ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಆಡಳಿತ ಮಂಡಳಿಯ ಅಧ್ಯಕ್ಷ ಬಿ ಆರ್ ನಾಯ್ಡು ಅವರು ಸೋಮವಾರ ತಮ್ಮ ಚೊಚ್ಚಲ ಸಭೆ ಬಡೆಸಿದ್ದು, ದೇವಾಲಯದ ನಿರ್ವಹಣೆ ಮತ್ತು ಸೌಲಭ್ಯ ಸುಧಾರಣೆಗೆ ಕೆಲವು ನಿರ್ಧಾರಗಳನ್ನು ಕೈಗೊಂಡಿದ್ದಾರೆ.
ತಿರುಪತಿ ತಿಮ್ಮಪ್ಪನ ಭಕ್ತರಿಗೆ ಟಿಟಿಡಿ ಗುಡ್ ನ್ಯೂಸ್ ನೀಡಿದೆ. ಕೇವಲ ಎರಡರಿಂದ ಮೂರು ಗಂಟೆಗಳಲ್ಲಿ ಸಾಮಾನ್ಯ ಭಕ್ತರಿಗೂ ದರ್ಶನ ನೀಡುವ ರೀತಿಯಲ್ಲಿ ಟಿಟಿಡಿ ಕ್ರಮ ಕೈಗೊಂಡಿದೆ.
ಕೇವಲ 2ರಿಂದ 3 ಗಂಟೆಯೊಳಗೆ ಸಾಮಾನ್ಯ ಭಕ್ತರು ದೇವರ ದರ್ಶನ ಪಡೆಯುವಂತೆ ಬದಲಾವಣೆ ತರಲು ಎಐ ಮತ್ತು ಆಧುನಿಕ ತಂತ್ರಜ್ಞಾನ ಬಳಸಲು ಕ್ರಮಕೈಗೊಳ್ಳಲಾಗಿದೆ. ಕಂಪಾರ್ಟ್‌ಮೆಂಟ್‌ಗಳಲ್ಲಿ ಭಕ್ತರಿಗೆ ತೊಂದರೆ, ಕಿರಿಕಿರಿ ಉಂಟಾಗದಂತೆ ದರ್ಶನ ಲಭ್ಯವಾಗಲು ಈ ಯೋಜನೆ ರೂಪಿಸಲಾಗಿದೆ.
“ದೇವಾಲಯವು ಆಧ್ಯಾತ್ಮಿಕತೆಯ ಮೇಲೆ ಕೇಂದ್ರೀಕರಿಸಬೇಕು ಮತ್ತು ರಾಜಕೀಯ ಪ್ರಭಾವದಿಂದ ಮುಕ್ತವಾಗಿರಬೇಕು. ರಾಜಕೀಯ ವಿಷಯಗಳ ಮೇಲಿನ ನಿಷೇಧ ಮುಂದುವರಿಯಲಿದೆ. ತಿರುಮಲದ ಅತಿಥಿ ಗೃಹಗಳಿಗೆ ವೈಯಕ್ತಿಕ ಅಥವಾ ರಾಜಕೀಯ ಹೆಸರುಗಳನ್ನು ಇಡಬಾರದು” ಎಂದು ಟಿಟಿಡಿ ನಿರ್ಧರಿಸಿದೆ.
ಶಾರದಾ ಪೀಠದ ಗುತ್ತಿಗೆ ಒಪ್ಪಂದ ರದ್ದು
ವಿಶಾಖಪಟ್ಟಣದಲ್ಲಿರುವ ಶಾರದಾ ಪೀಠದ ಗುತ್ತಿಗೆ ಒಪ್ಪಂದವನ್ನು ರದ್ದುಗೊಳಿಸಲು ಟಿಟಿಡಿ ಮಂಡಳಿ ನಿರ್ಧರಿಸಿದೆ. ಹೆಚ್ಚುವರಿಯಾಗಿ, ಶಾರದಾ ಪೀಠದ ಕಟ್ಟಡ ನಿರ್ವಹಣೆಯ ಸಂಪೂರ್ಣ ನಿಯಂತ್ರಣವನ್ನು ವಹಿಸಿಕೊಳ್ಳಲು ಟಿಟಿಡಿ ಉದ್ದೇಶಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಣಿಪುರ – ಭಾರತವನ್ನು ದೇಶವಾಗಿ ಉಳಿಸಿಕೊಳ್ಳಲು ಶಾಂತಿ, ಸೋದರತೆ ಅಗತ್ಯವೆಂದು ಪ್ರಧಾನಿ ಅರಿತಿರುವರೇ?
ಹಿಂದೂಗಳೇ ಮಾತ್ರ ಕೆಲಸ
ತಿರುಮಲದಲ್ಲಿ ಕೆಲಸ ಮಾಡುವ ಹಿಂದೂಯೇತರ ಸಿಬ್ಬಂದಿಯ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂದು ಕೋರಿ ಆಂಧ್ರಪ್ರದೇಶ ಸರ್ಕಾರಕ್ಕೆ ಪತ್ರ ಬರೆಯಲು ಟಿಟಿಡಿ ಮಂಡಳಿ ನಿರ್ಧರಿಸಿದೆ.
“ತಿರುಮಲದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಹಿಂದೂಗಳೇ ಆಗಿರಬೇಕು. ಟಿಟಿಡಿಯು ಹಿಂದೂ ದತ್ತಿ ಸಂಸ್ಥೆಯಾಗಿರುವುದರಿಂದ ಹಿಂದೂಯೇತರರು ಸಿಬ್ಬಂದಿಯಾಗಿ ಮುಂದುವರಿಯಲು ಅವಕಾಶ ನೀಡುವುದಿಲ್ಲ” ಎಂದು ಟಿಟಿಡಿ ಮಂಡಳಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಬಿ.ಆರ್.ನಾಯ್ಡು ಈ ಹಿಂದೆ ಘೋಷಿಸಿದ್ದರು.
ಇತರ ಧರ್ಮಕ್ಕೆ ಸೇರಿದ ಸಿಬ್ಬಂದಿಯನ್ನು ಸರ್ಕಾರದ ಇತರ ಇಲಾಖೆಗಳಿಗೆ ನಿಯುಕ್ತಿಗೊಳಿಸುವ ಅಥವಾ ಸ್ವಯಂ ನಿವೃತ್ತಿಗೆ (ವಿಆರ್‌ಎಸ್) ಅವಕಾಶ ಕಲ್ಪಿಸಲು ಟಿಟಿಡಿ ನಿರ್ಧರಿಸಿದೆ.
“ತಿರುಮಲದಲ್ಲಿ ಯಾವುದೇ ರೀತಿಯ ರಾಜಕೀಯ ಹೇಳಿಕೆಗಳಿಗೆ ಅವಕಾಶ ನೀಡುವುದಿಲ್ಲ. ಅಂತಹ ವ್ಯಕ್ತಿಗಳು ಮತ್ತು ರಾಜಕೀಯ ಪಕ್ಷಗಳ ಪರ ಪ್ರಚಾರ ಮಾಡುವವರ ವಿರುದ್ಧ ಅಗತ್ಯಬಿದ್ದರೆ ಕಾನೂನುಬದ್ಧವಾಗಿ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ನಾಯ್ಡು ತಿಳಿಸಿದ್ದಾರೆ.