ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಅಭ್ಯರ್ಥಿಯಾಗಲು ಕನಿಷ್ಠ ಮೂರು ವರ್ಷಗಳ ಕಾಲ ವಕೀಲರಾಗಿ ವೃತ್ತಿ ಜೀವನ ಹೊಂದಿರುವುದು ಮುಖ್ಯ ಎಂದು ಸುಪ್ರೀಂ ಕೋರ್ಟ್ ಇಂದು (ಮೇ 20) ಆದೇಶ ನೀಡಿದೆ.
ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ, ನ್ಯಾಯಮೂರ್ತಿಗಳಾದ ಎ.ಜಿ. ಮಸಿಹ್ ಮತ್ತು ಕೆ. ವಿನೋದ್ ಚಂದ್ರನ್ ಅವರ ಪೀಠವು ಇಂದು ಈ ತೀರ್ಪು ನೀಡಿದೆ.
ಇದನ್ನು ಓದಿದ್ದೀರಾ? ಕರ್ನಾಟಕ ಹೈಕೋರ್ಟ್‌ನ ಕೆಲ ನ್ಯಾಯಾಧೀಶರನ್ನು ವರ್ಗಾಯಿಸಿ: ಸುಪ್ರೀಂಗೆ ನೈಜ ಹೋರಾಟಗಾರರ ವೇದಿಕೆ ಮನವಿ
“ಸಿವಿಲ್ ನ್ಯಾಯಾಧೀಶರ (ಜೂನಿಯರ್ ವಿಭಾಗ) ಪರೀಕ್ಷೆಗೆ ಹಾಜರಾಗಲು ಕನಿಷ್ಠ ಮೂರು ವರ್ಷಗಳ ಕಾಲ ವಕೀಲರಾಗಿ ಅನುಭವ ಹೊಂದಿರಬೇಕು ಎಂಬ ನಿಯಮವನ್ನು ಮತ್ತೆ ಆರಂಭಿಸಬೇಕು” ಎಂದು ನ್ಯಾಯಾಲಯ ಆದೇಶಿಸಿದೆ. ಆದರೆ ಇದು ನಡೆಯುತ್ತಿರುವ ನ್ಯಾಯಾಂಗ ನೇಮಕಾತಿಗೆ ಅನ್ವಯಿಸುವುದಿಲ್ಲ ಎಂದೂ ಕೋರ್ಟ್ ಸ್ಪಷ್ಟಪಡಿಸಿದೆ.
“ಹೈಕೋರ್ಟ್‌ಗಳು ಈಗಾಗಲೇ ಸಿವಿಲ್ ನ್ಯಾಯಾಧೀಶರ (ಜೂನಿಯರ್ ವಿಭಾಗ) ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದರೆ, ಈ ಕನಿಷ್ಠ ಮೂರು ವರ್ಷ ವಕೀಲರಾಗಿ ಸೇವೆ ಸಲ್ಲಿಸಿರಬೇಕಾದ ನಿಯಮ ಅನ್ವಯವಾಗುವುದಿಲ್ಲ. ಮುಂದಿನ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾದಾಗ ಮಾತ್ರ ಇದು ಅನ್ವಯಿಸುತ್ತದೆ” ಎಂದು ನ್ಯಾಯಾಲಯ ಹೇಳಿದೆ.
ಕಾನೂನು ಪದವೀಧರರನ್ನು ನೇರವಾಗಿ ನ್ಯಾಯಾಧೀಶರಾಗಿ ನೇಮಿಸುವುದು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಆದ್ದರಿಂದ ಕನಿಷ್ಠ ವಕೀಲರಾಗಿ ಅನುಭವ ಹೊಂದಿರುವುದು ಮುಖ್ಯವಾಗುತ್ತದೆ ಎಂದು ತಿಳಿಸಿದೆ.
