ತಮಿಳುನಾಡಿನಲ್ಲಿ ಬಿಜೆಪಿ ಪ್ರಮುಖ ಮುಖವಾಗಿ ಬೆಳೆದಿದ್ದ, ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಬಿಜೆಪಿಗೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದು, ರಾಜ್ಯದಲ್ಲಿ ಹೊಸ ‘ರಾಜಕೀಯ ಚಳವಳಿ’ಯೊಂದನ್ನು ಹುಟ್ಟುಹಾಕುವುದಾಗಿ ಘೋಷಿಸಿದ್ದಾರೆ. “ರಾಜಕಾರಣದಲ್ಲಿ ವ್ಯಕ್ತಿ ಪೂಜೆ ಹಾಗೂ ವಂಶಪಾರಂಪರ್ಯ ಆಡಳಿತವನ್ನು ನಾವು ಕೊನೆಗೊಳಿಸಬೇಕಿದೆ” ಎಂದು ಕರೆ ನೀಡಿರುವ ಅವರು, ಮುಂದಿನ ದಿನಗಳಲ್ಲಿ ಈ ಚಳವಳಿಯನ್ನು ಪೂರ್ಣಪ್ರಮಾಣದ ರಾಜಕೀಯ ಪಕ್ಷವಾಗಿ ರೂಪಿಸಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗಿದ್ದ ಅಣ್ಣಾಮಲೈ, ತಮ್ಮ ಅಧಿಕೃತ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು. ಪಕ್ಷದ ಹೈಕಮಾಂಡ್ ಅವರ ರಾಜೀನಾಮೆಯನ್ನು ಅಂಗೀಕರಿಸಿದೆ. ತಮ್ಮ ನಿರ್ಧಾರದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಮೂಲಕ ಮಾಹಿತಿ ಹಂಚಿಕೊಂಡಿರುವ ಅವರು, “ತಮಿಳುನಾಡಿನ ಹಿತಾಸಕ್ತಿಗಳ ವಿಚಾರದಲ್ಲಿ ನನ್ನ ಹಾಗೂ ರಾಷ್ಟ್ರೀಯ ನಾಯಕರ ನಿಲುವುಗಳು ಹೊಂದಾಣಿಕೆಯಾಗುತ್ತಿಲ್ಲ. ನಾನು 2025ರ ಡಿಸೆಂಬರ್ 4ರಂದೇ ಪಕ್ಷದ ವರಿಷ್ಠರಿಗೆ ರಾಜೀನಾಮೆ ನೀಡುವ ನಿರ್ಧಾರವನ್ನು ತಿಳಿಸಿದ್ದೆ. ಆದರೆ, 2026ರ ವಿಧಾನಸಭಾ ಚುನಾವಣೆ ಮುಗಿಯುವವರೆಗೂ ಕಾಯುವಂತೆ ಅವರು ಸೂಚಿಸಿದ್ದರು” ಎಂದು ವಿವರಿಸಿದ್ದಾರೆ.
ಇತ್ತೀಚೆಗೆ ಮುಕ್ತಾಯವಾದ 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೂ ಮುನ್ನ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳುವ ಬಿಜೆಪಿ ಕೇಂದ್ರ ನಾಯಕರ ನಿರ್ಧಾರಕ್ಕೆ ಅಣ್ಣಾಮಲೈ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ತಮಿಳುನಾಡಿನಲ್ಲಿ ಬಿಜೆಪಿ ಮೈತ್ರಿಯಿಲ್ಲದೆ ಸ್ವತಂತ್ರವಾಗಿ ಬೆಳೆಯಬೇಕು ಎಂಬುದು ಅವರ ನಿಲುವಾಗಿತ್ತು. ಆದರೆ, ಮೈತ್ರಿಗೆ ಮಣೆಹಾಕಿದ ಹೈಕಮಾಂಡ್, ಅಣ್ಣಾಮಲೈ ಅವರನ್ನು ಕಡೆಗಣಿಸಿತ್ತು. ಪರಿಣಾಮ, ಎಐಎಡಿಎಂಕೆ ಮೈತ್ರಿಕೂಟದಲ್ಲಿ 27 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ, ಕೇವಲ 1 ಸ್ಥಾನದಲ್ಲಿ ಗೆಲುವು ಸಾಧಿಸಿ, ಕೇವಲ ಶೇ 2.99ರಷ್ಟು ಮತಗಳನ್ನು ಮಾತ್ರ ಪಡೆಯುವ ಮೂಲಕ ತೀವ್ರ ಮುಖಭಂಗ ಅನುಭವಿಸಿತು.
ಇದನ್ನು ಓದಿದ್ದೀರಾ? ಮಾಯಾ – ಮೀರಾ ಐತಿಹಾಸಿಕ ಹಣಾಹಣಿ; ಫ್ರೆಂಚ್ ಓಪನ್ ಕಿರೀಟಕ್ಕೆ ಹೊಸ ಒಡತಿ ಯಾರು?
ಅಣ್ಣಾಮಲೈ ಅವರನ್ನು ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಿಂದಲೂ ದೂರವಿಡಲಾಗಿತ್ತು. ಈ ಬೆಳವಣಿಗೆಗಳೇ ಅವರ ನಿರ್ಗಮನಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ. ಇದರ ಜೊತೆಗೆ, ಸಿಬಿಎಸ್‌ಇ 9ನೇ ತರಗತಿಗೆ ತ್ರಿಭಾಷಾ ಸೂತ್ರವನ್ನು ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನೂ ಅವರು ಇತ್ತೀಚೆಗೆ ಬಹಿರಂಗವಾಗಿ ಟೀಕಿಸಿದ್ದರು.
ರಾಷ್ಟ್ರೀಯ ಪಕ್ಷವೊಂದರಲ್ಲಿ ಇದ್ದುಕೊಂಡು ಪ್ರಾದೇಶಿಕ ಹಿತಾಸಕ್ತಿಗಳನ್ನು ಹಾಗೂ ತಮ್ಮ ಬೆಳವಣಿಗೆಯನ್ನು ಸಾಧಿಸುವುದು ಕಷ್ಟಕರ ಎಂಬ ನಿರ್ಧಾರಕ್ಕೆ ಬಂದಿರುವ ಅಣ್ಣಾಮಲೈ, ‘ಮೊದಲು ತಮಿಳು’ ಹಾಗೂ ಜಾತ್ಯತೀತ ತತ್ವದಡಿಯ ಹೊಸ ವೇದಿಕೆಯನ್ನು ಕಟ್ಟಲು ಮುಂದಾಗಿದ್ದಾರೆ. ಇದರ ಮೊದಲ ಹೆಜ್ಜೆಯಾಗಿ, ಕೊಯಮತ್ತೂರು ಮೂಲವಾಗಿ ‘ಎಪಿಜೆ ಅಬ್ದುಲ್ ಕಲಾಂ ಸೆಂಟರ್ ಫಾರ್ ಎಥಿಕ್ಸ್ ಅಂಡ್ ಪಾಲಿಟಿಕ್ಸ್’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದು, ಜೊತೆಗೆ ಜನಸಾಮಾನ್ಯರನ್ನು ತಲುಪಲು Wetheleader.org ಎಂಬ ಡಿಜಿಟಲ್ ವೇದಿಕೆಯನ್ನೂ ಆರಂಭಿಸಿದ್ದಾರೆ.ಸಾಮಾನ್ಯ ಜನರನ್ನು ನಾಯಕರನ್ನಾಗಿ ರೂಪಿಸುವುದು ಹಾಗೂ ತಮಿಳುನಾಡಿನ ಆಡಳಿತ ವ್ಯವಸ್ಥೆಯಲ್ಲಿ ನೈತಿಕತೆಯನ್ನು ಮರುಸ್ಥಾಪಿಸುವುದು ತಮ್ಮ ಹೊಸ ಚಳವಳಿಯ ಪ್ರಮುಖ ಉದ್ದೇಶವಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.





