ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ, ಬೈಕ್‌ಗೆ ಕಟ್ಟಿಕೊಂಡು ಗ್ರಾಮದಲ್ಲಿ ಮೆರವಣಿಗೆ ಮಾಡಿ ವಿಕೃತಿ ಮೆರೆದಿರುವ ಅಮಾನವೀಯ ಘಟನೆ ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿ ನಡೆದಿದೆ. ವಿಕೃತಿ ಮೆರೆದಿದ್ದ 12 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಗುಜರಾತ್‌ನ ದಾಹೋದ್ ಜಿಲ್ಲೆಯ ಧಲ್ಸಿಮಲ್ ಗ್ರಾಮದಲ್ಲಿ ಮಂಗಳವಾರ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸುಮಾರು 20 ಮಂದಿ ದುರುಳರು ಮಹಿಳೆಯನ್ನು ಅಪಹರಿಸಿ, ಕೃತ್ಯ ಎಸಗಿದ್ದಾರೆ. ಆರೋಪಿಗಳಲ್ಲಿ 12 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳಲ್ಲಿ ನಾಲ್ವರು ಮಹಿಳೆಯರು ಮತ್ತು ನಾಲ್ವರು ಅಪ್ರಾಪ್ತರೂ ಇದ್ದಾರೆ ಎಂದು ವರದಿಯಾಗಿದೆ.
ಮಹಿಳೆಯನ್ನು ಬೆತ್ತಲೆಗೊಳಿಸಿ, ಬೈಕ್‌ಗೆ ಕಟ್ಟಿಕೊಂಡು ಗ್ರಾಮದಲ್ಲಿ ಮೆರವಣಿಗೆ ಮಾಡಿರುವ ವಿಕೃತ ಮನಸ್ಸಿನ ದುಷ್ಕರ್ಮಿಗಳು, ಘಟನೆಯನ್ನು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ವೈರಲ್ ಆಗಿರುವುದನ್ನು ಗಮನಿಸಿದ ಪೊಲೀಸರು, ಮಹಿಳೆಯನ್ನು ರಕ್ಷಿಸಿದ್ದಾರೆ ಎಂದು ದಾಹೋದ್ ಎಸ್‌ಪಿ ರಾಜ್‌ದೀಪ್ ಸಿನ್ಹಾ ಝಾಲಾ ತಿಳಿಸಿದ್ದಾರೆ.