ಅಮೆರಿಕದಿಂದ ತಾನು ಆಮದು ಮಾಡಿಕೊಳ್ಳುವ ಸರಕುಗಳ ಮೇಲಿನ ಎಲ್ಲ ಸುಂಕಗಳನ್ನು ತೆಗೆದುಹಾಕಲು ಭಾರತ ಮುಂದೆ ಬಂದಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾರಿದ್ದಾರೆ.
ಭಾರತ ಒಪ್ಪಂದವೊಂದನ್ನು ನಮ್ಮ ಮುಂದಿಟ್ಟಿದೆ. ನಮ್ಮ ಮೇಲಿನ ಎಲ್ಲಾ ಸುಂಕಗಳನ್ನು ತೆಗೆದುಹಾಕಲು ಸಿದ್ಧವಿದೆ ಎಂದು ಅವರು ಗುರುವಾರ ಕತಾರ್ ನ ರಾಜಧಾನಿ ದೋಹಾದಲ್ಲಿ ಹೇಳಿದ್ದಾರೆ. ಟ್ರಂಪ್ ನೇತೃತ್ವದ ಅಮೆರಿಕದ ಮುಂದೆ ಮತ್ತೊಮ್ಮೆ ಸಂಪೂರ್ಣ ಶರಣಾದರೇ ಮೋದಿ ಎಂಬ ಪ್ರಶ್ನೆ ಈ ಮೂಲಕ ಮತ್ತೊಮ್ಮೆ ಮೇಲೆದ್ದಿದೆ.
ಕತಾರ್‌ನ ರಾಜಧಾನಿ ದೋಹಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಟ್ರಂಪ್ ಈ ಸಂಗತಿಯನ್ನು ಪ್ರಕಟಿಸಿದ್ದಾರೆ. ಆದರೆ ಈ ಕುರಿತು ಇದುವರೆಗೆ ಭಾರತದಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ವ್ಯಾಪಾರ ಕುರಿತು ಭಾರತ ಮತ್ತು ಅಮೆರಿಕದ ನಡುವೆ ಮಾತುಕತೆ ಇನ್ನೂ ನಡೆಯುತ್ತಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ತಿಳಿಸಿದ್ದಾರೆ.
ದೋಹಾದಲ್ಲಿ ಟ್ರಂಪ್ ಅವರು ಭಾರತದಲ್ಲಿ ಆಪಲ್ ಐಫೋನ್ ತಯಾರಿಕೆ ಕುರಿತು ಕಠಿಣ ಟಿಪ್ಪಣಿಯನ್ನೂ ಮಾಡಿದ್ದಾರೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸುಂಕ ವಿಧಿಸುವ ದೇಶಗಳಲ್ಲಿ ಒಂದಾಗಿದೆ. ಹೀಗಾಗಿ ಭಾರತದಲ್ಲಿ ಐಫೋನ್ ತಯಾರಿಸಬೇಡಿ ಎಂದು ಆಪಲ್ ಸಿಇಒ ಟಿಮ್ ಕುಕ್ ಗೆ ತಿಳಿಸಿರುವುದಾಗಿ ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ ಆಪಲ್, ತನ್ನ ಐಫೋನ್ ಉತ್ಪಾದನೆಯ ಬಹುಪಾಲನ್ನು ಚೀನಾದಿಂದ ಭಾರತಕ್ಕೆ ಸ್ಥಳಾಂತರಿಸುತ್ತಿರುವುದಾಗಿ ತಿಳಿಸಿತ್ತು. ಇದರ ಜೊತೆಗೆ, ವಿಯೆಟ್ನಾಂ ಕೂಡ ಐಪ್ಯಾಡ್ ಮತ್ತು ಆಪಲ್ ವಾಚ್‌ನಂತಹ ಉತ್ಪನ್ನಗಳಿಗೆ ಪ್ರಮುಖ ಉತ್ಪಾದನಾ ಕೇಂದ್ರವಾಗಲಿದೆ.
ಭಾರತದ ಮೇಲೆ ಟ್ರಂಪ್ ಸುಂಕ
ಭಾರತದ ಮೇಲೆ 27% ವರೆಗಿನ ಸುಂಕ ವಿಧಿಸುವುದಾಗಿ ಡೊನಾಲ್ಡ್ ಟ್ರಂಪ್ ಕಳೆದ ಏಪ್ರಿಲ್ ತಿಂಗಳಲ್ಲಿ ಘೋಷಿಸಿದ್ದರು. 90 ದಿನಗಳ ಗಡುವನ್ನು ವಿಧಿಸಿದ್ದರು. ಈ ಅವಧಿ ಜುಲೈ 9 ರಂದು ಕೊನೆಗೊಳ್ಳಲಿದೆ.
ಇತ್ತೀಚಿಗಿನವರೆಗೆ ಅಮೆರಿಕವು ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರರಲ್ಲಿ ಒಂದಾಗಿತ್ತು. ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವು 190 ಶತಕೋಟಿ ಡಾಲರ್‌ಗೆ ತಲುಪಿದೆ.
ಟ್ರಂಪ್ ಮತ್ತು ಮೋದಿ ಎರಡೂ ದೇಶಗಳ ನಡುವಿನ ವ್ಯಾಪಾರವನ್ನು ದ್ವಿಗುಣಗೊಳಿಸಿ 500 ಶತಕೋಟಿ ಡಾಲರ್‌ಗೆ ಏರಿಸುವ ಗುರಿಯನ್ನು ಇಟ್ಟುಕೊಂಡಿದ್ದಾರೆ. ಆದರೆ, ಕೃಷಿಯಂತಹ ಕ್ಷೇತ್ರಗಳಲ್ಲಿ ಭಾರತ ರಿಯಾಯಿತಿಗಳನ್ನು ನೀಡುವ ಸಾಧ್ಯತೆ ವಿರಳ.