10 ಗ್ರಾಮ್ ಗೆ 1 ಲಕ್ಷ: ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ತಜ್ಞರ ಎಚ್ಚರಿಕೆ ಏನು?

Date:

Advertisements

ಭಾರತದಲ್ಲಿ ಚಿನ್ನದ ಬೆಲೆ ಮೊದಲ ಬಾರಿಗೆ ದಾಖಲೆ ಮಟ್ಟಕ್ಕೆ ತನ್ನ ದರ ಏರಿಸಿಕೊಂಡಿದೆ. 10 ಗ್ರಾಂ ಅಪ್ಪಟ ಬಂಗಾರದ ಬೆಲೆ ₹1,00,000 ದಾಟಿದ್ದು, ಹೂಡಿಕೆದಾರರಲ್ಲಿ ಸಂತೋಷ ಉಂಟುಮಾಡಿದರೆ, ಆಭರಣ ಪ್ರಿಯರಿಗೆ ಶಾಕ್‌ ಕೊಟ್ಟಿದೆ. ಇದು ಸಾಂಪ್ರದಾಯಿಕವಾದಿಗಳ ಚಿನ್ನ ಖರೀದಿ ಬಯಕೆಗೆ ನಿಜವಾದ ಹೊಡೆತ.

ಸಾಮಾನ್ಯವಾಗಿ ಷೇರು ಮಾರುಕಟ್ಟೆ ಮತ್ತು ಚಿನ್ನದ ಬೆಲೆಗಳು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತವೆ. ಷೇರುಪೇಟೆ ಕುಸಿದಾಗ ಚಿನ್ನದ ಬೆಲೆ ಏರುತ್ತದೆ. ಹಾಗೆಯೇ, ಷೇರುಪೇಟೆ ಏರಿದಾಗ ಚಿನ್ನದ ದರ ಕುಸಿಯುತ್ತದೆ. ಆದರೆ, ಭಾರತದಲ್ಲಿ ಸದ್ಯ ಚಿನ್ನ ಮತ್ತು ಷೇರು ಮಾರುಕಟ್ಟೆ ಎರಡೂ ಒಂದೇ ದಿಕ್ಕಿನಲ್ಲಿ ಒಂದೇ ಸಮಯದಲ್ಲಿ ಸಮಾನಾಂತರವಾಗಿ ಚಲಿಸುತ್ತಿವೆ. ಇತ್ತೀಚೆಗೆ 10 ಗ್ರಾಂ (24k) ಚಿನ್ನದ ಬೆಲೆ ₹1 ಲಕ್ಷ ದಾಟಿ ದಾಖಲೆ ಬರೆದಿತ್ತು.

ಏರಿಕೆಗೆ ಕಾರಣಗಳೇನು?

Advertisements

ಚಿನ್ನದ ಬೆಲೆ ಏರಿಕೆಗೆ ಹಲವಾರು ಅಂಶಗಳು ಕಾರಣವಾಗುತ್ತವೆ. ಇತ್ತೀಚೆಗೆ ಟ್ರಂಪ್‌ ಜಾರಿಗೆ ತಂದ ಸುಂಕ ನೀತಿ ಜಗತ್ತಿನಾದ್ಯಂತ ಟ್ರೇಡ್‌ ವಾರ್‌ ಭೀತಿ ತಂದೊಡ್ಡಿದೆ. ಭಾರತದ ಆರ್‌ಬಿಐ ಸೇರಿದಂತೆ ಬಹುತೇಕ ರಾಷ್ಟ್ರಗಳ ಕೇಂದ್ರ ಬ್ಯಾಂಕುಗಳು ಬೃಹತ್‌ ಪ್ರಮಾಣ ಚಿನ್ನ ಖರೀದಿಯಲ್ಲಿ ತೊಡಗಿವೆ. ಇಂತಹ ಸಮಯದಲ್ಲಿ ಮಾರುಕಟ್ಟೆ ಏರುಪೇರಿಗೆ ಹೆದರಿದ ಹೂಡಿಕೆದಾರರು ಚಿನ್ನದ ಕಡೆಗೆ ಮುಖ ಮಾಡುತ್ತಿದ್ದಾರೆ. ಜಾಗತಿಕ ಮಟ್ಟದ ಯುದ್ಧದ ಬಿಕ್ಕಟ್ಟುಗಳು, ಡಾಲರ್‌ ಮುಂದೆ ರೂಪಾಯಿ ದುರ್ಬಲವಾಗಿರುವುದು ಸೇರಿದಂತೆ ಹಲವು ಕಾರಣಗಳಿವೆ.

ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಈ ನಡುವೆ ಸಣ್ಣ ಪುಟ್ಟ ಏರಿಳಿತದ ಸಂಭವವಿದೆ. ಆದರೆ, ದೀರ್ಘಾವಧಿಯಲ್ಲಿ ಚಿನ್ನದ ಬೆಲೆ ಇನ್ನಷ್ಟು ಏರಿಕೆಯಾಗಲಿದೆ. ಜಗತ್ತಿನಾದ್ಯಂತ ಸರ್ಕಾರಗಳು ಮತ್ತು ಹೂಡಿಕೆದಾರರು ಅಮೆರಿಕದ ಬಾಂಡ್‌ಗಳಿಂದ ಹಣ ತೆಗೆದು ಚಿನ್ನದಲ್ಲಿ ಹೂಡಿಕೆ ಮಾಡುತ್ತಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ.

ಕಳೆದ ಹತ್ತು ವರ್ಷಗಳ ಚಿನ್ನದ ದರದ ಇತಿಹಾಸ:

ಈ ಕೆಳಗಿನ ಕೋಷ್ಟಕದಲ್ಲಿ ಕಳೆದ  2015ರಿಂದ 2024 ರವರೆಗಿನ ಭಾರತದಲ್ಲಿ ಚಿನ್ನದ ದರದ ಇತಿಹಾಸ ಗಮನಿಸಬಹುದು.                                                                                             

ವರ್ಷಗಳುಬೆಲೆ (ಪ್ರತಿ 10 ಗ್ರಾಂ ( 24 ಕ್ಯಾರೆಟ್)
2015₹ 26,343.00
2016₹ 28,623.50
2017₹ 29,667.50
2018₹ 31,438.00
2019₹ 35,220.00
2020₹ 48,651.00
2021₹ 48,720.00
2022₹ 52,670.00
2023₹ 65,330.00
2024₹ 64,070.0

ಈ ವರ್ಷ (2025) 24 ಕ್ಯಾರೆಟ್‌ನ ಪ್ರತಿ ಗ್ರಾಂ ಚಿನ್ನಕ್ಕೆ ₹9,824, 22 ಕ್ಯಾರೆಟ್‌ನ ಪ್ರತಿ ಗ್ರಾಂಗೆ ಚಿನ್ನಕ್ಕೆ ₹9,005 ಮತ್ತು 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹7,368 ಆಗಿದೆ.

ದರ ಏರಿಕೆ ಯಾರಿಗೆ ಲಾಭ ಯಾರಿಗೆ ನಷ್ಟ?

ಹೀಗೆ ಬೆಲೆ ಏರಿದಾಗ, ಲಾಭವಾಗುವವರು ಕೆಲವರಿಗಷ್ಟೇ. ಹೂಡಿಕೆದಾರರು, ಚಿನ್ನದ ವ್ಯಾಪಾರಿಗಳು, ಆಭರಣ ತಯಾರಕರು–ಇವರುಗಳಿಗಂತೂ ಈ ಬೆಲೆ ಏರಿಕೆಯು ಬಹುಮಾನವಾಗಿ ಪರಿಣಮಿಸುತ್ತದೆ. ಹೂಡಿಕೆ ಮಾಡುವವರು ತಮ್ಮ ಹೂಡಿಕೆಗೆ ಹೆಚ್ಚಿನ ಮೌಲ್ಯ ಪಡೆಯುತ್ತಾರೆ. ಚಿನ್ನ ವ್ಯಾಪಾರದ ಲಾಭಾಂಶ ಕೂಡ ಹೆಚ್ಚಾಗುತ್ತದೆ. ಆದರೆ ಇದೇ ಸಂದರ್ಭದಲ್ಲಿ, ಮಧ್ಯಮ ವರ್ಗ ಹಾಗೂ ಬಡ ಜನರ ಕೈಯಿಂದ ಚಿನ್ನ ದೂರ ಸರಿಯುತ್ತದೆ. ವಿಶೇಷವಾಗಿ ಮದುವೆ, ಇತರೆ ಕಾರ್ಯಕ್ರಮಗಳಲ್ಲಿ ಸಾಂಪ್ರದಾಯಿಕ ಗೌರವವಾಗಿ ಬಳಸುವ ಕುಟುಂಬಗಳಿಗೆ ಇದು ತೀವ್ರ ಆರ್ಥಿಕ ಒತ್ತಡ ತರುತ್ತದೆ. ಕೆಲವರು ತಾತ್ಕಾಲಿಕವಾಗಿ ಬಡ್ತಿ ಸಾಲ ತೆಗೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಚಿನ್ನಕ್ಕೆ ಬದಲಾಗಿ ಬೆಳ್ಳಿ ಅಥವಾ ಚಿನ್ನದ ಲೇಪಿತ ಆಭರಣಗಳತ್ತ ಮುಖ ಮಾಡುತ್ತಿದ್ದಾರೆ.

ಚಿನ್ನ ಹೂಡಿಕೆಗೆ ಯಾವುದು ಸಕಾಲ? ತಜ್ಞರು ಏನಂತಾರೆ?

ದಿನೇ ದಿನೇ ಚಿನ್ನದ ಬೆಲೆ ಏರುತ್ತಿರುವ ಈ ಸಂದರ್ಭದಲ್ಲಿ ಬಂಗಾರದ ಮೇಲೆ ಹೂಡಿಕೆ ಮಾಡುವುದು ಸರಿಯೇ ಅಥವಾ ತಡವಾಗಿದೆಯೇ? ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಷೇರು ಮಾರುಕಟ್ಟೆ ತಜ್ಞ ಓಂ ಘಾವಾಲ್ಕರ್ ಹೀಗೆನ್ನುತ್ತಾರೆ, “ನೀವು ಈಗ ಹೂಡಿಕೆ ಮಾಡಲು ಬಯಸಿದರೆ, ಒಮ್ಮೆಲೇ ಹಣವನ್ನು ಹಾಕಬೇಡಿ. ಬದಲಿಗೆ ಗೋಲ್ಡ್ ಇಟಿಎಫ್ (ಎಕ್ಸ್‌ಚೇಂಜ್‌ ಟ್ರೇಡ್‌ ಫಂಡ್ಸ್) ನಲ್ಲಿ ಎಸ್ಐಪಿ (ಸಿಸ್ಟಮ್ಯಾಟಿಕ್‌ ಇನ್ವೆಸ್ಟ್‌ಮೆಂಟ್‌ ಪ್ಲ್ಯಾನ್) ಪ್ರಾರಂಭಿಸಿ. ಇದರಿಂದ ಸರಾಸರಿ ಖರೀದಿ ಬೆಲೆ ಸರಿಯಾಗಿರುತ್ತದೆ. ಮಾರುಕಟ್ಟೆಯ ಏರಿಳಿತದ ಪರಿಣಾಮ ಕಡಿಮೆ ಆಗುತ್ತದೆ. ಚಿನ್ನದಲ್ಲಿ ಹೆಚ್ಚು ಹಣ ಹೂಡಿಕೆ ಮಾಡಬೇಡಿ. ನಿಮ್ಮ ಹೂಡಿಕೆಯ ಪೋರ್ಟ್‌ಫೋಲಿಯೊದಲ್ಲಿ ಕೇವಲ 10% ರಷ್ಟು ಚಿನ್ನ ಇರಲಿ. ಒಂದು ವೇಳೆ ನಿಮ್ಮ ಪೋರ್ಟ್‌ಫೋಲಿಯೊದಲ್ಲಿ ಚಿನ್ನದ ಪಾಲು 20-25% ಕ್ಕಿಂತ ಹೆಚ್ಚಾದರೆ, ಸ್ವಲ್ಪ ಚಿನ್ನವನ್ನು ಮಾರಾಟ ಮಾಡಿಬಿಡಿ. ಬೆಲೆ ಏರಿಕೆಯ ಲಾಭ ಪಡೆಯಿರಿ. ಉಳಿದ ಹೂಡಿಕೆಯನ್ನು ಹಾಗೆಯೇ ಇರಲು ಬಿಡಿ” ಎಂದು ಸಲಹೆ ನೀಡುತ್ತಾರೆ.

“ಚಿನ್ನ ಮತ್ತು ಷೇರು ಎರಡರಲ್ಲೂ ಹೂಡಿಕೆ ಮಾಡಿ. ಆದರೆ ಒಮ್ಮೆಲೇ ದೊಡ್ಡ ಮೊತ್ತವನ್ನು ಹೂಡಿಕೆ ಮಾಡುವ ಬದಲು ಸ್ವಲ್ಪ ಸ್ವಲ್ಪವಾಗಿ ಹೂಡಿಕೆ ಮಾಡಿ. ಅಲ್ಪಾವಧಿಯ ಏರಿಕೆಯನ್ನು ನೋಡಿ ತಕ್ಷಣಕ್ಕೆ ಹೂಡಿಕೆ ಮಾಡಲು ಹೋಗಬೇಡಿ. ದೊಡ್ಡ ಮಟ್ಟದ ಏರಿಕೆಯ ಬಳಿಕ ಸ್ವಲ್ಪ ಕರೆಕ್ಷನ್‌ ಆಗುವುದು ಸಾಮಾನ್ಯ. ಮುಂದೆ ಕೆಲವು ದಿನಗಳ ಕಾಲ ಬೆಲೆಗಳು ಸ್ಥಿರವಾಗಬಹುದು ಅಥವಾ ಸ್ವಲ್ಪ ಕೆಳಗಿಳಿಯಬಹುದು ಯೋಚಿಸಿ ಹೂಡಿಕೆ ಮಾಡಿ” ಎನ್ನುತ್ತಾರೆ ಮೀರಾ ಎಸೆಟ್‌ನ ಇಟಿಎಫ್ ಮುಖ್ಯಸ್ಥ ಸಿದ್ಧಾರ್ಥ್ ಶ್ರೀವಾಸ್ತವ.

ಚಿನ್ನದ ಬೆಲೆ ಏರಿಕೆಯು ಕೇವಲ ಆರ್ಥಿಕ ಅಂಶವಲ್ಲ; ಇದು ಸಮಾಜದ ವಿವಿಧ ಶ್ರೇಣಿಗಳ ಮೇಲೆಯೂ ದೀರ್ಘಕಾಲಿಕ ಪರಿಣಾಮ ಬೀರುತ್ತಿದೆ. ಹೂಡಿಕೆದಾರರಿಗೆ ಇದೇನು ದೊಡ್ಡ ಮಟ್ಟದ ಪರಿಣಾಮ ಎನಿಸದಿದ್ದರೂ.. ಮಧ್ಯಮ ವರ್ಗ ಮತ್ತು ಸಾಮಾನ್ಯ ಖರೀದಿದಾರರಿಗೆ ಇದು ಭಾರವಾದ ಚಿಂತೆ. ಭಾರತೀಯರಿಗೆ ಚಿನ್ನ ಕೇವಲ ಆಭರಣವಲ್ಲ, ಭವಿಷ್ಯದ ಭದ್ರತಾ ಸಂಕೇತ. ಆದರೆ ಭಾರತದ ಬಹುತೇಕರು ಬಡತನದ ಗಡಿ ಮೇಲೆ ಬದುಕುತ್ತಿದ್ದಾರೆ. ಅಂತಹ ಕುಟುಂಬಗಳಿಗೆ, ಮದುವೆ, ಉತ್ಸವಗಳ ಸಂದರ್ಭದಲ್ಲಿ ಚಿನ್ನ ಖರೀದಿ ಚಿಲ್ಲರೆ ಕನಸು ಮಾತ್ರವಾಯಿತೆಂಬ ಸತ್ಯವನ್ನು ತಿರಸ್ಕರಿಸಲಾಗದು.

ಇದನ್ನೂ ಓದಿ: ಶಿವಮೊಗ್ಗ | ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಸಾಲಿಡಾರಿಟಿ ಯೂತ್’ಮೂವ್ಮೆಂಟ್ ಖಂಡನೆ

ಹಣಕಾಸು ತಜ್ಞರ ಸಲಹೆಗಳ ಪ್ರಕಾರ ಜಾಣತನದ ಹೂಡಿಕೆ ಮತ್ತು ವೈವಿಧ್ಯಮಯ ಬಂಡವಾಳ ಯೋಜನೆ ಅತ್ಯಗತ್ಯ. ಚಿನ್ನದ ಬೆಲೆ ಎತ್ತರಕ್ಕೆ ಏರುತ್ತಲಿದ್ದರೂ, ಸಾಮಾನ್ಯ ಜನರ ಬಾಳಿಗೆ ಅದು ಮಿಂಚಿ ಮರೆಯಾಗದಂತೆ ಸರ್ಕಾರ ಮತ್ತು ಮಾರುಕಟ್ಟೆ ನಿಯಂತ್ರಣ ಸಂಸ್ಥೆಗಳು ಸಮಚಿತ್ತದಿಂದ ಕ್ರಮ ಕೈಗೊಳ್ಳಬೇಕಾಗಿದೆ.

WhatsApp Image 2025 05 16 at 6.54.26 PM
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

Download Eedina App Android / iOS

X