ಬಸ್ ಮತ್ತು ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪಿ, ಆರು ಮಂದಿ ಗಾಯಗೊಂಡಿರುವ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ. ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ.
ಮಂಗಳವಾರ ಛತ್ತೀಸ್‌ಗಢ ರಾಜಧಾನಿಯಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಕೆಂಡ್ರಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಗದಲ್‌ಪುರದಿಂದ (ಬಸ್ತರ್) ರಾಯ್‌ಪುರಕ್ಕೆ ಹೋಗುತ್ತಿದ್ದ ಬಸ್ ಹೈವಾ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಶಿವಮೊಗ್ಗ | ಭೀಕರ ಅಪಘಾತ ಇಬ್ಬರು ಮೃತ್ಯು
ಸ್ಥಳಕ್ಕೆ ಅಭಾನ್‌ಪುರದ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಅಭಾನ್‌ಪುರ ಪಟ್ಟಣ ನಿರೀಕ್ಷಕ ಸಿದ್ದೇಶ್ವರ ಪ್ರತಾಪ್, “ಲಾರಿಯನ್ನು ಹಿಂದಿಕ್ಕಲು ಪ್ರಯತ್ನಿಸುತ್ತಾ ವೇಗವಾಗಿ ಚಲಿಸುತ್ತಿದ್ದ ಬಸ್ ಟ್ರಕ್‌ಗೆ ಎಡಭಾಗದಿಂದ ಡಿಕ್ಕಿ ಹೊಡೆದಿದೆ. ರಾಯಲ್ ಟ್ರಾವೆಲ್ಸ್‌ನ ಬಸ್ ರಾಯ್‌ಪುರಕ್ಕೆ ತೆರಳುತ್ತಿತ್ತು. ಆರು ಮಂದಿ ಗಾಯಾಳುಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ” ಹೇಳಿದ್ದಾರೆ.
ಮೃತರೆಲ್ಲರೂ ಬಸ್‌ನ ಮುಂಭಾಗದ ಎಡಭಾಗದಲ್ಲಿ ಕುಳಿತಿದ್ದರು ಎಂದು ಹೇಳಲಾಗಿದೆ. ಈ ಭಾಗ ಸಂಪೂರ್ಣವಾಗಿ ಹಾನಿಗೊಂಡಿದೆ. ಮೃತರನ್ನು ಅಜರ್ ಅಲಿ(30), ಬಲರಾಮ್ ಪಟೇಲ್(46) ಮತ್ತು ಬರ್ಖಾ ಠಾಕೂರ್(31) ಎಂದು ಗುರುತಿಸಲಾಗಿದೆ.
