ಚುನಾವಣಾ ಆಯೋಗ ಬಿಜೆಪಿಗಾಗಿ ಮತ ಕಳ್ಳತನದಲ್ಲಿ ಭಾಗಿಯಾಗಿರುವುದಕ್ಕೆ ಶೇ 100 ರಷ್ಟು ಪುರಾವೆ ಇದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಚುನಾವಣಾ ಆಯೋಗವು ಮತ ಕಳ್ಳತನದಲ್ಲಿ ಭಾಗಿಯಾಗಿದೆ ಎಂಬುದಕ್ಕೆ ನಮ್ಮ ಬಳಿ ತೆರೆದ ಮತ್ತು ಮುಚ್ಚಿದ ಪುರಾವೆಗಳಿವೆ. ನಾನು ಇದನ್ನು ಶೇ. 100 ಪುರಾವೆಯೊಂದಿಗೆ ಹೇಳುತ್ತಿದ್ದೇನೆ ಎಂದು ರಾಹುಲ್ ಗಾಂಧಿ ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಬಲಾಢ್ಯರೊಂದಿಗೆ ಜೊತೆಯಾಗುವುದು ಜನದ್ರೋಹ
ʼಚುನಾವಣಾ ಆಯೋಗ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ. ನಾವು ಅದಕ್ಕೆ ಪುರಾವೆ ಬಿಡುಗಡೆ ಮಾಡಿದ ತಕ್ಷಣ, ಚುನಾವಣಾ ಆಯೋಗ ಬಿಜೆಪಿಯ ಮತ ಕಳ್ಳತನದಲ್ಲಿ ಭಾಗಿಯಾಗಿದೆ ಎಂದು ಇಡೀ ರಾಷ್ಟ್ರಕ್ಕೆ ತಿಳಿಯುತ್ತದೆ. ಮಧ್ಯಪ್ರದೇಶ ಚುನಾವಣೆ, ಲೋಕಸಭಾ ಚುನಾವಣೆಗಳಲ್ಲಿ ನಮಗೆ ಅನುಮಾನಗಳಿದ್ದವು ಮತ್ತು ಮಹಾರಾಷ್ಟ್ರ ಚುನಾವಣೆಯ ಸಮಯದಲ್ಲಿ ನಮ್ಮ ಅನುಮಾನಗಳು ಹೆಚ್ಚಾದವು.
ನಾವು ಆರು ತಿಂಗಳ ಕಾಲ ಈ ಬಗ್ಗೆ ನಮ್ಮದೇ ಆದ ತನಿಖೆ ನಡೆಸಿದ್ದೇವೆ ಮತ್ತು ನಮಗೆ ಸಿಕ್ಕಿದ್ದು ಪರಮಾಣು ಬಾಂಬ್. ಚುನಾವಣಾ ಆಯೋಗದಲ್ಲಿ ಮೇಲಿನಿಂದ ಕೆಳಕ್ಕೆ ಯಾರೇ ಇದನ್ನು ಮಾಡುತ್ತಿದ್ದರೂ ನಾವು ಅವರನ್ನು ಬಿಡುವುದಿಲ್ಲ. ಏಕೆಂದರೆ ಅವರು ಭಾರತದ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಇದು ದೇಶದ್ರೋಹವಾಗಿದೆ ಮತ್ತು ಅದಕ್ಕಿಂತ ಕಡಿಮೆಯೇನು ಅಲ್ಲʼ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.