ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆಯುವ 56ನೇ ಜಿಎಸ್‌ಟಿ ಕೌನ್ಸಿಲ್ ಸಭೆ ಸೆಪ್ಟೆಂಬರ್ 3ರಂದು ಪ್ರಾರಂಭವಾಗಿ ಸೆಪ್ಟೆಂಬರ್ 4ರಂದು ಮುಕ್ತಾಯಗೊಳ್ಳಲಿದೆ. ಕೌನ್ಸಿಲ್ ಸಭೆಯಲ್ಲಿ ಚರ್ಚೆ ನಡೆಸಿ ಶೇಕಡ 12 ಮತ್ತು ಶೇಕಡ 28 ಜಿಎಸ್‌ಟಿ ಸ್ಲ್ಯಾಬ್‌ಗಳನ್ನು ರದ್ದುಗೊಳಿಸಬಹುದು. ಎಂಬ ನಿರೀಕ್ಷೆ ತೆರಿಗೆ ಪಾವತಿದಾರರದ್ದು.
ಹಾಗೆಯೇ ಶೇಕಡ 18 ಮತ್ತು 5 ಎಂಬ ಎರಡು ಹಂತದ ತೆರಿಗೆ ರಚನೆ ಮಾಡಬಹುದುಇದಕ್ಕೂ ಹೆಚ್ಚಾಗಿ ತಂಬಾಕು ಮತ್ತು ಇತರ ಐಷಾರಾಮಿ ವಸ್ತುಗಳಂತಹ ಸರಕುಗಳಿಗೆ ಶೇಕಡ 40ರಷ್ಟು ಜಿಎಸ್‌ಟಿ ವಿಧಿಸುವ ಸಾಧ್ಯತೆಯೂ ಇದೆ.
ಇದನ್ನು ಓದಿದ್ದೀರಾ? ಪಾಪ್‌ಕಾರ್ನ್ ಮೇಲೆ ಮೂರು ರೀತಿಯ ಜಿಎಸ್‌ಟಿ; ಟ್ರೋಲ್ ಆದ ನಿರ್ಮಲಾ ಸೀತಾರಾಮನ್
ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಪಿಎಲ್ ಕ್ಯಾಪಿಟಲ್ ಅರ್ಥಶಾಸ್ತ್ರಜ್ಞ ಅರ್ಶ್ ಮೋಗ್ರೆ, “ಜಿಎಸ್‌ಟಿ ಕೌನ್ಸಿಲ್ ಸಭೆ ಒಂದು ಪ್ರಮುಖ ಸಂದರ್ಭವಾಗಲಿದೆ ಎಂಬ ನಿರೀಕ್ಷೆಯಿದೆ. ವಿಶೇಷವಾಗಿ ಆಟೋ, ಎಫ್‌ಎಂಸಿಜಿ ವಲಯಗಳಿಗೆ ಅಧಿಕ ಪ್ರಯೋಜನ ಲಭಿಸಲಿದೆ ಎಂಬ ನಿರೀಕ್ಷೆಯಿದೆ” ಎಂದಿದ್ದಾರೆ.
ಜಿಎಸ್‌ಟಿ ಕೌನ್ಸಿಲ್ ಸಭೆಯು ಪ್ರಮುಖವಾಗಿ ಆಟೋಮೊಬೈಲ್, ಎಫ್‌ಎಂಸಿಜಿ, ಗ್ರಾಹಕ ಬಾಳಿಕೆ ಬರುವ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ಸ್, ವಿಮೆ, ಟೈರ್‌ಗಳು, ಸಿನ್ ಪ್ರಾಡಕ್ಟ್ಸ್(ತಂಬಾಕು ಮೊದಲಾದವು) ಮೊದಲಾದವು ವಲಯಗಳಲ್ಲಿನ ಜಿಎಸ್‌ಟಿ ಬದಲಾವಣೆಯಾಗುವ ಸಾಧ್ಯತೆಯಿದೆ.
ಆಟೋಮೊಬೈಲ್ ಮತ್ತು ಎಫ್‌ಎಂಸಿಜಿ
ಆಟೋಮೊಬೈಲ್‌ಗಳಿಗೆ ಸದ್ಯ ಗರಿಷ್ಠ ಶೇ.28ರಷ್ಟು ತೆರಿಗೆ ಮತ್ತು ಸೆಸ್ ವಿಧಿಸಲಾಗುತ್ತದೆ. ಶೀಘ್ರದಲ್ಲೇ ಪರಿಷ್ಕರಣೆ ಮಾಡುವ ಸಾಧ್ಯತೆಯಿದೆ. ಆರಂಭಿಕ ಹಂತದ ಕಾರುಗಳಿಗೆ ಶೇ. 18ರಷ್ಟು ತೆರಿಗೆ, ಎಸ್‌ಯುವಿಗಳು ಮತ್ತು ಐಷಾರಾಮಿ ವಾಹನಗಳಿಗೆ ಶೇ.40ರಷ್ಟು ತೆರಿಗೆ ವಿಧಿಸುವ ಸಾಧ್ಯತೆಯಿದೆ. ಇನ್ನು ಎಫ್‌ಎಂಸಿಜಿ ವಲಯದಲ್ಲಿ ಶಾಂಪೂಗಳು, ಟೂತ್‌ಪೇಸ್ಟ್ ಮತ್ತು ಟಾಲ್ಕಮ್ ಪೌಡರ್‌ನಂತಹ ವಸ್ತುಗಳ ಜಿಎಸ್‌ಟಿಯನ್ನು ಶೇಕಡ 18ರಿಂದ ಶೇಕಡ 5ಕ್ಕೆ ಇಳಿಸಬಹುದು ಎಂದು ಮಾಧ್ಯಮಗಳು ವರದಿ ಮಾಡಿದೆ. ಹಾಲಿನ ಪುಡಿ, ಅಡುಗೆ ಎಣ್ಣೆಗಳು, ನೂಡಲ್ಸ್, ಚಾಕೊಲೇಟ್‌ಗಳು ಮತ್ತು ಸಕ್ಕರೆಯಂತಹ ಆಹಾರ ಪದಾರ್ಥಗಳಿಗೆ ಶೇಕಡ 12ರಷ್ಟು ಜಿಎಸ್‌ಟಿಯಿದ್ದು ಅದನ್ನು ಶೇಕಡ 5ಕ್ಕೆ ಇಳಿಸುವ ನಿರೀಕ್ಷೆಯಿದೆ.
ವಿಮೆ, ಗ್ರಾಹಕ ಬಾಳಿಕೆ ಬರುವ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ಸ್
“ಕೇಂದ್ರವು ಜೀವ ಮತ್ತು ಆರೋಗ್ಯ ವಿಮಾ ಕಂತುಗಳಿಗೆ GSTಯಿಂದ ವಿನಾಯಿತಿ ನೀಡಲು ಪ್ರಸ್ತಾಪಿಸಿದೆ” ಎಂದು ಬಿಹಾರದ ಉಪಮುಖ್ಯಮಂತ್ರಿ ಮತ್ತು ವಿಮಾ GoM ಸಂಚಾಲಕ ಸಾಮ್ರಾಟ್ ಚೌಧರಿ ಕಳೆದ ವಾರ ಹೇಳಿದ್ದಾರೆ. ಪ್ರಸ್ತುತ, ಈ ಪ್ರೀಮಿಯಂಗಳು ಶೇಕಡ 18ರಷ್ಟು ಜಿಎಸ್‌ಟಿಯನ್ನು ಒಳಗೊಂಡಿದೆ. ಗ್ರಾಹಕ ಬಾಳಿಕೆ ಬರುವ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳಾದ ಟಿವಿಗಳು, ವಾಷಿಂಗ್ ಮೆಷಿನ್‌ಗಳು ಮತ್ತು ರೆಫ್ರಿಜರೇಟರ್‌ಗಳಂತಹ ಆಯ್ದ ವರ್ಗಗಳ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆಗಳು ಕಡಿಮೆಯಾಗುವ ನಿರೀಕ್ಷೆಯಿದೆ. ಜಿಎಸ್‌ಟಿಯನ್ನು ಶೇಕಡ 28ರಿಂದ ಶೇಕಡ 18ಕ್ಕೆ ಇಳಿಸಬಹುದು ಎಂದು ಹೇಳಲಾಗುತ್ತಿದೆ.
ಟೈರ್‌ಗಳು ಮತ್ತು ಸಿನ್ ಪ್ರಾಡಕ್ಟ್ಸ್
ಸಾರಿಗೆ, ಕೃಷಿ, ಗಣಿಗಾರಿಕೆ ಮತ್ತು ನಿರ್ಮಾಣದಂತಹ ನಿರ್ಣಾಯಕ ವಲಯಗಳಲ್ಲಿ ಉಪಯೋಗಕ್ಕೆ ಬರುವ ವಸ್ತು ಟೈರ್ ಆಗಿರುವುದರಿಂದ ಅದನ್ನು ಐಷಾರಾಮಿ ಬಳಕೆಯ ವಸ್ತು ಎಂದು ಪರಿಗಣಿಸಬಾರದು ಎಂದು ಆಟೋಮೋಟಿವ್ ಟೈರ್ ತಯಾರಕರ ಸಂಘ (ATMA)ಸೋಮವಾರ ಸರ್ಕಾರಕ್ಕೆ ಮನವಿ ಮಾಡಿದೆ. ಈ ಮನವಿಯನ್ನು ಜಿಎಸ್‌ಟಿ ಕೌನ್ಸಿಲ್ ಪರಿಗಣಿಸುತ್ತದೆಯೇ ಕಾದುನೋಡಬೇಕಿದೆ. ಇನ್ನು ಹೊರತುಪಡಿಸಿ ಸಿನ್ ಪ್ರಾಡಕ್ಟ್ಸ್ ಎಂದು ಕರೆಯಲಾಗುವ ತಂಬಾಕು, ಪಾನ್ ಮಸಾಲಾ, ಸಿಗರೇಟ್‌ಗಳ ಮೇಲೆ ಶೇಕಡ 40ರಷ್ಟು ತೆರಿಗೆ ವಿಧಿಸುವ ಸಾಧ್ಯತೆಯೂ ಇದೆ.
