ದೆಹಲಿ ಹೈಕೋರ್ಟ್‌ನಲ್ಲಿ ರಿಲೀಫ್ ಸಿಗದ ಹಿನ್ನೆಲೆಯಲ್ಲಿ, ದೆಹಲಿ ಪೊಲೀಸರು ವಿಧಿಸಿರುವ 10,000 ರೂ. ಮೌಲ್ಯದ ಶಾಂತಿ ಬಾಂಡ್‌ಗೆ (Peace Bond) ಯಾವುದೇ ಕಾರಣಕ್ಕೂ ಸಹಿ ಹಾಕುವುದಿಲ್ಲ ಎಂದು ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ (AISA) ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ವಿಚಾರಣೆ ವೇಳೆ ಶಾಂತಿ ಕಾಪಾಡುವಂತೆ ಕೋರಿ ದೆಹಲಿ ಪೊಲೀಸರು ನೀಡಿದ್ದ ನೋಟೀಸ್ ಅನ್ನು ಪ್ರಶ್ನಿಸಿ ನೇಹಾ ಬೋರಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಅದಕ್ಕೆ ತಡೆ ನೀಡಲು ನಿರಾಕರಿಸಿತ್ತು.
ಹೊಸದೆಹಲಿಯ ಸಿಪಿಐ(ಎಂಎಲ್) ಲಿಬರೇಶನ್ ಸಂಸತ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನೇಹಾ ಬೋರಾ, ಈ ಬಾಂಡ್‌ಗಳ ಜಾರಿಯು ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುವ ಮೂಲಭೂತ ಹಕ್ಕಿಗೆ ವಿರುದ್ಧವಾಗಿವೆ ಎಂದು ಕಿಡಿಕಾರಿದರು.
“ಶಾಂತಿ ಬಾಂಡ್‌ಗಳ ಮೌಲ್ಯಮಾಪನ ಮತ್ತು ಜಾರಿಯು ನಮ್ಮ ಪ್ರಜಾಸತ್ತಾತ್ಮಕ ಭಿನ್ನಮತದ ಮೂಲಭೂತ ಹಕ್ಕಿಗೆ ವಿರುದ್ಧವಾಗಿದೆ ಎಂಬುದನ್ನು ದೇಶದ ನ್ಯಾಯಾಲಯಗಳು ಮನಗಾಣಲಿವೆ. ಮುಂದಿನ ದಿನಗಳಲ್ಲಿ ನಾವು ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಹೋರಾಟ ಮುಂದುವರಿಸುತ್ತೇವೆ. ಪ್ರಜಾಸತ್ತಾತ್ಮಕ ಪ್ರತಿಭಟನೆಗಳನ್ನು ಶಾಂತಿ ಭಂಗ ಎಂದು ಕರೆಯಬಾರದು. ಪ್ರಸ್ತುತ ರೂಪದಲ್ಲಿರುವ ಈ ಶಾಂತಿ ಬಾಂಡ್‌ಗೆ ಎಐಎಸ್‌ಎ ಅಥವಾ ನಾನು ಯಾವುದೇ ಕಾರಣಕ್ಕೂ ಸಹಿ ಹಾಕುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
ರಾಷ್ಟ್ರ ರಾಜಧಾನಿಯಲ್ಲಿ ನಡೆದ ‘ತಿರಂಗಾ ಮಾರ್ಚ್’ ಪ್ರತಿಭಟನೆಯ ವೇಳೆ ದೆಹಲಿ ಪೊಲೀಸರು ನೇಹಾ ಬೋರಾ ಅವರನ್ನು ವಶಕ್ಕೆ ಪಡೆದಿದ್ದರು. ಅದರ ಮಾರನೇ ದಿನ ಅಂದರೆ ಅಕ್ಟೋಬರ್ 17 ರಂದು ಅವರಿಗೆ ಈ ನೋಟೀಸ್ ಜಾರಿ ಮಾಡಲಾಗಿತ್ತು. ಚುನಾವಣಾ ತುರ್ತು ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿನ ಅನಿಯಮಿತತೆಗಳನ್ನು ಖಂಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಈ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಇಂತಹ ಬಾಂಡ್‌ಗಳ ಮೂಲಕ ಯಾರ ಶಾಂತಿಯನ್ನು ಕಾಪಾಡಲು ಸರ್ಕಾರ ಬಯಸುತ್ತಿದೆ ಎಂದು ಪ್ರಶ್ನಿಸಿದ ನೇಹಾ, “ನಾವು ಸರ್ಕಾರಕ್ಕೆ ಯಾವುದೇ ಪ್ರಶ್ನೆಗಳನ್ನು ಕೇಳದಿದ್ದರೆ, ನಾವಿಲ್ಲಿ ಯಾರ ಶಾಂತಿಯನ್ನು ಕಾಪಾಡುತ್ತಿರಬೇಕು?” ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಗ್ಯಾನೂ ವಿರುದ್ಧ ಪ್ರತಿಭಟನೆ: ವಿದ್ಯಾರ್ಥಿ ನಾಯಕಿ ನೇಹಾ ಬೋರಾ ಬಂಧನ
ಶನಿವಾರ ತರಾತುರಿಯಲ್ಲಿ ಮಂದಿರ್ ಮಾರ್ಗ್ ಪೊಲೀಸ್ ಠಾಣೆಗೆ ತೆರಳಿದಾಗ, 50-60ಕ್ಕೂ ಹೆಚ್ಚು ಬಲಪಂಥೀಯ ಗುಂಪುಗಳು ಠಾಣೆಯನ್ನು ಸುತ್ತುವರೆದು ತಮ್ಮ ವಿರುದ್ಧ ಘೋಷಣೆಗಳನ್ನು ಮೊಳಗಿಸಿದವು ಎಂದು ನೇಹಾ ಗಂಭೀರ ಆರೋಪ ಮಾಡಿದರು.
“ಪೊಲೀಸ್ ಠಾಣೆಯ ಹೊರಗೆ 50-60 ಜನರ ಗುಂಪು ಗುಂಪು ಸೇರಿದೆ, ಆದರೆ ಪೊಲೀಸರು ಅವರನ್ನು ಚದುರಿಸಲು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಇದು ಶಾಂತಿ ಭಂಗವಲ್ಲವೇ? ಆದರೆ ಸಾಮಾನ್ಯ ಜನರು ಗ್ಯಾನೇಶ್ ಕುಮಾರ್ ವಿರುದ್ಧ ಘೋಷಣೆ ಕೂಗಿದರೆ ಅದು ಶಾಂತಿ ಭಂಗವಾಗುತ್ತದೆ. ಬಲಪಂಥೀಯ ಗೂಂಡಾಗಳಿಗೆ ರಸ್ತೆ ತಡೆಯಲು, ಮಹಿಳಾ ವಕೀಲರು ಪೊಲೀಸ್ ಠಾಣೆಯೊಳಗೆ ಪ್ರವೇಶಿಸದಂತೆ ತಡೆಯಲು ಅಧಿಕಾರವಿದೆಯೇ? ನಾವೂ ಕಾಪಾಡಬೇಕಾದ ಶಾಂತಿ ಇದೇ ತಾನೇ?” ಎಂದು ನೇಹಾ ಬೋರಾ ಆಕ್ರೋಶ ವ್ಯಕ್ತಪಡಿಸಿದರು.





