ ಹೋರಾಟದ ಕತೆಯೇ ಸುಗತ ಅವರ ಹೊಸ ಕೃತಿಯ ಜೀವಾಳ.
ಕ್ಯಾಲಿಫೋರ್ನಿಯ, ಶಿಕಾಗೋ, ನ್ಯೂಯಾರ್ಕ್ ನಿಂದ ಹಲವಾರು ಮಂದಿ ಭಾರತೀಯರು ಒಟ್ಟಾಗಿ ಭಾರತದಲ್ಲಿನ ಸರ್ವಾಧಿಕಾರದ ಕರಾಳ ಆಡಳಿತದ ವಿರುದ್ಧ ವಿದೇಶೀ ನೆಲದಲ್ಲಿ ಹೋರಾಡಿದರು. ನಾವು ಭಾರತಕ್ಕೆ ಹಿಂದಿರುಗಿ ಅರ್ಥಪೂರ್ಣ ಕೆಲಸದಲ್ಲಿ ತೊಡಗುವುದಿದ್ದಲ್ಲಿ ಅದು ಜನತಂತ್ರ ವ್ಯವಸ್ಥೆಯಿದ್ದರೆ ಮಾತ್ರ ಸಾಧ್ಯ ಎಂಬ ನಂಬಿಕೆ ನಮ್ಮ ಹೋರಾಟದ ಹಿಂದಿತ್ತು ಎಂದು ಹಿರಿಯ ಹೋರಾಟಗಾರ ಎಸ್.ಆರ್.ಹಿರೇಮಠ ಈ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಹೇಳಿದರು. ಅಂದು ಅಮೆರಿಕೆಯಲ್ಲಿ ಜರುಗಿದ ಹೋರಾಟದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಆ ಹೋರಾಟದಲ್ಲಿ ಹೆಗಲೆಣೆಯಾಗಿ ದುಡಿದಿದ್ದ ರವಿ ಛೋಪ್ರ ಮತ್ತು ಆನಂದಕುಮಾರ್ ಅವರೂ ಈ ಸಭೆಯಲ್ಲಿದ್ದರು.
ಅಂತಾರಾಷ್ಟ್ರೀಯ ಅಭಿಪ್ರಾಯಕ್ಕೆ ಸೂಕ್ಷ್ಮಮತಿಯಾಗಿದ್ದ ಇಂದಿರಾಗಾಂಧೀ ಅವರು, ಅಂತಾರಾಷ್ಟ್ರೀಯ ಒತ್ತಡದ ಕಾರಣಕ್ಕಾಗಿಯೇ ತುರ್ತುಪರಿಸ್ಥಿತಿಯನ್ನು ಕೊನೆಗೊಳಿಸಿ ಲೋಕಸಭೆಗೆ ಚುನಾವಣೆಗಳನ್ನು ಘೋಷಿಸಿದರು ಎಂಬ ಭಾವನೆ ವ್ಯಾಪಕವಾಗಿ ನೆಲೆಸಿದೆ. ಇಂತಹ ವ್ಯಾಪಕ ಅಂತಾರಾಷ್ಟ್ರೀಯ ಒತ್ತಡವನ್ನು ಸೃಷ್ಟಿಸಿದವರು ವಿದೇಶಗಳಲ್ಲಿ ನೆಲೆಸಿದ್ದ ಅತ್ಯಂತ ಸಾಧಾರಣ ಭಾರತೀಯರು. ಅವರು ಅಲ್ಲಿಗೆ ಹೋಗಿದ್ದ ಉದ್ದೇಶ ರಾಜಕಾರಣ ಮಾಡುವುದಲ್ಲ. ಆದರೆ ಭಾರತದಲ್ಲಿನ ತುರ್ತುಪರಿಸ್ಥಿತಿ ಕುರಿತು ಮೂಕಪ್ರೇಕ್ಷಕರಾಗಿ ಕೈ ಕಟ್ಟಿ ಕುಳಿತುಕೊಳ್ಳುವುದು ಅವರಿಂದ ಆಗಲಿಲ್ಲ. ಹೀಗಾಗಿ ಪ್ರತಿರೋಧದ ಸಮಾನಾಂತರ ಚರಿತ್ರೆಯನ್ನು ಸೃಷ್ಟಿಸಿದರು ಎಂದು The Conscience Network ನ ಕರ್ತೃ ಸುಗತ ಶ್ರೀನಿವಾಸರಾಜು ವಿವರಿಸಿದರು.
ಹಿರಿಯ ಪತ್ರಕರ್ತೆ ನೀರಜಾ ಚೌಧರಿ, ಸಾಮಾಜಿಕ-ರಾಜಕೀಯ ಹೋರಾಟಗಾರರಾದ ಡುನು ರಾಯ್, ಸುಹಾಸ್ ಬೋರ್ಕರ್ ಅವರೂ ಈ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.