ಆರ್ಕೆಸ್ಟ್ರಾ ಪಾರ್ಟಿಯಲ್ಲಿ ಇಬ್ಬರು ಡ್ಯಾನ್ಸರ್‌ಗಳನ್ನು ಅಪಹರಿಸಿ, ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ದುರ್ಘಟನೆ ಅತ್ಯಾಚಾರದ ರಾಜಧಾನಿ ಎಂದೇ ಕುಖ್ಯಾತಿ ಗಳಿಸಿರುವ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಕುಶಿನಗರದಲ್ಲಿ ಘಟನೆ ನಡೆಸಿದ್ದು, ಪ್ರಕರಣದಲ್ಲಿ 8 ಮಂದಿ ಕಾಮುಕ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರ್ಕೆಸ್ಟ್ರಾ ನಡೆಯುತ್ತಿದ್ದ ಸಮಯದಲ್ಲಿ 20 ವರ್ಷ ಆಸುಪಾಸಿನ ಇಬ್ಬರು ಯುವತಿಯನ್ನು ಬಂದೂಕು ತೋರಿಸಿ ಆರೋಪಿಗಳು ಅಪಹರಿಸಿದ್ದಾರೆ. 10 ಕಿ.ಮೀ ದೂರದಲ್ಲಿದ್ದ ಓರ್ವ ಆರೋಪಿಯ ಮನೆಗೆ ಅವರನ್ನು ಕರೆದೊಯ್ದು, ಡಾನ್ಸ್ ಮಾಡುವಂತೆ ಒತ್ತಾಯಿಸಿದ್ದಾರೆ. ಡಾನ್ಸ್ ಮಾಡಲು ಯುವತಿಯರು ನಿರಾಕರಿಸಿದ್ದು, ಕುಪಿತಗೊಂಡ ಕಾಮುಕರ ಗುಂಪು ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದೆ ಎಂದು ವರದಿಯಾಗಿದೆ.
“ಎಲ್ಲ ಎಂಟು ಆರೋಪಿಗಳು 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಅವರನ್ನು ಕುಶಿನಗರದ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಂತ್ರಸ್ತ ಯುವತಿಯರ ಹೇಳಿಕೆಗಳನ್ನು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾಗುತ್ತಿದೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿಗಾಗಿ ಕಾಯಲಾಗುತ್ತಿದೆ”ಎಂದು ಕುಶಿನಗರ ಎಸ್‌ಪಿ ಸಂತೋಷ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.
“ಕಾಮುಕರ ಇಬ್ಬರು ಮಹಿಳೆಯರನ್ನು ಬಂದೂಕು ತೋರಿಸಿ ಅಪಹರಿಸಿದೆ. ಸ್ಥಳೀಯರು ತಕ್ಷಣವೇ ನಮಗೆ ಮಾಹಿತಿ ನೀಡಿದರು. ಅಪಹರಣಕ್ಕೆ ಬಳಸಿದ ವಾಹನದ ಸಂಖ್ಯೆಯನ್ನು ಸಹ ತಿಳಿಸಿದರು. ಕಣ್ಗಾವಲಿನ ಸಹಾಯದಿಂದ ಯುವತಿಯನ್ನು ಶೀಘ್ರವಾಗಿ ಪತ್ತೆ ಮಾಡಲಾಗಿದ್ದು, ಅಪಹರಿಸಿದ ಎರಡು ಗಂಟೆಗಳ ಒಳಗೆ ಸಂತ್ರಸ್ತೆಯರನ್ನು ರಕ್ಷಿಸಿದ್ದೇವೆ. ಆರೋಪಿಗಳನ್ನು ಬಂಧಿಸಿದ್ದೇವೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಗಳಲ್ಲಿ ನಾಗೇಂದ್ರ ಯಾದವ್, ಅಸನ್ ಸಿಂಗ್, ಕ್ರಿಶ್ ತಿವಾರಿ, ಅರ್ಥಕ್ ಸಿಂಗ್, ಅಜೀತ್ ಸಿಂಗ್ ಮತ್ತು ವಿವೇಕ್ ಸೇಠ್ ಎಂಬವರನ್ನು ಅಜೀತ್ ಸಿಂಗ್ ಎಂಬಾತನ ಮನೆಯಲ್ಲಿ ಬಂಧಿಸಲಾಗಿದೆ. ಇನ್ನಿಬ್ಬರು ಆರೋಪಿಗಳಾದ ನಿಸಾರ್ ಅನ್ಸಾರಿ ಮತ್ತು ಆದಿತ್ಯ ಸಹಾನಿ ಅವರನ್ನು ಗ್ರಾಮವೊಂದರಲ್ಲಿ ಬಂಧಿಸಲಾಗಿದೆ. ತಪ್ಪಿಸಿಕೊಳ್ಳಲು ಯತ್ನಿಸಿದ ಈ ಇಬ್ಬರೂ ಆರೋಪಿಗಳ ಕಾಲಿಗೆ ಗುಂಡೇಟು ತಗುಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
“ಆರೋಪಿ ಅಜೀತ್ ಎಂಬಾತನ ಹುಟ್ಟುಹಬ್ಬವನ್ನು ಆಚರಿಸಲು ಆರೋಪಿಗಳು ಒಂದೆಡೆ ಸೇರಿದಿದ್ದರು. ಮದ್ಯ ಸೇವಿಸಿದ ಬಳಿಕ ನೃತ್ಯ ಪ್ರದರ್ಶನಕ್ಕಾಗಿ ಆರ್ಕೆಸ್ಟ್ರಾ ಪಾರ್ಟಿ ನಡೆಸಲು ನಿರ್ಧಿಸಿದರು. ತಡವಾಗಿದ್ದ ಕಾರಣ ಯುವತಿಯರು ಪಾರ್ಟಿಗೆ ಬಂದು, ಪ್ರದರ್ಶನ ನೀಡಲು ನಿರಾಕರಿಸಿದ್ದರು. ಅವರನ್ನು ಬಂದೂಕು ತೋರಿಸಿ, ಅಪಹರಿಸಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ” ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.