ಸುರಂಗಗಳು, ಸೇತುವೆಗಳು, ಫ್ಲೈ-ಓವರ್‌ಗಳ ಹಾಗೂ ಎತ್ತರಿಸಿದ ಕಾರಿಡಾರ್‌ಗಳನ್ನು ಹೊಂದಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ದರವನ್ನು ಕಡಿಮೆ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಹೆದ್ದಾರಿಗಳ ಯಾವ ವಿಭಾಗದಲ್ಲಿ ಸುರಂಗ, ಸೇತುವೆಗಳಂತ ನಿರ್ಮಾಣಗಳು ಇರುತ್ತವೆಯೋ, ಆ ವಿಭಾಗದ ರಸ್ತೆಯಲ್ಲಿ ಟೋಲ್ ದರವು 50%ವರೆಗೆ ಕಡಿಮೆಯಾಗಲಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶುಲ್ಕ ನಿಯಮಗಳು-2008ಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ತಿದ್ದುಪಡಿ ತಂದಿದೆ. ತಿದ್ದುಪಡಿಯಲ್ಲಿ ಹೊಸ ನಿಯಮಗಳನ್ನು ಅಳವಡಿಸಲಾಗಿದೆ. ಮುಖ್ಯವಾಗಿ, ಹೆದ್ದಾರಿ ನಿರ್ದಿಷ್ಟ ವಿಭಾಗದಲ್ಲಿ ಎಷ್ಟು ಉದ್ದದ ಸೇತುವೆ, ಸುರಂಗಗಳು ಇರುತ್ತವೆಯೋ ಆ ಉದ್ದಕ್ಕೆ ಅನುಗುಣವಾಗಿ 10 ಪಟ್ಟು ಶುಲ್ಕ, ಉಳಿದ ಸಾಮಾನ್ಯ ಹೆದ್ದಾರಿಗೆ ಸಾಮಾನ್ಯ ಶುಲ್ಕ ವಿಧಿಸಲಾಗುತ್ತದೆ. ಅಥವಾ, ಸೇತುವೆ, ಸುರಂಗ ನಿರ್ಮಾಣ ಸೇರಿದಂತೆ ಹೆದ್ದಾರಿಯ ನಿರ್ದಿಷ್ಟ ವಿಭಾಗದ ಒಟ್ಟು ಉದ್ದಕ್ಕೆ ಅನುಗುಣವಾಗಿ ಐದು ಪಟ್ಟು ಶುಲ್ಕ ವಿಧಿಸಲಾಗುತ್ತದೆ. ಈ ಎರಡೂ ಆಯ್ಕೆಗಳಲ್ಲಿ ಯಾವುದು ಕಡಿಮೆ ಶುಲ್ಕವಾಗುತ್ತದೆಯೋ ಅದನ್ನು ಜಾರಿಗೆ ತರಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಪ್ರಸ್ತುತ, ಹಳೆಯ ವ್ಯವಸ್ಥೆಯಡಿ ಸುರಂಗಗಳು, ಸೇತುವೆಗಳು, ಫ್ಲೈಓವರ್‌ಗಳು ಹಾಗೂ ಎತ್ತರಿಸಿದ ಕಾರಿಡರ್‌ಗಳಂತಹ ರಚನೆಗಳನ್ನು ಒಳಗೊಂಡಿರುವ 40 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ವಿಭಾಗಕ್ಕೆ 400 ಕಿ.ಮೀ.(10 x40)ಗಳಿಗೆ (ಹತ್ತು ಪಟ್ಟು) ಶುಲ್ಕವನ್ನು ವಿಧಿಸಲಾಗುತ್ತಿದೆ. ಇದೀಗ, ನೂತನ ಸೂತ್ರದಡಿ ಶುಲ್ಕವನ್ನು 200 ಕಿ.ಮೀ.(5 x40 ಕಿ.ಮೀ.) ಗಳಿಗೆ (ಐದು ಪಟ್ಟು) ಲೆಕ್ಕ ಹಾಕಲಾಗುತ್ತದೆ. ಈ ಮೂಲಕ ವಾಹನಗಳು ಪಾವತಿಸುವ ಟೋಲ್ ಶುಲ್ಕವು ಸುಮಾರು 50%ವರೆಗೆ ಕಡಿಮೆಯಾಗಲಿದೆ.
ಈ ಲೇಖನ ಓದಿದ್ದೀರಾ?: ವಿಶ್ಲೇಷಣೆ | ಸಹಕಾರ ಕ್ಷೇತ್ರವನ್ನು ಕಬ್ಜಾ ಮಾಡಲು ಹೊರಟಿದ್ದಾರೆಯೇ ಅಮಿತ್ ಶಾ?
“ಮೂಲಸೌಕರ್ಯ ನಿರ್ಮಾಣ ವೆಚ್ಚ ವಸೂಲಿ ಮತ್ತು ಕೈಗೆಟಕುವ ದರಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಲು ತಿದ್ದುಪಡಿ ತರಲಾಗಿದೆ. ಇದರಿಂದ, ರಸ್ತೆ ಬಳಕೆದಾರರಿಗೆ ಹೊರೆ ಕಡಿಮೆಯಾಗಲಿದೆ” ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.