ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಸಲ್ಲಿಸಿದ್ದ ಅರ್ಜಿ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಬುಧವಾರ ಹಿಂದೆ ಸರಿದಿದ್ದಾರೆ.
ತಮ್ಮ ಅಧಿಕೃತ ನಿವಾಸದಲ್ಲಿ ಲೆಕ್ಕಕ್ಕೆ ಸಿಗದಷ್ಟು ನಗದು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದ ಆಂತರಿಕ ಸಮಿತಿ ವರದಿಯನ್ನು ಪ್ರಶ್ನಿಸಿ ನ್ಯಾಯಮೂರ್ತಿ ವರ್ಮಾ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಸಂಬಂಧ, ಹಿರಿಯ ವಕೀಲ ಕಪಿಲ್ ಸಿಬಲ್ ಅವರು ನ್ಯಾಯಮೂರ್ತಿ ವರ್ಮಾ ಪರವಾಗಿ ತುರ್ತು ವಿಚಾರಣೆಗೆ ಮನವಿ ಸಲ್ಲಿಸಿದಾಗ, “ನಾನು ಆ ಸಮಿತಿಯ ಭಾಗವಾಗಿದ್ದೆ. ಈ ಕಾರಣದಿಂದಾಗಿ ಈ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ನನಗೆ ಸಾಧ್ಯವಿಲ್ಲ,” ಎಂದು ಸಿಜೆಐ ಗವಾಯಿ ಸ್ಪಷ್ಟಪಡಿಸಿದರು.
ನ್ಯಾಯಮೂರ್ತಿ ವರ್ಮಾ ಅವರು ತಮ್ಮ ವಿರುದ್ಧದ ಆಂತರಿಕ ತನಿಖೆಯ ಶಿಫಾರಸುಗಳನ್ನು ಅಸಂವಿಧಾನಿಕವೆಂದು ಉಲ್ಲೇಖಿಸಿ, ಈ ಕಾರ್ಯವಿಧಾನವು ಸಂವಿಧಾನಬದ್ಧವಾಗಿ ನ್ಯಾಯಾಧೀಶರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಕ್ರಿಯೆಗೆ ವಿರುದ್ಧವಿದೆ ಎಂದು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಂವಿಧಾನಿಕ ಪೀಠ ರಚಿಸುವುದಾಗಿ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ನ್ಯಾ. ಯಶವಂತ್ ವರ್ಮಾ | ಪದಚ್ಯುತಿ ಪ್ರಕ್ರಿಯೆ ಎದುರಿಸುವರೇ ಅಥವಾ ರಾಜೀನಾಮೆ ನೀಡುವರೇ?
1968ರ ನ್ಯಾಯಾಧೀಶರ (ವಿಚಾರಣೆ) ಕಾಯ್ದೆಯನ್ನು ಉಲ್ಲೇಖಿಸಿ, ಯಾವುದೇ ಔಪಚಾರಿಕ ದೂರು ಇಲ್ಲದಿರುವಾಗ ಆಂತರಿಕ ತನಿಖೆಯ ಮೂಲಕ ತಮ್ಮ ವಿರುದ್ಧ ಕ್ರಮ ಕೈಗೊಂಡಿರುವುದು ಸರಿಯಲ್ಲ ಎಂದು ಅರ್ಜಿಯಲ್ಲಿ ವಾದಿಸಿದ್ದಾರೆ.
2024ರ ಮಾರ್ಚ್ 14ರಂದು ದೆಹಲಿಯಲ್ಲಿರುವ ನ್ಯಾಯಮೂರ್ತಿ ವರ್ಮಾ ಅವರ ನಿವಾಸದಲ್ಲಿ ಬೆಂಕಿ ಬಿದ್ದಾಗ, ಲಕ್ಷಾಂತರ ರೂಪಾಯಿ ನಗದು ಪತ್ತೆಯಾಗಿತ್ತು. ಈ ಸಮಯದಲ್ಲಿ ಅವರು ಹಾಗೂ ಅವರ ಪತ್ನಿ ದೆಹಲಿಯಲ್ಲಿ ಇರಲಿಲ್ಲ, ಮಧ್ಯಪ್ರದೇಶದಲ್ಲಿ ಇದ್ದರು. ಅವರ ಮಗಳು ಮತ್ತು ವಯಸ್ಸಾದ ತಾಯಿ ಮನೆಯಲ್ಲಿಯೇ ಇದ್ದರು ಎನ್ನಲಾಗಿದೆ.
ಈ ಬಳಿಕ, ಆಗಿನ ಸಿಜೆಐ ಸಂಜೀವ್ ಖನ್ನಾ ಅವರು ಪಂಜಾಬ್ ಮತ್ತು ಹರಿಯಾಣ ಸಿಜೆಐ ಶೀಲ್ ನಾಗು, ಹಿಮಾಚಲ ಸಿಜೆಐ ಜಿ ಎಸ್ ಸಂಧ್ ವಾಲಿಯಾ ಮತ್ತು ಕರ್ನಾಟಕ ಹೈಕೋರ್ಟ್ ಹಿರಿಯ ನ್ಯಾಯಾಧೀಶ ಅನು ಶಿವರಾಮನ್ ಅವರನ್ನೊಳಗೊಂಡ ಮೂವರು ಸದಸ್ಯರ ಸಮಿತಿಯನ್ನು ರಚಿಸಿ ತನಿಖೆ ನಡೆಸಿದರು. ಈ ಸಮಿತಿ ಮೇ 3ರಂದು ತನ್ನ ಅಂತಿಮ ವರದಿಯನ್ನು ನೀಡಿದ್ದು, ಮೇ 4ರಂದು ರಾಷ್ಟ್ರಪತಿಗೆ ದೋಷಾರೋಪಣೆ ಗೆ ಶಿಫಾರಸು ಸಲ್ಲಿಸಲಾಗಿತ್ತು. ವಾಗ್ದಂಡನೆ ವಿಧಿಸುವಂತೆ ಶಿಫಾರಸು ಮಾಡಲಾಗಿತ್ತು.
ಯಶವಂತ್ ವರ್ಮಾ ಪರವಾಗಿ ಕಪಿಲ್ ಸಿಬಲ್ ಅವರೊಂದಿಗೆ ಹಿರಿಯ ನ್ಯಾಯವಾದಿಗಳಾದ ಮುಕುಲ್ ರೋಹಟಗಿ, ರಾಕೇಶ್ ದ್ವಿವೇದಿ, ಸಿದ್ಧಾರ್ಥ್ ಲೂತ್ರಾ, ಸಿದ್ಧಾರ್ಥ್ ಅಗರ್‌ವಾಲ್, ಜಾರ್ಜ್ ಪೋತನ್ ಪೋತಿಕೋಟೆ ಹಾಗೂ ಮನೀಶಾ ಸಿಂಗ್ ವಾದಿಸಿದರು.