ಪಶ್ಚಿಮ ಬಂಗಾಳ ಪಶ್ಚಿಮ ಮೇದಿನಿಪುರ್ ಜಿಲ್ಲೆಯ ಸಬಾಂಗ್ ಪ್ರದೇಶದ ಹಳ್ಳಿಯೊಂದರಲ್ಲಿ ಕಳ್ಳತನದ ಆರೋಪದ ಮೇಲೆ ಮಂಗಳವಾರ ರಾತ್ರಿ ಲೋಧಾ ಶಬರ್ ಸಮುದಾಯದ 13 ವರ್ಷದ ಬುಡಕಟ್ಟು ಸಮುದಾಯದ ಬಾಲಕನನ್ನು ಹತ್ಯೆಗೈದ ಆರೋಪದಲ್ಲಿ ಟಿಎಂಸಿಯ ಸ್ಥಳೀಯ ಮುಖಂಡ ಮತ್ತು ಆರು ಪಕ್ಷದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಸೆ.27ರಂದು ಬುಧವಾರ ಸಬಾಂಗ್‌ನ ಬೋರೋಚರಾ ಗ್ರಾಮದ ನಿವಾಸಿ, ಲೋಧಾ ಶಬರ್ ಸಮುದಾಯದ ಬಾಲಕ ಸುಭಾ ನಾಯಕ್ ಎಂಬಾತನನ್ನು ಆಹಾರ ಕಳ್ಳತನ ಮಾಡಿದ್ದಾನೆಂದು ಆರೋಪಿಸಿ ಮರಕ್ಕೆ ಕಟ್ಟಿಹಾಕಿ ಹಾಕಿ ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿತ್ತು.
ಅಂಗಡಿಯಿಂದ ಆಹಾರದ ಪೊಟ್ಟಣಗಳು ಕಾಣೆಯಾಗಿದ್ದ ಆರೋಪದ ಮೇಲೆ ಸೆ.26 ರಂದು ಮಂಗಳವಾರ ರಾತ್ರಿ ಸ್ಥಳೀಯ ತೃಣಮೂಲ ನಾಯಕರು ತಾವೆ ಸ್ಥಳೀಯ ನ್ಯಾಯಲಯ ಸ್ಥಾಪಿಸಿಕೊಂಡು ಬಾಲಕ ಸುಭಾ ನಾಯಕ್‌ನನ್ನು ಕಳ್ಳತನದ ಅಪರಾಧಿ ಎಂದು ಘೋಷಿಸಿ ಆತನ ಮೇಲೆ ಥಳಿಸಬೇಕೆಂದು ಆದೇಶ ನೀಡಿದರು.
ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಸುಭಾ ನಾಯಕ್ ಮೃತಪಟ್ಟಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿ ತೃಣಮೂಲ ಕಾಂಗ್ರೆಸ್‌ನ ಪಂಚಾಯತ್ ಸದಸ್ಯ ಮೊನೊರಂಜನ್ ಮಾಲ್ ಸೇರಿದಂತೆ ಏಳು ಜನರನ್ನು ಬಂಧಿಸಲಾಗಿದೆ.
ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಆದರೆ ಪ್ರಾಥಮಿಕ ತನಿಖೆಯ ಪ್ರಕಾರ ನಾವು ಕೊಲೆ ಪ್ರಕರಣವನ್ನು ದಾಖಲಿಸಿದ್ದೇವೆ ಎಂದು ಪಶ್ಚಿಮ ಬಂಗಾಳ ಮೇದಿನಿಪುರ ವಿಭಾಗದ ಎಸ್ಪಿ ಧೃತಿಮಾನ್ ಸರ್ಕಾರ್ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು, ಭಾರೀ ಪೊಲೀಸ್ ಭದ್ರತೆಯಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಗುಜರಾತ್: ಕಳ್ಳತನದ ಶಂಕೆಯಲ್ಲಿ ದಲಿತ ಎಂಜಿನಿಯರ್‌ಗೆ ಸಹೋದ್ಯೋಗಿಗಳಿಂದ ಥಳಿತ
ಕೇಂದ್ರ ಸರ್ಕಾರದಿಂದ ಗುರುತಿಸಲ್ಪಟ್ಟ 75 ದುರ್ಬಲ ಸಮುದಾಯಗಳಲ್ಲಿ ಪಟ್ಟಿ ಮಾಡಲಾದ ಲೋಧಾ ಶಬರ್ ಸಮುದಾಯಕ್ಕೆ ಸೇರಿದ ವಲಸೆ ಕಾರ್ಮಿಕರ ಮಗ, ಸುಭಾ ನಾಯಕ್ ಈಗಾಗಲೇ ತಂದೆತಾಯಿಯನ್ನು ಕಳೆದುಕೊಂಡು ಬೊರೊಚಹರಾ ಗ್ರಾಮದಲ್ಲಿ ಸಂಬಂಧಿಕರ ನೆರವಿನಿಂದ ಒಂಟಿಯಾಗಿ ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
“ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕ ಮನೋರಂಜನ್ ಮಾಲ್ ಬಾಲಕನನ್ನು ಫುಟ್ಬಾಲ್‌ನಂತೆ ಒದೆಯುತ್ತಿದ್ದರು. ಆತ ಹಸಿವಿನಿಂದ ಬಳಲುತ್ತಿದ್ದ. ಪದೇ ಪದೇ ನೀರಿಗಾಗಿ ಬೇಡುತ್ತಿದ್ದ. ಆದರೆ, ಅವರು ಮಾತ್ರ ‘ನೀವು ಕಳ್ಳರು, ನಿಮಗೆ ತಕ್ಕ ಪಾಠ ಕಲಿಸಬೇಕು’ ಎಂದು ಹೇಳುತ್ತಾ ಆತನನ್ನು ಹೊಡೆಯುತ್ತಲೇ ಇದ್ದರು” ಎಂದು ಹೆಸರೇಳಲು ಬಯಸದ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಈ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿರುವ ಸ್ಥಳೀಯ ರಾಜಕೀಯ ನಾಯಕರು, ಸುಭಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬಿಂಬಿಸಲು ಯತ್ನಿಸಿದ್ದರು ಎಂದು ಕೂಡಾ ವರದಿಯಾಗಿದೆ.