ಫೆಬ್ರವರಿ 15ರಂದು ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಅನ್ನು ಅಸಾಂವಿಧಾನಿಕ ಎಂದು ಘೋಷಿಸಿದೆ. ಈ ಎಲೆಕ್ಟ್ರಾಲ್ ಬಾಂಡ್‌ಅನ್ನು ಯಾರು, ಯಾವಾಗ, ಯಾವ ಪಕ್ಷಕ್ಕಾಗಿ, ಎಷ್ಟು ಮೊತ್ತದ ಬಾಂಡ್ ಖರೀದಿಸಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಬಹಿರಂಗ ಮಾಡಲು ಎಸ್‌ಬಿಐಗೆ ಸುಪ್ರೀಂ ಸೂಚಿಸಿದೆ. ಮಾರ್ಚ್ 13ರವರೆಗೆ ಸಮಯವನ್ನು ನೀಡಿದೆ.
ಆದರೆ, ಎಸ್‌ಬಿಐ ಮಾತ್ರ ಇದಕ್ಕೆ ನಾಲ್ಕು ತಿಂಗಳು ಅವಕಾಶ ಕೊಡಿ ಎಂದು ಕೇಳಿದೆ. ಈ ನಡುವೆ ಈ ಪ್ರಕ್ರಿಯೆಗೆ ಅಷ್ಟೊಂದು ಸಮಯ ಬೇಕಾಗಿಲ್ಲ, ಎಸ್‌ಬಿಐ ಕೇಂದ್ರ ಸರ್ಕಾರದ ಒತ್ತಡಕ್ಕೆ ಒಳಗಾಗಿ ಈ ರೀತಿ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸುತ್ತಿದೆ ಎಂದು ವಿಪಕ್ಷಗಳು ಆರೋಪ ಮಾಡಿದೆ. ವಿಪಕ್ಷ ಮಾತ್ರವಲ್ಲದೆ ಕೆಲವು ಬ್ಯಾಂಕಿಂಗ್ ತಜ್ಞರುಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಕೂಡಾ ಎಸ್‌ಬಿಐ ನಡೆಯನ್ನು ವಿರೋಧಿಸಿದ್ದಾರೆ.
ಆದರೆ, ಯಾವುದೇ ಬ್ಯಾಂಕ್‌ಗೆ ಈ ಪ್ರಕ್ರಿಯೆಗಾಗಿ ಇಷ್ಟೊಂದು ಸಮಯ ಬೇಕಾಗಲ್ಲ ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಮಾಜಿ ಪ್ರಧಾನ ಕಾರ್ಯದರ್ಶಿ ಥಾಮಸ್ ಫ್ರಾಸ್ಕೋ ಹೇಳುತ್ತಾರೆ. “ಎಸ್‌ಬಿಐ ಅಧಿಕ ಸಮಯ ಕೇಳಿರುವುದು ತಯಾಷೆ ಅನಿಸುತ್ತದೆ. ಬ್ಯಾಂಕ್ ಈ ಹೇಳಿಕೆ ನೀಡಬಾರದಿತ್ತು,” ಎಂದು ದಿ ನ್ಯೂಸ್ ಮಿನಟ್ ಸಂದರ್ಶನದಲ್ಲಿ ಥಾಮಸ್ ಹೇಳಿದ್ದಾರೆ.
“ಯಾವುದೇ ಡಿಜಿಟಲ್ ಸಹಾಯ ಇಲ್ಲದೆ ಎಲ್ಲ ಕೆಲಸವನ್ನು ಬ್ಯಾಂಕ್‌ನ ಸಿಬ್ಬಂದಿಗಳೇ ಮಾಡಬೇಕಾದ ಸಮಯದಲ್ಲಿ ಈ ಚುನಾವಣಾ ಬಾಂಡ್‌ನ ಇದ್ದಿದ್ದರೆ ಇದರ ಸಂಪೂರ್ಣ ಮಾಹಿತಿಯನ್ನು ನೀಡಲು ನಮಗೆ ಅಧಿಕ ಸಮಯ ಬೇಕಾಗುತ್ತಿರಲಿಲ್ಲ. ಈಗ ಎಲ್ಲವೂ ಡಿಜಿಟಲ್ ಆಗಿದೆ. ಹಾಗಿರುವಾಗ ಅಧಿಕ ಸಮಯವನ್ನು ಕೇಳುವುದು ಸರಿಯಲ್ಲ,” ಎಂದಿರುವ ಥಾಮಸ್ ಈಗ ಎಲ್ಲ ಮಾಹಿತಿಯು ಒಂದೆಡೆ ಇರುತ್ತದೆ ಅಂದಿದ್ದಾರೆ.
ಬ್ಯಾಂಕ್‌ನಲ್ಲಿ ಯಾವ ಲೆಕ್ಕಾಚಾರವು ಬಾಕಿ ಉಳಿಯಲ್ಲ
ಕೆಲವು ಮಾಹಿತಿಯು ಡಿಜಿಟಲ್ ರೂಪದಲ್ಲಿದೆ, ಆದರೆ ಕೆಲವು ಮಾಹಿತಿ ಡಿಜಿಟಲ್ ರೂಪದಲ್ಲಿ ಇಲ್ಲ. ಇದನ್ನು ಜೊತೆ ಸೇರಿಸಿ ಸಂಪೂರ್ಣ ಡೇಟಾವನ್ನು ನೀಡಲು ನಮಗೆ ಸಮಯ ಬೇಕಾಗುತ್ತದೆ ಎಂದು ಎಸ್‌ಬಿಐ ಹೇಳಿಕೊಂಡಿದೆ. ಆದರೆ ಬ್ಯಾಂಕ್‌ನಲ್ಲಿ ಪ್ರತಿ ದಿನದ ಲೆಕ್ಕಾಚಾರವನ್ನು ಅದೇ ದಿನ ಮಾಡಲಾಗುತ್ತದೆ. ಯಾವುದೇ ಹಣಕಾಸು ವ್ಯವಹಾರವನ್ನು ಬ್ಯಾಂಕ್‌ನಲ್ಲಿ ಬಾಕಿ ಉಳಿಸಲು ಅವಕಾಶವಿಲ್ಲ. ಹಾಗಿರುವಾಗ ಎಸ್‌ಬಿಐನ ಈ ಹೇಳಿಕೆ ಸಂಶಯಕ್ಕೆ ಕಾರಣವಾಗಿದೆ. ಎಸ್‌ಬಿಐಗೆ ಕೇಂದ್ರದ ಒತ್ತಡವಿದೆ ಎಂಬುವುದು ಸ್ಪಷ್ಟವಾಗುತ್ತದೆ ಎಂದು ಥಾಮಸ್ ತಿಳಿಸಿದ್ದಾರೆ.
ಇನ್ನು ಬ್ಯಾಂಕ್‌ನಲ್ಲಿ ಚುನಾವಣಾ ಬಾಂಡ್ ಅನ್ನ ಯಾರೇ ಖರೀದಿ ಮಾಡಿದರೂ ಅವರ ಕೆವೈಸಿ ಮಾಡಲಾಗುತ್ತದೆ. ಹಣವನ್ನು ಇನ್ನೊಬ್ಬರ ಖಾತೆಯಿಂದಲೇ ಪಡೆಯಲಾಗುತ್ತದೆ. ಇವೆಲ್ಲವೂ ಡಿಜಿಟಲ್ ರೂಪದಲ್ಲಿಯೇ ನಡೆಯುತ್ತದೆ. ಇನ್ನು ಯಾರೇ ಈ ಬಾಂಡ್ ಖರೀದಿಸಿದರೂ ಕೂಡಾ ರಾಜಕೀಯ ಪಕ್ಷಗಳಿಗೆ ನೀಡುತ್ತಾರೆ. ಇದನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಬೇಕಾಗುತ್ತದೆ. ಹಾಗಿದ್ದಾಗ ಮತ್ತೆ ಅಲ್ಲಿ ಬ್ಯಾಂಕಿಂಗ್‌ನ ಡಿಜಿಟಲ್ ವ್ಯವಸ್ಥೆ ಬರುತ್ತದೆ ಎಂದು ಥಾಮಸ್ ಫ್ರಾಸ್ಕೋ ತಿಳಿಸುತ್ತಾರೆ.
ಬ್ಯಾಂಕಿನಲ್ಲಿ ಎಲ್ಲ ವಹಿವಾಟು ಅದೇ ದಿನ ಎಂಟ್ರಿ ಮಾಡಲಾಗುತ್ತದೆ. ಈ ಎಲ್ಲ ಮಾಹಿತಿ ಮುಂಬೈ ಬ್ರ್ಯಾಂಚ್‌ಗೆ ತಲುಪುತ್ತದೆ. ಅಂದರೆ ಎಲ್ಲ ಮಾಹಿತಿಯೂ ಮುಂಬೈ ಬ್ರ್ಯಾಂಚ್‌ನಲ್ಲಿ ಇರುತ್ತದೆ. ವಾರ್ಷಿಕವಾಗಿ ಆಡಿಟ್ ಕೂಡಾ ಮಾಡಲಾಗುತ್ತದೆ. ಹಾಗಿರುವಾಗ ಐದು ವರ್ಷದಿಂದ ಯಾಕೆ ಡೇಟಾ ಸರಿಯಾಗಿ ಎಂಟ್ರಿ ಆಗಿರುವುದಿಲ್ಲ? ಆ ಕಾರ್ಯ ಇನ್ನಷ್ಟೆ ಆಗಬೇಕು ಎಂದು ಬ್ಯಾಂಕ್ ಹೇಳುವುದು ಎಷ್ಟು ಸರಿ? ಎಂಬುವುದು ಬ್ಯಾಂಕ್‌ನಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸಿದ ಥಾಮಸ್ ಪ್ರಶ್ನೆಯಾಗಿದೆ.
ಬಾಂಡ್ ವಹಿವಾಟು ಹೇಗೆ ನಡೆಯುತ್ತದೆ?
ನಾವು ಸಾಮಾನ್ಯ ವಹಿವಾಟು ಪ್ರತಿನಿತ್ಯ ನಡೆಸಿದಂತೆ ಬಾಂಡ್ ವಹಿವಾಟು ನಡೆಸಲಾಗುವುದಿಲ್ಲ. ವರ್ಷದಲ್ಲಿ ನಾಲ್ಕು ಬಾರಿ ಮಾತ್ರ ಈ ವಹಿವಾಟಿಗೆ ಅವಕಾಶವಿದೆ. ದಿನಾಂಕವನ್ನು ಕೂಡಾ ನಿಗದಿಪಡಿಸಲಾಗುತ್ತದೆ. ಪ್ರತಿ ವರ್ಷ ದಿನಾಂಕ ಬದಲಾವಣೆಯಾದರೂ ಕೂಡ ಸರ್ಕಾರ ಇದನ್ನು ನಿರ್ಧಾರ ಮಾಡುತ್ತದೆ. ಸುಮಾರು ಐದರಿಂದ ಏಳು ದಿನಗಳ ಪ್ರಕ್ರಿಯೆ ಇದಾಗಿದೆ. ಎಲ್ಲ ಮಾಹಿತಿಯು ಕಂಪ್ಯೂಟರ್‌ನಲ್ಲೇ ಇರುವಾಗ ಹೆಚ್ಚು ಸಮಯ ಬೇಕಾಗಲ್ಲ ಎಂದು ಥಾಮಸ್ ಅಭಿಪ್ರಾಯವಾಗಿದೆ.
ಎಸ್‌ಬಿಐಗೆ ಸುಮಾರು ವರ್ಷದ ಇತಿಹಾಸ ಇದೆ. ಕೋಟ್ಯಾಂತರ ಜನರು ಇಲ್ಲಿ ಖಾತೆ ತೆರೆದಿದ್ದಾರೆ. ಹಾಗಿರುವಾಗ ಎಸ್‌ಬಿಐ ಈ ರೀತಿ ತಮಾಷೆಯಾಗಿ ಸುಪ್ರೀಂ ಮುಂದೆ ವಾದಿಸುವುದು ಸರಿ ಅಲ್ಲ. ಇದು ಬ್ಯಾಂಕ್‌ನ ಘನತೆ ಮತ್ತು ನಂಬಿಕೆಯನ್ನು ಕಡಿಮೆ ಮಾಡುತ್ತದೆ ಎಂದು ಥಾಮಸ್ ಹೇಳಿದ್ದಾರೆ.
ಎಸ್‌ಬಿಐ ಮೇಲೆ ಸರ್ಕಾರದ ಒತ್ತಡ ಇದು ಮೊದಲ ಬಾರಿಯಲ್ಲ, ಈ ಹಿಂದೆಯೂ ಆಗಿತ್ತು, ಒತ್ತಡ ಸಾಮಾನ್ಯ. ನೋಟು ಅಮಾನ್ಯ ಮಾಡಿದ ಸಂದರ್ಭದಲ್ಲಿಯೂ ಬ್ಯಾಂಕ್ ಮೇಲೆ ಒತ್ತಡ ಹಾಕಲಾಗಿತ್ತು. ನಮಗೆ ಬೇಕಾದಷ್ಟು ನಗದು ನೀಡದೆಯೇ ಎರಡು ದಿನ ಅವಕಾಶ ನೀಡಲಾಗಿತ್ತು. ಆದರೂ ನಾವು ಪರಿಸ್ಥಿತಿ ನಿಭಾಯಿಸಿದೆವು ಎಂದು ಥಾಮಸ್ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಸುಳ್ಳು ಹೇಳುತ್ತಿರುವ ಎಸ್‌ಬಿಐ ಚೇರ್‌ಮನ್ ಮೇಲೆ ಕ್ರಮಕೈಗೊಳ್ಳಬೇಕಾಗುತ್ತದೆ. ಇದು ಗಂಭೀರ ವಿಷಯವಾಗಿದೆ. ಇಲ್ಲಿ ಏನೋ ದೊಡ್ಡ ವಿಚಾರವು ಹೊರ ಬೀಳುವ ಭಯದಲ್ಲಿ ಸರ್ಕಾರವಿರುವಂತಿದೆ. ಈ ಚುನಾವಣಾ ಬಾಂಡ್ ಲೋಕ ಸಭೆ ಚುನಾವಣೆಯ ಮೇಲೆ ಪ್ರಭಾವ ಬೀರುವ ನಿರೀಕ್ಷೆಯಿದೆ ಎಂದು ಹೇಳಿದರು.
ಚುನಾವಣಾ ಬಾಂಡ್ ಲೆಕ್ಕಾಚಾರವೇ ಪ್ರತ್ಯೇಕ!
ಇನ್ನು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪ್ರತಿ ದಿನ ಸಾಕಷ್ಟು ವ್ಯವಹಾರ ನಡೆಯುತ್ತದೆ. ಹಾಗಿರುವಾಗ ಹೇಗೆ ಬರೀ ಚುನಾವಣಾ ಬಾಂಡ್‌ನ ವ್ಯವಹಾರ ಪತ್ತೆಹಚ್ಚುವುದು ಎಂದು ಕೇಳುವವರು ಇರಬಹುದು. ಆದರೆ ಈ ಸಂದರ್ಭದಲ್ಲಿ ಚುನಾವಣಾ ಬಾಂಡ್‌ಗಾಗಿಯೇ ಬ್ಯಾಂಕ್ ಐಟಿ ಸಿಸ್ಟಮ್ ಇದೆ ಎಂಬುವುದನ್ನು ನಾವು ತಿಳಿಯಬೇಕಾಗುತ್ತದೆ. ಆರ್‌ಟಿಐ ಅರ್ಜಿಗೆ ಉತ್ತರದಲ್ಲಿ ಈ ಮಾಹಿತಿಯನ್ನು ಎಸ್‌ಬಿಐ ಈ ಹಿಂದೆ ನೀಡಿದೆ. ಹಾಗಿರುವಾಗ ಡೇಟಾ ನೀಡಲು ಹೇಗೆ ತಡವಾಗುತ್ತದೆ ಎಂಬ ಪ್ರಶ್ನೆಯಿದೆ.