ದೆಹಲಿಯಲ್ಲಿ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಗಳು ಭಾನುವಾರವೂ ಮುಂದುವರೆದಿದೆ. ಪೊಲೀಸ್ ಬ್ಯಾರಿಕೇಡ್‌ಗಳನ್ನು ಭೇದಿಸಿ, ಕನ್ನಾಟ್ ಪ್ಲೇಸ್‌ಗೆ ತೆರಳಿದ್ದ ವಿದ್ಯಾರ್ಥಿ ನಾಯಕಿ, ಅಖಿಲ ಭಾರತ ವಿದ್ಯಾರ್ಥಿ ಅಸೋಷಿಯೇಷನ್ (AISA) ಅಧ್ಯಕ್ಷೆ ನೇಹಾ ಬೋರಾ ಸೇರಿದಂತೆ ಹಲವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ನೇಹಾ ಬೋರಾ ಅವರು ನೀಡಿದ್ದ ಸಾರ್ವಜನಿಕ ಕರೆಗೆ ಸ್ಪಂದಿಸಿ ನೂರಾರು ಪ್ರತಿಭಟನಾಕಾರರು ಮತ್ತು ವಿದ್ಯಾರ್ಥಿಗಳು ದೆಹಲಿಯ ಆರ್.ಕೆ. ಆಶ್ರಮ ಮಾರ್ಗ ಬಳಿ ಜಮಾಯಿಸಿದ್ದರು. ಅಲ್ಲಿಂದ ನೇಹಾ ಬೋರಾ ಅವರು ಪ್ರತಿಭಟನಾಕಾರರೊಂದಿಗೆ ಕನ್ನಾಟ್ ಪ್ಲೇಸ್ ಕಡೆಗೆ ಪ್ರತಿಭಟನಾ ಮೆರವಣಿಗೆ ಸಾಗಿದ್ದರು. ಮಾರ್ಗಮಧ್ಯೆ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ದಾಟಿ ಪ್ರತಿಭಟನಾಕಾರರ ತಂಡ ಕನ್ನಾಟ್ ಪ್ಲೇಸ್ ಪ್ರದೇಶಕ್ಕೆ ಪ್ರವೇಶಿಸಿತು. ಪ್ರತಿಭಟನಾಕಾರರು ಕನ್ನಾಟ್ ಪ್ಲೇಸ್‌ಗೆ ತೆರಳುತ್ತಿದ್ದಂತೆಯೇ, ದೆಹಲಿ ಪೊಲೀಸರು ನೇಹಾ ಬೋರಾ ಮತ್ತು ಪ್ರತಿಭಟನಾಕಾರರನ್ನು ಬಲವಂತವಾಗಿ ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.
ರಾಜಧಾನಿಯ ಪ್ರಮುಖ ಪ್ರದೇಶಗಳಲ್ಲಿ ಜನಸ್ತೋಮವನ್ನು ನಿಯಂತ್ರಿಸಲು ಮತ್ತು ಮೆರವಣಿಗೆಯನ್ನು ಚದುರಿಸಲು ಪೊಲೀಸರು ಬಲಪ್ರಯೋಗ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಗಮನಾರ್ಹವೆಂದರೆ, ಶಾಂತಿಯುವ ಪ್ರತಿಭಟನೆ ನಡೆಸುವುದು ಸಾರ್ವಜನಿಕರ ಹಕ್ಕು. ಅದನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಶಾಂತಿಯಿಂದ ಪ್ರತಿಭಟನೆ ನಡೆಸುವ ಪ್ರತಿಭಟನಾಕಾರರನ್ನು ಬಂಧಿಸುವುದು ಕಾನೂನುಬಾಹಿರ ಎಂದು ಭಾನುವಾರವಷ್ಟೇ ಸುಪ್ರೀಂ ಕೋರ್ಟ್ ಹೇಳಿದೆ. ಆದಾಗ್ಯೂ, ಸುಪ್ರೀಂ ಕೋರ್ಟ್ ಸೂಚನೆಯನ್ನು ಗಾಳಿಗೆ ತೂರಿ, ನೇಹಾ ಬೋರಾ ಮತ್ತು ಹಲವರನ್ನು ಪೊಲೀಸರು ಬಂಧಿಸಿದ್ದಾರೆ.



