ಭಾರತದ ಅತ್ಯಂತ ಪ್ರಸಿದ್ಧ ವನ್ಯಜೀವಿ ಸಂರಕ್ಷಣಾಕಾರ ಮತ್ತು ಲೇಖಕ ವಾಲ್ಮೀಕ್ ಥಾಪರ್ ಶನಿವಾರ ಬೆಳಿಗ್ಗೆ ನಿಧನರಾದರು. ಅವರಿಗೆ 73 ವರ್ಷವಾಗಿತ್ತು. ಥಾಪರ್ ಅವರ ತಂದೆ ರೋಮೇಶ್ ಥಾಪರ್ ಪ್ರಸಿದ್ಧ ಪತ್ರಕರ್ತರಾಗಿದ್ದರು. ಅವರ ಚಿಕ್ಕಮ್ಮ ಇತಿಹಾಸಕಾರ ರೊಮಿಲಾ ಥಾಪರ್ ಮತ್ತು ಅವರ ಸೋದರಸಂಬಂಧಿ ಪತ್ರಕರ್ತೆ ಕರಣ್ ಥಾಪರ್.
1952ರಲ್ಲಿ ನವದೆಹಲಿಯಲ್ಲಿ ಜನಿಸಿದ ಥಾಪರ್ ಅವರು ವಿಶೇಷವಾಗಿ ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿಕಾಡು ಹುಲಿಗಳ ಅಧ್ಯಯನ ಮತ್ತು ಸಂರಕ್ಷಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಸರ್ಕಾರೇತರ ಸಂಸ್ಥೆಯಾದ ರಣಥಂಬೋರ್ ಫೌಂಡೇಶನ್ ಅನ್ನು ಅವರು 1988ರಲ್ಲಿ ಸಹ-ಸ್ಥಾಪಿಸಿದರು.
ಇದನ್ನು ಓದಿದ್ದೀರಾ? ಹಿರಿಯ ಪತ್ರಕರ್ತ ಅರ್ಜುನ್ ದೇವ ನಿಧನ
ವಾಲ್ಮೀಕ್ ಥಾಪರ್ ಅವರು ದಿ ಡೂನ್ ಶಾಲೆಯಲ್ಲಿ ಅಧ್ಯಯನ ಮಾಡಿದ್ದು ನಂತರ ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಸಮಾಜಶಾಸ್ತ್ರದಲ್ಲಿ ಪದವಿ ಮಾಡಿದ್ದು, ಚಿನ್ನದ ಪದಕ ಪಡೆದಿದ್ದಾರೆ. ಥಾಪರ್ ನಟ ಶಶಿ ಕಪೂರ್ ಅವರ ಪುತ್ರಿ ರಂಗಭೂಮಿ ಕಲಾವಿದೆ ಸಂಜನಾ ಕಪೂರ್ ಅವರನ್ನು ವಿವಾಹವಾದರು. ಅವರಿಗೆ ಒಬ್ಬ ಮಗನಿದ್ದಾನೆ.
ಪ್ರಧಾನ ಮಂತ್ರಿ ನೇತೃತ್ವದ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸೇರಿದಂತೆ 150ಕ್ಕೂ ಹೆಚ್ಚು ಸರ್ಕಾರಿ ಸಂಸ್ಥೆಗಳ ಮತ್ತು ಕಾರ್ಯಪಡೆಗಳ ಭಾಗವಾಗಿದ್ದರು. 2005ರಲ್ಲಿ, ಸರಿಸ್ಕಾ ಹುಲಿ ಮೀಸಲು ಪ್ರದೇಶದಿಂದ ಹುಲಿಗಳು ಕಣ್ಮರೆಯಾದ ನಂತರ ಹುಲಿ ಮೀಸಲು ಪ್ರದೇಶಗಳ ನಿರ್ವಹಣೆಯನ್ನು ಪರಿಶೀಲಿಸಲು ಯುಪಿಎ ಸರ್ಕಾರ ಸ್ಥಾಪಿಸಿದ ಟೈಗರ್ ಟಾಸ್ಕ್ ಫೋರ್ಸ್‌ನ ಸದಸ್ಯರಾಗಿ ಥಾಪರ್ ಅವರನ್ನು ನೇಮಿಸಲಾಯಿತು.
ಥಾಪರ್ ವನ್ಯಜೀವಿಗಳ ಕುರಿತು 30ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ ಮತ್ತು ಸಂಪಾದಿಸಿದ್ದಾರೆ. ಅವುಗಳಲ್ಲಿ ಲ್ಯಾಂಡ್ ಆಫ್ ದಿ ಟೈಗರ್: ಎ ನ್ಯಾಚುರಲ್ ಹಿಸ್ಟರಿ ಆಫ್ ದಿ ಇಂಡಿಯನ್ ಸಬ್‌ಕಾಂಟಿನೆಂಟ್(1997), ಮತ್ತು ಟೈಗರ್ ಫೈರ್: 500 ಇಯರ್ಸ್ ಆಫ್ ದಿ ಟೈಗರ್ ಇನ್ ಇಂಡಿಯಾ ಸೇರಿವೆ. ಬಿಬಿಸಿಯಂತಹ ಚಾನೆಲ್‌ಗಳಿಗಾಗಿ ಹಲವು ಪ್ರಸಿದ್ಧ ಚಲನಚಿತ್ರಗಳನ್ನು ಸಹ-ನಿರ್ಮಿಸಿದ್ದಾರೆ.
ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಸೇರಿದಂತೆ ಹಲವು ಮಂದಿ ವಾಲ್ಮೀಕ್ ಥಾಪರ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
