ತ್ರಿಪುರಾದ ಧಲೈ ಜಿಲ್ಲೆಯಲ್ಲಿ ಬುಡಕಟ್ಟು ಯುವಕನೊಬ್ಬನನ್ನು ದುಷ್ಕರ್ಮಿಗಳು ಹತ್ಯೆಗೈದ ಬಳಿಕ ಗುಂಪು ಹಿಂಸಾಚಾರ ನಡೆದಿದ್ದು, ಜಿಲ್ಲೆಯಾಧ್ಯಂತ ಇಂಟರ್‌ನೆಟ್‌ಅನ್ನು ಸ್ಥಗಿತಗೊಳಿಸಲಾಗಿದೆ. ದೊಡ್ಡ ಸಭೆಗಳನ್ನು ನಡೆಸದಂತೆ ನಿರ್ಬಂಧ ಹೇರಲಾಗಿದೆ. ಹಿಂಸಾಚಾರ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಧಲೈ ಜಿಲ್ಲೆಯ ಬುಡಕಟ್ಟು ಪ್ರಾಬಲ್ಯದ ಗಂಡಾ ಟ್ವಿಸಾ ಪ್ರದೇಶದಲ್ಲಿ ನಿಷೇಧಾಜ್ಞೆ ಹೇರಲಾಗಿದ್ದು, ಭದ್ರತಾ ಪಡೆಗಳ ಬೃಹತ್ ತುಕಡಿಯನ್ನು ನಿಯೋಜಿಸಲಾಗಿದೆ. ಅದಾಗ್ಯೂ, ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿದೆ.
ಜುಲೈ 7ರಂದು ಮತ್ತೊಂದು ಸಮುದಾಯದ ಜನರ ಗುಂಪು ಪರಮೇಶ್ವರ್ ರಿಯಾಂಗ್ (20) ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ಗಂಭೀರ ಗಾಯಗೊಂಡಿದ್ದ ಯುವಕ ಶುಕ್ರವಾರ ಸಾವನ್ನಪ್ಪಿದ್ದಾರೆ. ಆತನ ಸಾವಿನ ಬಳಿಕ, ಶುಕ್ರವಾರ ರಾತ್ರಿ ಹಿಂಸಾಚಾರ ಭುಗಿಲೆದ್ದು, ಮನೆಗಳು ಮತ್ತು ಅಂಗಡಿಗಳಿಗೆ ಬೆಂಕಿ ಹಚ್ಚಿ, ಸುಟ್ಟು ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಂಸಾಚಾರ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಶಾಂತಿ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ತ್ರಿಪುರಾ ಸರ್ಕಾರದ ಮೂಲಗಳು ತಿಳಿಸಿವೆ.