ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಜಗ್ನೇರ್‌ನಲ್ಲಿರುವ ಬ್ರಹ್ಮಕುಮಾರೀಸ್ ಆಶ್ರಮದ ಇಬ್ಬರು ಸಹೋದರಿಯರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಸಹೋದರಿಯರಾದ ಏಕ್ತಾ ಸಿಂಘಾಲ್ (38) ಮತ್ತು ಶಿಖಾ ಸಿಂಘಾಲ್ (34), ಶುಕ್ರವಾರ ರಾತ್ರಿ ಆಶ್ರಮದಲ್ಲಿ ಆತ್ಮಹತ್ಯೆ ಮಾಡಿಕೊಂಡು, ತಮ್ಮ ಕೃತ್ಯಕ್ಕೆ ನಾಲ್ವರು ಕಾರಣರೆಂದು ಡೆತ್‌ನೋಟ್ ಬರೆದಿಟ್ಟು ಹೋಗಿದ್ದರು. ಡೆತ್‌ನೋಟ್ ಜೊತೆಗೆ ಆಶ್ರಮದಿಂದ ಮೃತರ ಮೊಬೈಲ್ ಫೋನ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಗ್ರಾ ಜಿಲ್ಲೆಯ ಜಗ್ನೇರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
“ಶುಕ್ರವಾರ ರಾತ್ರಿ, ಬ್ರಹ್ಮಕುಮಾರೀಸ್ ಆಶ್ರಮಕ್ಕೆ ಸಂಬಂಧಿಸಿದ ಇಬ್ಬರು ಸಹೋದರಿಯರ ಆತ್ಮಹತ್ಯೆಯ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತು” ಎಂದು ಖೇರಗಢದ ಸಹಾಯಕ ಪೊಲೀಸ್ ಆಯುಕ್ತ ಮಹೇಶ್ ಕುಮಾರ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪ್ಯಾಲೆಸ್ತೀನ್‌ನಲ್ಲಿ ಇಸ್ರೇಲ್ ದಾಳಿ ಖಂಡಿಸುವ ವಿಶ್ವಸಂಸ್ಥೆಯ ನಿರ್ಣಯಕ್ಕೆ ಭಾರತ ಬೆಂಬಲ
ಕಳೆದ ಹಲವು ವರ್ಷಗಳಿಂದ ಸಹೋದರಿಯರಿಬ್ಬರೂ ಆಶ್ರಮದಲ್ಲಿ ವಾಸವಾಗಿದ್ದರು. ಡೆತ್‌ನೋಟ್‌ನಲ್ಲಿ ಸಹೋದರಿಯರು ನೀರಜ್, ತಾರಾ ಚಂದ್, ಗುಡ್ಡನ್ ಮತ್ತು ಪೂನಂ ಅವರು ತಮ್ಮ ಆತ್ಮಹತ್ಯೆಗೆ ಕಾರಣ ಎಂದು ಆರೋಪಿಸಿದ್ದರು.
“ ಆರೋಪಿಗಳು ಸಹೋದರಿಯರ ಸೋದರ ಸಂಬಂಧಿ. ಇವರು ಒಟ್ಟಾಗಿ ಜಗ್ನೇರ್‌ನಲ್ಲಿ ಆಶ್ರಮವನ್ನು ಸ್ಥಾಪಿಸಿದ್ದರು. ಆತ್ಮಹತ್ಯೆ ಪತ್ರದ ಪ್ರಕಾರ 25 ಲಕ್ಷ ರೂ. ಹಣ ವಿವಾದಕ್ಕೆ ಕಾರಣವಾಗಿತ್ತು” ಎಂದು ಪೊಲೀಸರು ಹೇಳಿದ್ದಾರೆ.
ತಾರಾ ಚಂದ್, ಗುಡ್ಡನ್ ಮತ್ತು ಪೂನಂ ಅವರನ್ನು ಬಂಧಿಸಲಾಗಿದ್ದು, ನೀರಜ್ ಸಿಂಘಾಲ್‌ಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಜಗ್ನೇರ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅವನೀತ್ ಮಾನ್ ಹೇಳಿದ್ದಾರೆ.