ತಿರುಪತಿ ದೇವಸ್ಥಾನದಲ್ಲಿ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪಗಳ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ಸ್ವತಂತ್ರ ಸಮಿತಿಯನ್ನು ರಚಿಸುವಂತೆ ಕೋರಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸೋಮವಾರ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ತಿರುಪತಿ ತಿರುಮಲ ದೇವಸ್ಥಾನದ ಪ್ರಸಾದದಲ್ಲಿ ಪ್ರಾಣಿಗಳ ಮಾಂಸ ಮತ್ತು ಇತರ ಕೊಳೆತ ವಸ್ತುಗಳೊಂದಿಗೆ ಕಲಬೆರಕೆ ಮಾಡಲಾಗಿದೆ ಎಂದು ಸಿಎಂ ಸಿ.ಬಿ.ನಾಯ್ಡು ಮಾಡಿರುವ ಆಧಾರ ರಹಿತ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ಕೋರಿ ಇಂದು ನಾನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೇನೆ” ಎಂದು ಹೇಳಿದ್ದಾರೆ.
ತಿರುಪತಿ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ವಿಶೇಷ ತನಿಖಾ ತಂಡವನ್ನು ಭಾನುವಾರ ಘೋಷಿಸಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ಸ್ವತಂತ್ರ ಸಮಿತಿ ರಚನೆಯಾಗಬೇಕು ಎಂದು ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ತಿರುಪತಿ ಲಡ್ಡು ಪ್ರಸಾದ ಬಳಸದಿರಲು ಕರ್ನಾಟಕದ ಅರ್ಚಕರ ಸಂಘ ನಿರ್ಧಾರ
ಇನ್ನು ತಿರುಮಲ ದೇವಸ್ಥಾನವನ್ನು ಪವಿತ್ರಗೊಳಿಸಲೆಂದು ನಾಲ್ಕು ಗಂಟೆಗಳ ಶಾಂತಿ ಹೋಮ ಪಂಚಗವ್ಯ ಪ್ರೋಕ್ಷಣೆ (ವಿದ್ಯಾಚರಣೆಯ ನೈರ್ಮಲ್ಯ) ಈಗ ನಡೆಯುತ್ತಿದೆ ಎಂದು ದೇವಾಲಯದ ಮೂಲಗಳು ಸೋಮವಾರ ತಿಳಿಸಿವೆ.
ಶಾಂತಿ ಹೋಮ ಪಂಚಗವ್ಯ ಪ್ರೋಕ್ಷಣೆ ಕಾರ್ಯವು ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾಗಿದ್ದು 10 ಗಂಟೆಯವರೆಗೆ ಇರಲಿದೆ ಎಂದು ಟಿಟಿಡಿ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಇನ್ನು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ವೆಂಕಟೇಶ್ವರನ ಕೃಪೆಗಾಗಿ 11 ದಿನಗಳ ತಪಸ್ಸು ಕೈಗೊಳ್ಳುವುದಾಗಿ ಶನಿವಾರ ಹೇಳಿದ್ದಾರೆ.
Today I filed a PIL seeking Supreme Court direction to investigate unsubstantiated allegation by CM C.B. Naidu that the Tirupati Tirumala Temple Prasadam were adulterated with meat of animals and other rotten items creating chaos almost bhaktas
— Subramanian Swamy (@Swamy39) September 23, 2024
