ದೀಪಾವಳಿ ಆಚರಣೆಯ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು, ಓರ್ವ ವ್ಯಕ್ತಿ, ಆತನ ಮಗ ಮತ್ತು ಮೊಮ್ಮಗ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕಾಜುಲೂರು ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಕೈಯಲ್ಲಿ ಕುಡುಗೋಲು ಹಿಡಿದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹಗಳು ಪತ್ತೆಯಾಗಿವೆ. ಅವರ ತಲೆಗಳು ಒಡೆದಿದ್ದು, ತೀವ್ರ ರಕ್ತಸ್ರಾವವಾಗಿ ಅವರು ಸಾವನ್ನಪ್ಪಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಹಳೆಯ ವೈಷಮ್ಯದಿಂದ ಮೃತದ ಕುಟುಂಬವು ಆರೋಪಿ ಕುಟುಂಬಗಳ ಬಗ್ಗೆ ಅವಹೇಳನಕಾರಿಯಾಗಿ ನಿಂದಿಸಿದೆ. ಇದರಿಂದ ಘರ್ಷಣೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘರ್ಷಣೆಯಲ್ಲಿ ಹತರಾದವರನ್ನು ಬತ್ತುಲ ರಮೇಶ್, ಅವರ ಮಗ ಬತ್ತುಲ ಚಿನ್ನಿ ಮತ್ತು ಮೊಮ್ಮಗ ಬತ್ತುಲ ರಾಜು ಎಂದು ಗುರುತಿಸಲಾಗಿದೆ.
“ನಾವು ಘಟನೆಯನ್ನು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದೇವೆ. ಪ್ರಾಥಮಿಕ ಸಾಕ್ಷ್ಯಗಳು ಕುಟುಂಬಗಳ ನಡುವೆ ದೀರ್ಘಕಾಲದಿಂದ ದ್ವೇಷವಿತ್ತು ಎಂಬುದನ್ನು ಸೂಚಿಸಿವೆ. ನಾವು ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುತ್ತೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ರಾಮಕೃಷ್ಣ ರಾವ್ ಹೇಳಿದ್ದಾರೆ.