ಬಿಹಾರ ರಾಜಧಾನಿ ಪಾಟ್ನಾದ ಶಾಲೆಯೊಂದರ ಆವರಣದ ಟ್ಯಾಂಕಿನೊಳಗಡೆ ಮೂರು ವರ್ಷದ ಮಗು ಶವವಾಗಿ ಪತ್ತೆಯಾಗಿದ್ದು, ಆಕ್ರೋಶಿತರು ಶುಕ್ರವಾರ ಬೆಳಿಗ್ಗೆ ಶಾಲೆಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ದಿಘಾ ಪೊಲೀಸ್ ವ್ಯಾಪ್ತಿಯ ರಾಮ್‌ಜಿಚಕ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆಕ್ರೋಶಗೊಂಡ ಸ್ಥಳೀಯರು ರಸ್ತೆ ತಡೆ ನಡೆಸಿ ಶಾಲೆಗೆ ಬೆಂಕಿ ಹಚ್ಚಿದ್ದಾರೆ.
#WATCH | Patna, Bihar: An angry crowd sets a school on fire after the body of a student was allegedly found on school premises. More details awaited. pic.twitter.com/6OwmDe8mjY
— ANI (@ANI) May 17, 2024
ಮೂರು ವರ್ಷ ವಯಸ್ಸಿನ ಮಗು ಶಾಲೆಗೆ ಹೋಗಿದ್ದು, ಶಾಲಾ ಸಮಯ ಮುಗಿದು ಟ್ಯೂಷನ್‌ಗೆ ಹೋಗಿದೆ. ಸಂಜೆಯಾದರೂ ಮನೆಗೆ ಬಾರದ ಕಾರಣ ಕುಟುಂಬಸ್ಥರು ಮಗುವಿನ ಹುಡುಕಾಟ ಮಾಡಿದ್ದಾರೆ. ಇಂದು ಮುಂಜಾನೆ 3 ಗಂಟೆಗೆ ಶಾಲಾ ಆವರಣದಲ್ಲಿರುವ ಟ್ಯಾಂಕಿನೊಳಗೆ ಮಗುವಿನ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕಾರಿನಲ್ಲಿ ಆಕಸ್ಮಿಕ ಬೆಂಕಿ; ಚಾಲಕ ಜೀವಂತ ದಹನ
ಇದರಿಂದ ಆಕ್ರೋಶಗೊಂಡ ಸ್ಥಳೀಯರು ರಸ್ತೆ ತಡೆ ನಡೆಸಿ ಶಾಲೆಗೆ ಬೆಂಕಿ ಹಚ್ಚಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಘಟನೆಯ ವಿವರ ನೀಡಿದ ಪಾಟ್ನಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರ ಪ್ರಕಾಶ್, “ತಡ ರಾತ್ರಿ ನಮಗೆ ಪೋಷಕರು ಮಗು ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದು ನಮ್ಮ ತಂಡವು ಸ್ಥಳಕ್ಕೆ ತಲುಪಿ ಸಾಕ್ಷ್ಯ ಸಂಗ್ರಹಿಸಲು ಪ್ರಾರಂಭಿಸಿತು. ಸಿಸಿಟಿವಿಯಲ್ಲಿ ಮಗು ಶಾಲೆಗೆ ಪ್ರವೇಶಿಸುತ್ತಿರುವುದನ್ನು ನಾವು ನೋಡಿದ್ದೇವೆ. ಆದರೆ ಶಾಲೆಯಿಂದ ಹೊರಗೆ ಹೋಗುವುದು ಕಂಡುಬಂದಿಲ್ಲ” ಎಂದು ಹೇಳಿದರು.
“ಶವವನ್ನು ಮರೆಮಾಡಲಾಗಿದೆ, ಆದ್ದರಿಂದ ನಾವು ಇದನ್ನು ಕೊಲೆ ಪ್ರಕರಣವಾಗಿ ತನಿಖೆ ನಡೆಸುತ್ತೇವೆ, ಈ ಪ್ರಕರಣಕ್ಕೆ ಸಂಬಂಧಿಸಿ ನಾವು ಮೂವರನ್ನು ಬಂಧಿಸಿದ್ದೇವೆ” ಎಂದು ಮಾಹಿತಿ ನೀಡಿದರು.