ಯೋಗಿ ಆದಿತ್ಯನಾಥ ಮುಖ್ಯಮಂತ್ರಿಯಾಗಿರುವ ಉತ್ತರ ಪ್ರದೇಶ ರಾಜ್ಯದಲ್ಲಿ ವಿಚಿತ್ರ ಹಗರಣಗಳು ಬೆಳಕಿಗೆ ಬರುತ್ತಿವೆ. ಇತ್ತೀಚಿಗೆ ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳ ಪರವಾನಗಿ ನವೀಕರಣ ಅರ್ಜಿಗಳ ಪರಿಶೀಲನೆಯ ಸಂದರ್ಭದಲ್ಲಿ ಬಯಲುಗೊಂಡ ಹಗರಣ ದೇಶವ್ಯಾಪಿ ಚರ್ಚೆಗೆ ಗ್ರಾಸವಾಗಿದೆ.
ಉತ್ತರ ಪ್ರದೇಶ ರಾಜ್ಯದ ಆಗ್ರಾ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ 449 ವೈದ್ಯಕೀಯ ಸಂಸ್ಥೆಗಳನ್ನು ಕೇವಲ 15 ವೈದ್ಯರು ಕಾನೂನುಬಾಹಿರವಾಗಿ ನಡೆಸುತ್ತಿದ್ದಾರೆ. ಅವರಲ್ಲಿ ಒಬ್ಬನೇ ವೈದ್ಯ ಮೀರತ್, ಕಾನ್ಪುರ ಮತ್ತು ಪಶ್ಚಿಮ ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಸುಮಾರು 83 ಆಸ್ಪತ್ರೆಗಳನ್ನು ತಮ್ಮ ಹೆಸರಿನಲ್ಲಿ ನೋಂದಾಯಿಸಿಕೊಂಡಿದ್ದಾನೆ.
ಹಗರಣಗಳಲ್ಲಿ ಭಾಗಿಯಾದ ವೈದ್ಯರ ಪಟ್ಟಿಯಲ್ಲಿ, ಹೃದ್ರೋಗ, ಮಕ್ಕಳ ತಜ್ಞರು ಮತ್ತು ಶಸ್ತ್ರಚಿಕಿತ್ಸಕರು ಸೇರಿದ್ದಾರೆ. ರಾಜ್ಯ ಆರೋಗ್ಯ ಇಲಾಖೆಯ ದಾಖಲೆಗಳ ಪ್ರಕಾರ, 2022-2023ರಲ್ಲಿ 1,269 ವೈದ್ಯಕೀಯ ಕೇಂದ್ರಗಳನ್ನು ನೋಂದಾಯಿಸಲಾಗಿದೆ. ಇವುಗಳಲ್ಲಿ 494 ಆಸ್ಪತ್ರೆಗಳು, 493 ಕ್ಲಿನಿಕ್‌ಗಳು, 170 ಪೆಥಾಲಜಿ ಲ್ಯಾಬ್‌ಗಳು, 104 ಡಯಾಗ್ನೋಸ್ಟಿಕ್ ಸೆಂಟರ್‌ಗಳು, ಏಳು ಮಾದರಿ ಸಂಗ್ರಹ ಕೇಂದ್ರಗಳು ಮತ್ತು ಒಂದು ಡಯಾಲಿಸಿಸ್ ಕೇಂದ್ರ ಸೇರಿವೆ.
ಈ ಸುದ್ದಿ ಓದಿದ್ದೀರಾ? ಮಹಾರಾಷ್ಟ್ರ | ಬಿಜೆಪಿ ಔರಂಗಜೇಬ್‌ನನ್ನು ಗೋರಿಯಿಂದ ಎಬ್ಬಿಸಿದ್ದೇಕೆ?
ಇನ್ನೂ ಪ್ರಮುಖ ಸಂಗತಿ ಏನಂದರೆ, ಅರ್ಹತೆ ಇಲ್ಲದವರು ಆಸ್ಪತ್ರೆಗಳು, ಕ್ಲಿನಿಕ್‌ಗಳು ಮತ್ತು ಪೆಥಾಲಜಿ ಲ್ಯಾಬ್‌ಗಳನ್ನು ನಿರ್ವಹಿಸಲು ಆರೋಗ್ಯ ಇಲಾಖೆಯಿಂದ ವೈದ್ಯರ ಹೆಸರಿನಲ್ಲಿ ಪರವಾನಗಿ ಪಡೆದು ಜನರನ್ನು ವಂಚಿಸುತ್ತಿದ್ದಾರೆ. ಈ ವರ್ಷ ರಾಜ್ಯ ಸರ್ಕಾರವು ಪರವಾನಗಿ ನವೀಕರಣ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಮಾಡಬೇಕೆಂದು ಆದೇಶಿಸಿದ ನಂತರ ಇವೆಲ್ಲ ಹಗರಣ ಬಹಿರಂಗವಾಗಿವೆ.
ಪರವಾನಗಿ ನವೀಕರಣಕ್ಕಾಗಿ ಅರ್ಜಿ ಸಲ್ಲಿಸುವ ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳು ತರಬೇತಿ ಪಡೆದ ಅರೆವೈದ್ಯಕೀಯ ಸಿಬ್ಬಂದಿ, ಅಗ್ನಿ ಸುರಕ್ಷತಾ ಮಾನದಂಡಗಳ ಅನುಸರಣೆ ಮತ್ತು ವೈದ್ಯಕೀಯ ತ್ಯಾಜ್ಯದ ವಿಲೇವಾರಿಗೆ ಸಂಬಂಧಿಸಿದ ಅಗತ್ಯ ವಿವರಗಳನ್ನು ಒದಗಿಸಿಲ್ಲ. ಹಾಗೆಯೇ ಹಾಸಿಗೆ ಸಾಮರ್ಥ್ಯ ಮತ್ತು ಇತರ ಸೌಲಭ್ಯಗಳ ಬಗ್ಗೆಯೂ ನೀಡಿರುವ ಮಾಹಿತಿಯು ಅನುಮಾನ ಮೂಡಿಸಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಸದ್ಯ ಹಗರಣಗಳಲ್ಲಿ ಭಾಗಿಯಾದ ವೈದ್ಯರಿಗೆ ನೋಟಿಸ್ ಕಳುಹಿಸಲಾಗಿದ್ದು, ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.