ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC) ನಡೆಸಿದ ಅಧ್ಯಯನಗಳ ವರದಿಯು COVID-19 ಲಸಿಕೆ ಮತ್ತು ದೇಶದಲ್ಲಿನ ಹಠಾತ್ ಸಾವುಗಳಿಗೂ ಯಾವುದೇ ನೇರ ಸಂಬಂಧವಿಲ್ಲ ಎಂದು ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, “ಕಳೆದ ಮೂರ್ನಾಲ್ಕು ವರ್ಷಗಳಿಂದ ಸಂಭವಿಸುತ್ತಿರುವ ಹಠಾತ್ ಸಾವುಗಳ ಕುರಿತು ದೇಶದ ಹಲವಾರು ಸಂಸ್ಥೆಗಳ ಮೂಲಕ ತನಿಖೆ ನಡೆಸಿದ್ದೇವೆ. ಈ ಅಧ್ಯಯನಗಳು COVID-19 ಲಸಿಕೆ ಮತ್ತು ದೇಶದಲ್ಲಿನ ಹಠಾತ್ ಸಾವುಗಳ ವರದಿಗಳ ನಡುವೆ ಯಾವುದೇ ನೇರ ಸಂಬಂಧವಿಲ್ಲ ಎಂಬುದನ್ನು ನಿರ್ಣಯಿಸಿವೆ” ಎಂದು ಹೇಳಿದೆ.
“ICMR ಮತ್ತು NCDC ನಡೆಸಿದ ಅಧ್ಯಯನಗಳು ಭಾರತದಲ್ಲಿನ COVID-19 ಲಸಿಕೆಗಳು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ದೃಢಪಡಿಸುತ್ತವೆ. ಲಸಿಕೆಗಳ ಗಂಭೀರ ಅಡ್ಡಪರಿಣಾಮಗಳಿಗೆ ಅತ್ಯಂತ ಕಡಿಮೆ ನಿದರ್ಶನಗಳಿವೆ. ಹಠಾತ್ ಹೃದಯಘಾತ ಸಾವುಗಳು ತಳಿಶಾಸ್ತ್ರ (ಜೆನೆಟಿಕ್), ಜೀವನಶೈಲಿ, ಮೊದಲೇ ಇದ್ದ ಅನಾರೋಗ್ಯ ಪರಿಸ್ಥಿತಿ ಹಾಗೂ ಕೊರೋನಾ ನಂತರದ ಸಮಸ್ಯೆಗಳು ಕಾರಣವಾಗಿರಬಹುದು ಅಧ್ಯಯನ ತಿಳಿಸಿದೆ” ಎಂದು ಸಚಿವಾಲಯ ಹೇಳಿದೆ.
“ಎರಡೂ ಸಂಸ್ಥೆಗಳು ಹಠಾತ್ ಸಾವುಗಳ ಹಿಂದಿನ ಕಾರಣಗಳನ್ನು ಅರ್ಥಮಾಡಿಕೊಳ್ಳಲು ಕೆಲಸ ಮಾಡುತ್ತಿವೆ. ವಿಶೇಷವಾಗಿ 18 ರಿಂದ 45 ವರ್ಷ ವಯಸ್ಸಿನ ಯುವ ವಯಸ್ಕರ ಸಾವಿನ ಬಗ್ಗೆ ಅಧ್ಯಕ್ಷಯ ನಡೆಸುತ್ತಿವೆ. ಅದಕ್ಕಾಗಿ, ವಿಭಿನ್ನ ಸಂಶೋಧನಾ ವಿಧಾನಗಳನ್ನು ಅಳವಡಿಸಿಕೊಂಡಿವೆ” ಎಂದು ತಿಳಿಸಿದೆ.
“ICMRನ ರಾಷ್ಟ್ರೀಯ ಸಾಂಕ್ರಾಮಿಕ ರೋಗಶಾಸ್ತ್ರ ಸಂಸ್ಥೆ (NIE) ನಡೆಸಿದ ಮೊದಲ ಅಧ್ಯಯನವು 2021ರ ಅಕ್ಟೋಬರ್‌ನಿಂದ 2023ರ ಮಾರ್ಚ್‌ವರೆಗೆ ನಡೆದಿದೆ. ಎರಡನೇ ಅಧ್ಯಯನವನ್ನು ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ನಡೆಸಿದೆ. ಎರಡೂ ಅಧ್ಯಯನಗಳ ದತ್ತಾಂಶಗಳ ವಿಶ್ಲೇಷಣೆಯಲ್ಲಿ ಯುವಜನರು ಹೃದಯಾಘಾತ ಅಥವಾ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್‌ನಿಂದ (MI) ಹಠಾತ್ತನೆ ಸಾವನ್ನಪ್ಪುತ್ತಿದ್ದಾರೆ. ಇವುಗಳಲ್ಲಿ ಹೆಚ್ಚಿನ ಸಾವುಗಳಿಗೆ ಜೀನೆಟಿಕ್ ಮ್ಯೂಟೇಶನ್ಸ್ ಸಂಭವನೀಯ ಕಾರಣವಾಗಿದೆ ಎಂಬುದನ್ನು ಸೂಚಿಸಿವೆ” ಎಂದು ಸಚಿವಾಲಯ ವಿವರಿಸಿದೆ.
“ಈ ಎರಡು ಅಧ್ಯಯನಗಳು, ಭಾರತದಲ್ಲಿನ ಯುವಜನರಲ್ಲಿ ಸಂಭವಿಸುತ್ತಿರುವ ಹಠಾತ್ ಸಾವುಗಳಲ್ಲಿ ಕೋವಿಡ್-19 ಲಸಿಕೆ ಪಾತ್ರವಿಲ್ಲ. ಲಸಿಕೆಯು ಯುವಜನರ ಸಾವುಗಳ ವಿಚಾರವಾಗಿ ಅಪಾಯವನ್ನು ಹೆಚ್ಚಿಸುವುದಿಲ್ಲ. ಆದರೆ ಆಧಾರವಾಗಿರುವ ಆರೋಗ್ಯ ಸಮಸ್ಯೆಗಳು, ಆನುವಂಶಿಕ ಪ್ರವೃತ್ತಿ ಹಾಗೂ ಅಪಾಯಕಾರಿ ಜೀವನಶೈಲಿಯ ಆಯ್ಕೆಗಳು ಈ ಸಾವುಗಳಲ್ಲಿ ಪಾತ್ರವಹಿಸುತ್ತವೆ” ಎಂದು ಹೇಳಿದೆ.