ರಾಷ್ಟ್ರ ರಾಜಧಾನಿಯ ಬೀದಿಗಳಲ್ಲಿ ದೇಶದ ಯುವಕರು ಹೋರಾಟಕ್ಕಿಳಿದಿದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಬಯಸಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದವರ ಮೇಲೆ ಪೊಲೀಸರು ಮುಗಿಬಿದ್ದಿದ್ದಾರೆ. ವಿರೋಧ ಪಕ್ಷಗಳೂ ನಾಯಕರ ರಾಜಿನಾಮೆಗೆ ಆಗ್ರಹಿಸಿ ಪ್ರತಿಭಟನೆಗಿಳಿದಿದ್ದಾರೆ. ಅತ್ತ ದೇಶ ಉರಿಯುತ್ತಿದ್ದರೆ, ಇತ್ತ ಮುಖ್ಯವಾಹಿನಿ ಮಾಧ್ಯಮಗಳೆನಿಸಿಕೊಂಡವು ಶ್ರದ್ಧಾಂಜಲಿ, ಅಂತ್ಯಸಂಸ್ಕಾರದ ಸುದ್ದಿಗಳನ್ನ ಬಿತ್ತರಿಸುತ್ತಿದ್ದವು. ಸೋ ಕಾಲ್ಡ್ ಮುಖ್ಯವಾಹಿನಿಗಳ ಧೋರಣೆ ಮತ್ತು ವರದಿಗಾರಿಕೆ ಈಗ ತೀವ್ರ ಟೀಕೆಗೆ ಗುರಿಯಾಗಿದೆ.
ಕಾರ್ಪೊರೇಟ್ ಬಂಡವಾಳಶಾಹಿಗಳ ಒಡೆತನದಲ್ಲಿರುವ ಟಿವಿ ಚಾನೆಲ್‌ಗಳು ಮತ್ತು ದೊಡ್ಡ ಪತ್ರಿಕೆಗಳು ಸರ್ಕಾರದ ನೀತಿ ನಿರ್ಧಾರಗಳನ್ನ ಪ್ರಶ್ನಿಸುವುದಿರಲಿ, ಅತ್ತ ತಿರುಗಿಯೂ ನೋಡುತ್ತಿಲ್ಲ. ಈ ಮಧ್ಯೆ ಸಣ್ಣ ಪುಟ್ಟ ಸ್ವತಂತ್ರ ಮಾಧ್ಯಮಗಳು, ಯೂಟ್ಯೂಬ್ ಮಾಧ್ಯಮಗಳು ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿವೆ. ಕೈಯಲ್ಲಿ ಮೈಕ್ರೋಫೋನ್ ಹಿಡಿದು ನೇರವಾಗಿ ಮೈದಾನಕ್ಕಿಳಿದ ಯೂಟ್ಯೂಬರ್‌ಗಳು, ಸ್ವತಂತ್ರ ಡಿಜಿಟಲ್ ಮಾಧ್ಯಮಗಳು ದೆಹಲಿ ಬೀದಿಯ ವಾಸ್ತವಿ ನೈಜ ಚಿತ್ರಣವನ್ನ ಜನರ ಮುಂದಿಡುತ್ತಿದ್ದಾರೆ.
ಪತ್ರಿಕೆಗಳು ಮತ್ತು ಸುದ್ದಿ ವಾಹಿನಿಗಳು ಯುವಜನತೆಯ ಮೂಲ ಸಮಸ್ಯೆಗಳಾದ ನಿರುದ್ಯೋಗ, ಪ್ರಶ್ನೆಪತ್ರಿಕೆ ಸೋರಿಕೆ (Paper leaks), ಶಿಕ್ಷಣ ವ್ಯವಸ್ಥೆಯ ವೈಫಲ್ಯಗಳ ಬಗ್ಗೆ ಗಂಭೀರ ಚರ್ಚೆ ನಡೆಸುವ ಬದಲು, ಪ್ರತಿಭಟನೆಯನ್ನು ಹಗುರವಾಗಿ ಪರಿಗಣಿಸುತ್ತಿವೆ. ದಿಕ್ಕು ತಪ್ಪಿಸುವ ಯತ್ನ ಮಾಡುತ್ತಿವೆ. ನಿನ್ನೆ ಹಾಗೂ ಇಂದು ಪ್ರತಿಭಟನೆಯ ತೀವ್ರತೆ ಹೆಚ್ಚಾದಾಗ ಮುಖ್ಯವಾಹಿನಿ ಮಾಧ್ಯಮಗಳು ಮೈದಾನಕ್ಕಿಳಿದರೂ, ಅಲ್ಲಿ ನೆರೆದಿದ್ದ ಯುವಕರಿಂದ ತೀವ್ರ ವಿರೋಧ ಎದುರಿಸಬೇಕಾಯಿತು. “ಗೋದಿ ಮೀಡಿಯಾ ಗೋ ಬ್ಯಾಕ್”, “ಗೋದಿ ಮೀಡಿಯಾ ಹಾಯ್ ಹಾಯ್” ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕುತ್ತಿದ್ದಾರೆ. ನಮ್ಮ ದೇಶದ ಮಾಧ್ಯಮಗಳು ಮಾಡಬೇಕಾದ ಕೆಲಸವನ್ನ ಅಂತಾರಾಷ್ಟ್ರೀಯ ಮಾಧ್ಯಮಗಳು ಮಾಡಲು ಮುಂದಾಗಿವೆ.

ದಶಕಗಳಿಂದ ದೊಡ್ಡ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಮತ್ತು ಉದ್ಯಮಿಗಳು ಮಾಧ್ಯಮ ಕ್ಷೇತ್ರವನ್ನು ನಿಯಂತ್ರಿಸುತ್ತಿದ್ದಾರೆ ಎನ್ನುವುದು ಗೊತ್ತಿರುವ ಸಂಗತಿ. ಜಾಹೀರಾತುಗಳ ಆದಾಯ ಮತ್ತು ಸರ್ಕಾರದ ಅನುದಾನದ ಮೇಲೆ ಅವಲಂಬಿತವಾಗಿರುವ ಈ ಮುಖ್ಯವಾಹಿನಿ ಮಾಧ್ಯಮಗಳು, ತಮ್ಮ ಹಿತಾಸಕ್ತಿಗಳಿಗೆ ಧಕ್ಕೆಯಾಗದಂತೆ ವರದಿ ಮಾಡುತ್ತವೆ. ನಿರುದ್ಯೋಗ, ಶಿಕ್ಷಣ ವ್ಯವಸ್ಥೆಯ ಲೋಪಗಳು, ಪರೀಕ್ಷಾ ಅಕ್ರಮಗಳು ಮತ್ತು ಯುವಕರ ಆಕ್ರೋಶದಂತಹ ಗಂಭೀರ ವಿಷಯಗಳನ್ನು ಮುಚ್ಚಿಟ್ಟು, ಸಮಾಜವನ್ನು ದಾರಿ ತಪ್ಪಿಸುವ ನಿರರ್ಥಕ ವಿಷಯಗಳಿಗೆ ಹೆಚ್ಚಿನ ಪ್ರಚಾರ ನೀಡುವುದು ಇವುಗಳ ಚಾಳಿಯಾಗಿದೆ.
ಟಿವಿ ಚಾನೆಲ್‌ಗಳು ಸರ್ಕಾರ ಕಾವಲು ನಾಯಿಗಳಂತೆ ವರ್ತಿಸುತ್ತಿರುವಾಗ ಜನರಿಗೆ ನೈಜ ಸುದ್ದಿಯ ಅಗತ್ಯವಿತ್ತು. ಈ ಶೂನ್ಯತೆಯನ್ನು ಯೂಟ್ಯೂಬ್ ಮತ್ತು ಡಿಜಿಟಲ್ ಮಾಧ್ಯಮಗಳು ಸಮರ್ಥವಾಗಿ ತುಂಬಿದವು. ಇಂದು ಲಕ್ಷಾಂತರ-ಕೋಟಿಗಟ್ಟಲೆ ಚಂದಾದಾರರನ್ನು ಹೊಂದಿರುವ ಸ್ವತಂತ್ರ ಯೂಟ್ಯೂಬ್ ಚಾನೆಲ್‌ಗಳು ಸಾಂಪ್ರದಾಯಿಕ ನ್ಯೂಸ್ ಚಾನೆಲ್‌ಗಳಿಗಿಂತ ಹೆಚ್ಚಿನ ವೀಕ್ಷಕರನ್ನು ತಲುಪುತ್ತಿವೆ. ಮುಖ್ಯವಾಹಿಗಳಿಂತ 10 ಪಟ್ಟು ಹೆಚ್ಚು ಪ್ರಭಾವ ಬೀರುತ್ತಿವೆ. ಸತ್ಯ ಹೇಳುತ್ತಿವೆ. ಕೋಟಿಗಟ್ಟಲೆ ಬಂದವಾಳ ಹೂಡಿಕೊಂಡರೂ ಪತ್ರಿಕೆ ಅಥವಾ ಟಿವಿ ಚಾನೆಲ್‌ಗಳಿಂದ ಮಾಡಲಾಗದ ಕೆಲಸವನ್ನು ಇಂದು ಸ್ವತಂತ್ರ ಪತ್ರಕರ್ತರು ಮೊಬೈಲ್ ಮತ್ತು ಯೂಟ್ಯೂಬ್ ಮೂಲಕ ಮಾಡಿ ತೋರಿಸುತ್ತಿದ್ದಾರೆ. ಜಾಹೀರಾತುಗಳ ಬೆಂಬಲವಿಲ್ಲದೆ, ಜನಸಾಮಾನ್ಯರ ಆರ್ಥಿಕ ನೆರವಿನಿಂದ (Crowdfunding) ನಡೆಯುವ ಈ ಯೂಟ್ಯೂಬ್ ಮಾಧ್ಯಮಗಳು ಯಾವುದೇ ಹಿಂಜರಿಕೆಯಿಲ್ಲದೆ ನಿರ್ಭಯವಾಗಿ ಸತ್ಯವನ್ನಷ್ಟೇ ಜನರಿಗೆ ತಲುಪಿಸುತ್ತಿವೆ. ಸಾಂಪ್ರದಾಯಿಕ ಮಾಧ್ಯಮಗಳು ತಮ್ಮ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿರುವ ಈ ಹೊತ್ತಿನಲ್ಲಿ ಯೂಟ್ಯೂಬ್ ಮತ್ತು ಡಿಜಿಟಲ್ ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗದ ನಿಜವಾದ ಕಾವಲುಗಾರರಾಗಿ ಹೊರಹೊಮ್ಮಿ ಹೊಸ ಮುಖ್ಯವಾಹಿನಿಯನ್ನು ಸೃಷ್ಟಿಸಿವೆ.

ಇದನ್ನೂ ಓದಿ: ಸಿಜೆಪಿ ಪ್ರತಿಭಟನೆ: ಗಾಯಗೊಂಡು ಐಸಿಯುನಲ್ಲಿದ್ದ ವಿದ್ಯಾರ್ಥಿನಿ ಚೇತರಿಕೆ; ಆಸ್ಪತ್ರೆ ಅಂಗಳದಲ್ಲಿ ಬಿಗಿ ಭದ್ರತೆ
ಮುಖ್ಯವಾಹಿನಿಗಳು ಈ ಐತಿಹಾಸಿಕ ಘಟನೆಯನ್ನು ರಾಷ್ಟ್ರೀಯ ಸುದ್ದಿಯನ್ನಾಗಿ ಬಿತ್ತರಿಸಲು ಹಿಂದೇಟು ಹಾಕಿದವು. ಪ್ರತಿಭಟನೆಯ ತೀವ್ರತೆಯನ್ನು ಜನಸಾಮಾನ್ಯರಿಗೆ ತಲುಪಿಸುವುದಿರಲಿ, ಅದನ್ನ ಮರೆಮಾಚುವ ಕೆಲಸ ಮಾಡಲಾಯಿತು. ಪ್ರತಿಭಟನಾಕಾರರನ್ನು ‘ದೇಶವಿರೋಧಿಗಳು’, ‘ಅರಾಜಕವಾದಿಗಳು’ ಎಂದು ಚಿತ್ರಿಸುವುದಕ್ಕೆ ಶುರುವಿಟ್ಟುಕೊಂಡವು. ಸರ್ಕಾರದ ಹಿರಿಯ ನಾಯಕರು ಮತ್ತು ಆಡಳಿತ ಪಕ್ಷದ ವಕ್ತಾರರು ಈ ಯುವ ಚಳವಳಿಯನ್ನು ಹತ್ತಿಕ್ಕಲು ಯತ್ನಿಸಿದಂತೆ, ಮುಖ್ಯವಾಹಿನಿ ಮಾಧ್ಯಮಗಳು ಸಹ ಪ್ರತಿಭಟನಾಕಾರರನ್ನು ಹಳಿಯುವ ಕೆಲಸ ಮಾಡಿದವು. ದೆಹಲಿಯಲ್ಲಿ ಪೊಲೀಸರು ಪ್ರತಿಭಟನಾಕಾರರ ಮೇಲೆ ನಡೆಸಿದ ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ, ಎಲ್ಡರ್ ಆಕ್ಟಿವಿಸ್ಟ್‌ಗಳ ಬಂಧನದಂತಹ ದೃಶ್ಯಗಳು ಜಾಗತಿಕ ಮಟ್ಟದಲ್ಲಿ ಸುದ್ದಿಯಾದರೂ, ನಮ್ಮದೇ ನೆಲದಲ್ಲಿರುವ ಗೋದಿ ಮೀಡಿಯಾಗಳು ಇದನ್ನು ಕಣ್ಣೆತ್ತಿ ನೋಡಲಿಲ್ಲ. ಅತಿಯಾದ ಭದ್ರತೆ ಅಥವಾ ಸಂಚಾರ ದಟ್ಟಣೆಯ ನೆಪವೊಡ್ಡಿ ಪೊಲೀಸರ ದೌರ್ಜನ್ಯವನ್ನು ಮರೆಮಾಚುವ ಅಥವಾ ಕಾನೂನು ಸುವ್ಯವಸ್ಥೆಯ ಹೆಸರಿನಲ್ಲಿ ಸರ್ಕಾರದ ಕ್ರಮಗಳನ್ನು ಸಮರ್ಥಿಸುವ ಧೋರಣೆ ತೋರಲಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ʼಆ ಗೋದಿ ಮೀಡಿಯಾʼಗಳ ಪೋಸ್ಟ್‌ಗಳನ್ನ ಗಮನಿಸಿದರೆ, “ಪೊಲೀಸರ ಮೇಲೇ ದೌರ್ಜನ್ಯ ಎಸಗಲು ಮುಂದಾದ ಯುವಕರು, ಇದು ಸರಿನಾ ತಪ್ಪಾ?”, “ಭದ್ರತಾ ನಿಯಮಗಳನ್ನ ಉಲ್ಲಂಘಿಸಿ ಪ್ರಧಾನಿ ಮೋದಿ ಮನೆ ಬಳಿ ಪ್ರೊಟೆಸ್ಟ್ ಮಾಡಿದ್ದು ಸರಿನಾ?” ಎಂದೆಲ್ಲಾ ಪೋಲ್ ಹಾಕುತ್ತಿವೆ. ಇದು ಜನರನ್ನ ದಿಕ್ಕು ತಪ್ಪಿಸುವ ಹುನ್ನಾರವಲ್ಲದೆ ಮತ್ತೇನಲ್ಲ.





