ಪಹಲ್ಗಾಮ್ ಹತ್ಯಾಕಾಂಡಕ್ಕೆ ಪಾಕಿಸ್ತಾನವನ್ನು ದೂಷಿಸಿದೆ ಭಾರತ. ಆದರೆ, ದೇಶದ ಹಾದಿ ಬೀದಿಗಳಲ್ಲಿ ಹಿಂದುತ್ವವಾದಿ ಗುಂಪುಗಳು ಕಾಶ್ಮೀರಿಗಳನ್ನು ಹಿಡಿದು ಬಡಿಯುವ ಬೆದರಿಕೆ ಹಾಕುವ ವರದಿಗಳಿವೆ. ಸಾಮಾಜಿಕ ಜಾಲತಾಣಗಳಲ್ಲೂ ಬೆದರಿಕೆಗಳು ತಲೆಯೆತ್ತಿವೆ.
ಹಲವು ನಗರಗಳು, ಪೇಟೆ ಪಟ್ಟಣಗಳಲ್ಲಿನ ಕಾಶ್ಮೀರಿಗಳು ಮುಚ್ಚಿದ ಕದಗಳ ಮರೆಯಲ್ಲಿ ಭೀತಿಯಲ್ಲಿ ಬದುಕುತ್ತಿದ್ದಾರೆ. ಕಾಶ್ಮೀರಿಗಳು ನಿಂದನೆಯ ಎರಡು ಭಾರಗಳನ್ನು ಹೊತ್ತಿದ್ದಾರೆ. ಒಂದು ಕಾಶ್ಮೀರಿಯ ಅಸ್ಮಿತೆ, ಅದರ ಮೇಲೆ ಮುಸಲ್ಮಾನ ಅಸ್ಮಿತೆ.
ಈಗಾಗಲೆ ದೇಶದ ಉದ್ದಗಲಕ್ಕೆ ಹಬ್ಬಿಸಿರುವ ಮುಸ್ಲಿಮ್ ದ್ವೇಷದ ಬೆಂಕಿಗೆ ಪಹಲ್ಗಾಮ್ ಆಕ್ರೋಶದ ತೈಲ ಎರೆಯಲಾಗುತ್ತಿದೆ. ಮುಸಲ್ಮಾನರು ನಿತ್ಯವೂ ತಮ್ಮ ದೇಶಭಕ್ತಿಗೆ ಪುರಾವೆ ತೋರಿಸಬೇಕಾಗಿ ಬಂದಿದೆ. ಕಾಶ್ಮೀರಿಗಳನ್ನು ಶಪಿಸಿ ನಿಂದಿಸಲಾಗುತ್ತಿದೆ. ಬೈಗುಳ, ಅವರು ಕಿರುಕುಳ, ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಉತ್ತರಾಖಂಡ, ಉತ್ತರಪ್ರದೇಶ, ಪಂಜಾಬ್ ಮುಂತಾದ ರಾಜ್ಯಗಳಲ್ಲಿ ಕಾಶ್ಮೀರಿ ಬಾಡಿಗೆದಾರರನ್ನು ಹೊರಹಾಕಲಾಗುತ್ತಿದೆ. ಕಂಗಾಲಾದ ಕಾಶ್ಮೀರಿ ವಿದ್ಯಾರ್ಥಿಗಳು ‘ಮನೆ’ಯತ್ತ ಮುಖ ಮಾಡಿದ್ದಾರೆ.
ದಾಳಿಯನ್ನು ಕಾಶ್ಮೀರಿಗಳು ಬಾಯಿತೆರೆದು ಮನಸಾರೆ ಖಂಡಿಸಿದ್ದಾರೆ. ಕಾಶ್ಮೀರ ಬಂದ್ ಆಚರಿಸಿದ್ದಾರೆ. ತಮ್ಮ ದುಃಖ ದುಗುಡ ಹೊರಹಾಕಿದ್ದಾರೆ. ಹತ್ಯೆ ನಡೆದಾಗ ಜೀವದ ಹಂಗು ತೊರೆದು ಪ್ರವಾಸಿಗರ ರಕ್ಷಣೆಯ ಪ್ರಯತ್ನ ಮಾಡಿದ್ದಾರೆ. ತಮ್ಮ ಮನೆ ಮನಗಳನ್ನು ಮಸೀದಿಗಳನ್ನು ಪ್ರವಾಸಿಗಳಿಗೆ ತೆರೆದು ಪೊರೆದಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಿದ, ಉಪಚರಿಸಿದ ವೈದ್ಯರು ದಾದಿಯರು ಕಾಶ್ಮೀರಿಗಳೇ. ಆದರೂ ದ್ವೇಷದ ದಳ್ಳುರಿಯನ್ನು ಹೊತ್ತಿಸಿ ಹರಡುವ ದುಷ್ಟ ಕೃತ್ಯಗಳು ಬೆಂಬಿಡದೆ ನಡೆದಿವೆ.
ಕೇಂದ್ರ ಸರ್ಕಾರದ ರಕ್ಷಣೆಯ ಮತ್ತು ಬೇಹುಗಾರಿಕೆಯ ಬಹುದೊಡ್ಡ ವೈಫಲ್ಯವನ್ನು ಮುಚ್ಚಿ ಹಾಕಲು ಈ ದಳ್ಳುರಿಗೆ ಕುಮ್ಮಕ್ಕು ನೀಡಲಾಗುತ್ತಿದೆಯೇ ಎಂಬ ಪ್ರಶ್ನೆಗಳೆದ್ದಿವೆ.
ಪಂಜಾಬಿನ ಜಲಂಧರದ ಜನದಟ್ಟಣೆಯ ಓಣಿಗಳಲ್ಲಿ ನಡೆಯುತ್ತಿದ್ದ ಕಾಶ್ಮೀರಿ ರೆಹಮತ್ ದಾರ್ ಗೆ ಪ್ರತೀಕಾರದ ನೋಟಗಳು ಬೆನ್ನು ಇರಿದು ಬೇಟೆಯಾಡಿದ ಭಾಸ.
ಎಟಿಎಂನ ದಾರ್ ಮತ್ತು ಗೆಳೆಯರನ್ನು ಇಬ್ಬರು ಅಪರಿಚಿತರು ಅವರ ಪರಿಚಯ ಕೇಳಿದರು. ಗೆಳೆಯರ ಗುಂಪು ಭಯಭ್ರಾಂತವಾಗಿ ಪರಾರಿಯಾಯಿತು. ಹಾಲು ಖರೀದಿಸಲು ಮನೆಯಿಂದ ಹೊರಬಿದ್ದ ದಾರ್ ಅವರನ್ನು ನೋಡಿದ ಮೂವರು ಇಸ್ಲಾಂ ಮತ್ತು ಕಾಶ್ಮೀರಿ ದ್ವೇಷದ ಮಾತುಗಳ ಉಗುಳಿದರು. ಯಾರೋ ಮಾಡಿದ ಹತ್ಯೆಗಳಿಗೆ ನಾವು ಬೆಲೆ ತೆರುತ್ತಿದ್ದೇವೆಂದಿದ್ದಾರೆ ದಾರ್.
ಉತ್ತರಾಖಂಡದ ದೆಹರಾದೂನ್ ನಲ್ಲಿ ಖಾಲಿ ಮಾಡಿ ತೊಲಗುವಂತೆ ಕಾಶ್ಮೀರಿಗಳಿಗೆ ಗಡುವು ವಿಧಿಸಿದೆ ಹಿಂದೂ ರಕ್ಷಾ ದಳ. ತೊಲಗದೆ ಹೋದರೆ ತಮ್ಮ ಕಾರ್ಯಕರ್ತರು ಕಾಶ್ಮೀರಿ ಮುಸಲ್ಮಾನರು ವಾಸಿಸುತ್ತಿರುವ ಮನೆಗಳಿಗೆ ನುಗ್ಗಿ ಅವರು ಊಹಿಸಲೂ ಆಗದ ‘ಟ್ರೀಟ್ಮೆಂಟ್’ ಕೊಡುತ್ತಾರೆ ಎಂದು ವಿಡಿಯೋ ಹೇಳಿಕೆ ನೀಡಿದ್ದಾರೆ. ಹಿಂದೂ ರಕ್ಷಾ ದಳದ ಮುಖಂಡನನ್ನು ಪೊಲೀಸರು ಬಂಧಿಸಿರುವುದು ಕಾಶ್ಮೀರಿ ವಿದ್ಯಾರ್ಥಿಗಳಿಗೆ ತುಸು ಭರವಸೆ ನೀಡಿದೆ. ಜಮ್ಮು ಕೂಡ ಕಾಶ್ಮೀರಿಗಳಿಗೆ ಅಸುರಕ್ಷತೆಯ ಭಾವನೆ ಹುಟ್ಟಿಸಿದೆ.
ಈ ವರದಿ ಓದಿದ್ದೀರಾ?: ಖಂಡನೆ, ಸಭೆ, ಬಂದ್, ಪ್ರತಿಭಟನೆ – ಇವು ಪಹಲ್ಗಾಮ್ ದಾಳಿಗೆ ರಾಜಕೀಯ ಪಕ್ಷಗಳ ಪ್ರತಿಕ್ರಿಯೆ; ಅಸಹ್ಯ ಮೆರೆದ ಬಿಜೆಪಿ
ರಾತ್ರಿ ವೇಳೆ ಮೋಟರ್ ಬೈಕುಗಳ ಮೇಲೆ ಯುವಕರು ಜೈ ಶ್ರೀರಾಮ್ ಘೋಷಣೆ ಕೂಗುವುದು ನಡೆದು, ಜಮ್ಮುವಿನ ಓಣಿಯೊಂದರಲ್ಲಿ ಜನ ಕಾಶ್ಮೀರಿ ವಿದ್ಯಾರ್ಥಿಯೊಬ್ಬನನ್ನು ಬಡಿಯುವ ವಿಡಿಯೋ, ಕಾಶ್ಮೀರದ ಹೊರಗೆ ನೆಲೆಸಿರುವ ಕಾಶ್ಮೀರಿಗಳನ್ನು ಭೀತಿಗೆ ದೂಡಿದೆ.
ಕಾಶ್ಮೀರಿ ಮುಸ್ಲಿಮ್ ಆಗಿದ್ದಕ್ಕೆ ಬಡಿಯಲಾಗಿದೆ. ಕಳೆದ ರಾತ್ರಿ ಜಮ್ಮುವಿನ ಜಾನಿಪುರದಲ್ಲಿ ಕಾಶ್ಮೀರಿ ವಿದ್ಯಾರ್ಥಿಯೊಬ್ಬನನ್ನು ಗುಂಪೊಂದು ಥಳಿಸಿದೆ. ಇದು ನಮ್ಮ ಮನೆ ಕೂಡ. ನಮ್ಮ ಗುರುತು ಅಸ್ಮಿತೆಯೇ ಅಪರಾಧವಾಗಿ ಹೋಗಿದೆಯಲ್ಲ? ಎಲ್ಲಿಯವರೆಗೆ?
ಕಾಶ್ಮೀರಿಗಳನ್ನು ಬೆದರಿಸುವ ವಿಡಿಯೋಗಳು ಹೊರಬಿದ್ದ ನಂತರ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲ ಅವರು ತಮ್ಮ ರಾಜ್ಯದ ಪ್ರಜೆಗಳ ಮೇಲೆ ಹಲ್ಲೆ ನಡೆಸದೆ ರಕ್ಷಿಸುವಂತೆ ದೇಶದ ನಾನಾ ಭಾಗದ ಜನತೆಯನ್ನು ವಿನಂತಿಸಿದ್ದಾರೆ- ಕಾಶ್ಮೀರಿ ನಾಗರಿಕರು ಭಾರತದ ಶತ್ರುಗಳಲ್ಲ. ಹತ್ಯಾಕಾಂಡಕ್ಕೆ ನಮ್ಮ ಒಪ್ಪಿಗೆಯಿಲ್ಲ.
ಈ ಹಿಂದೆ 2019ರಲ್ಲಿ ಪುಲ್ವಾಮಾ ಹತ್ಯಾಕಾಂಡ ನಡೆದಾಗ ದೆಹರಾದೂನ್ ನಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳು ಹುಡುಕಿ ಬಡಿಯಲಾಗಿತ್ತು. ಕಾಶ್ಮೀರಕ್ಕೆ ಹಿಂತಿರುಗಿದ ಅನೇಕ ವಿದ್ಯಾರ್ಥಿಗಳು ಮರಳಿ ಬರಲಿಲ್ಲ.
‘ಹೀಗಾಗಿ ಹೋಗಿದೆ ನಮ್ಮ ಬದುಕು…ಮತ್ತೆ ಮತ್ತೆ ಇದೇ ನಡೆಯುತ್ತದೆ…ಎಲ್ಲ ಭಯೋತ್ಪಾದಕರನ್ನು ಭಾರತ ಸರ್ಕಾರ ಒಂದೇ ಸಾರಿ ಯಾಕೆ ಹೊಡೆದು ಹಾಕುತ್ತಿಲ್ಲ? ಭಯೋತ್ಪಾದಕರ ಸಂಖ್ಯೆ ಸಣ್ಣದು. ಭಾರತ ಸರ್ಕಾರದ ಬಳಿ ಬಹುದೊಡ್ಡ ಸೇನೆಯಿದೆ. ಯಾವನೋ ಒಬ್ಬ ಭಯೋತ್ಪಾದಕ ಮಾಡುವ ಹತ್ಯೆಗಳಿಗೆ ನಮ್ಮ ಬದುಕುಗಳು ಬಲಿಯಾಗುತ್ತಿವೆ’ ಎಂಬುದು ಕಾಶ್ಮೀರಿ ವಿದ್ಯಾರ್ಥಿಗಳ ಅಳಲು.