ಮಣಿಪುರದಲ್ಲಿ ಮತ್ತೆ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿದೆ. ಶುಕ್ರವಾರ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಬೆಳಗಿನ ಜಾವ ನಡೆದ ಹಿಂಸಾಚಾರದಲ್ಲಿ ಮಹಿಳೆ ಸೇರಿದಂತೆ ಮೂವರು ಕುಕಿ ಸಮುದಾಯಕ್ಕೆ ಸೇರಿದವರ ಹತ್ಯೆ ಮಾಡಲಾಗಿದೆ. ಸುಮಾರು ಏಳು ಮನೆಗಳು ಸುಟ್ಟು ಕರಕಲಾಗಿವೆ.
ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಕಾಂಗ್ಪೋಕ್ಪಿ ಜಿಲ್ಲೆಯ ಸೈತು-ಗಂಫಜೋಲ್ ಉಪವಿಭಾಗದಲ್ಲಿರುವ ಲೋಯಿಬೋಲ್ ಖುಲ್ಲೆನ್ ಎಂಬ ಸಣ್ಣ ಹಳ್ಳಿಯಲ್ಲಿ ಹಿಂಸಾಚಾರ ನಡೆದಿದೆ. ಮೃತರನ್ನು ಲೆತ್ಖೊಂಗಮ್ ಹಾವೊಕಿಪ್, ಅವರ ಪತ್ನಿ ತಿನ್ಮರಿ ಹಾವೊಕಿಪ್ ಮತ್ತು ಜಂಗ್ಮಿನ್ಲಾಲ್ ಹಾವೊಕಿಪ್ ಎಂದು ಗುರುತಿಸಲಾಗಿದೆ.
ಇದನ್ನು ಓದಿದ್ದೀರಾ? ಮಣಿಪುರ ಹಿಂಸಾಚಾರಕ್ಕೆ 2 ವರ್ಷ; ನಿಲ್ಲದ ಸಂಘರ್ಷ
ಈ ದಾಳಿಯನ್ನು ರಾಷ್ಟ್ರೀಯ ಸಮಾಜವಾದಿ ಮಂಡಳಿಯ ನಾಗಾಲಿಮ್ (ಎನ್‌ಎಸ್‌ಸಿಎನ್-ಐಎಂ) ಮತ್ತು ಅದರ ಪ್ರಾಕ್ಸಿ ಸಂಘಟನೆ ಜೆಲಿಯಾಂಗ್‌ರಾಂಗ್ ಯುನೈಟೆಡ್ ಫ್ರಂಟ್‌ನ ಸಶಸ್ತ್ರ ಕಾರ್ಯಕರ್ತರು ನಡೆಸಿದ್ದಾರೆ ಎಂದು ಕುಕಿ ಸಂಘಟನೆ ಕುಕಿ ಇನ್ಪಿ ಮಣಿಪುರ (ಕೆಐಎಂ) ಆರೋಪಿಸಿದೆ.
ಈ ಘಟನೆಯನ್ನು ಖಂಡಿಸಿದ ಕೆಐಎಂ, “ಈ ದಾಳಿಯಿಂದ ಆಸ್ತಿಪಾಸ್ತಿಗೆ ಭಾರಿ ಹಾನಿಯಾಗಿದೆ. ಈ ಹಿಂಸಾಚಾರ ಕೃತ್ಯದಿಂದಾಗಿ ಮೂವರು ಅಮಾಯಕರು ಮೃತಪಟ್ಟಿದ್ದಾರೆ. ಮನೆಗಳು, ಅಂಗಡಿಮುಗ್ಗಟ್ಟುಗಳು ನಾಶವಾಗಿವೆ. ಈ ಘಟನೆಯು ಮಾನವ ಘನತೆ ಮತ್ತು ಮೂಲಭೂತ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆ. ಮನೆಗಳನ್ನು ಸುಟ್ಟುಹಾಕುವುದನ್ನು ಎಂದಿಗೂ ಸಮರ್ಥಿಸಲಾಗದು” ಎಂದು ಹೇಳಿದೆ.
ಘಟನೆಯ ಬಗ್ಗೆ ತಕ್ಷಣ ತನಿಖೆ ನಡೆಸಬೇಕು. ಈ ದಾಳಿ ನಡೆಸಿದವರು ಯಾರು ಎಂದು ಗುರುತಿಸಿ, ಅವರ ಬಂಧಿಸಬೇಕು. ನ್ಯಾಯ ದೊರಕಿಸಿಕೊಡಬೇಕು ಎಂದು ಕೇಂದ್ರ ಸರ್ಕಾರ ಮತ್ತು ಭದ್ರತಾ ಸಂಸ್ಥೆಗಳನ್ನು ಸಂಘಟನೆಯು ಆಗ್ರಹಿಸಿದೆ.
ಮಣಿಪುರದಲ್ಲಿ 2023ರ ಮೇ ತಿಂಗಳಿನಿಂದ ಮೈತೇಯಿ ಮತ್ತು ಕುಕಿ-ಝೋ ಸಮುದಾಯಗಳ ನಡುವೆ ತೀವ್ರ ಜನಾಂಗೀಯ ಹಿಂಸಾಚಾರ ನಡೆಯುತ್ತಿದೆ. ಸರಣಿ ಹಿಂಸಾಚಾರದಲ್ಲಿ ಈವರೆಗೆ ಸುಮಾರು 250ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಾಗೆಯೇ 58,800ಕ್ಕೂ ಹೆಚ್ಚು ಮಂದಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಇಂದಿಗೂ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ.





