ಗ್ರಾಮಸ್ಥರೊಬ್ಬರ ಮನೆಯಿಂದ ಮೇಕೆಗಳನ್ನು ಕದ್ದಾಗ ಸಿಕ್ಕಿಬಿದ್ದ ಇಬ್ಬರು ಯುವಕರನ್ನು ಥಳಿಸಿ ಕೊಂದಿರುವ ಘಟನೆ ಜಾರ್ಖಂಡ್‌ನ ಜೋರ್ಸಾ ಗ್ರಾಮದಲ್ಲಿ ನಡೆದಿದೆ. ಶನಿವಾರ ಮುಂಜಾನೆ ಈ ಘಟನೆ ಜಮ್ಶೆದ್‌ಪುರದ ಚಾಕುಲಿಯಾ ಪೊಲೀಸ್ ಠಾಣೆಯಿಂದ ಸುಮಾರು 15 ಕಿ.ಮೀ ದೂರದಲ್ಲಿ ನಡೆದಿದೆ.
ಮೃತರಿಬ್ಬರಲ್ಲಿ ಒಬ್ಬರಾದ ಕುಶಾಕ್ ಬೆಹೆರಾ ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಬ್ಬರು ಭೋಲಾ ನಾಥ್ ಮಹ್ತೋ ಒಂದು ದಿನದ ನಂತರ ಮಹಾತ್ಮ ಗಾಂಧಿ ಮಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ದಲಿತ ಯುವಕನನ್ನು ಕೊಂದಿದ್ದ 17 ಮಂದಿಗೆ ಜೀವಾವಧಿ ಶಿಕ್ಷೆ
ಆರೋಪಿಗಳನ್ನು ಇಬ್ಬರನ್ನು ಚಕುಲಿಯಾದಲ್ಲಿನ ಜೀರಾಪಾರ ಗ್ರಾಮದ ನಿವಾಸಿಗಳು ಎಂದು ಹೇಳಲಾಗಿದೆ. ಶಂಕಿತ ಆರೋಪಿಗಳು ಮನೆಯಿಂದ ಮೇಕೆಗಳನ್ನು ಕದಿಯಲು ಪ್ರಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಇಬ್ಬರು ಕಳ್ಳತನ ಮಾಡುವಾಗ ಮೇಕೆಯ ಕುತ್ತಿಗೆಗೆ ಕಟ್ಟಿದ್ದ ಗಂಟೆ ಶಬ್ದಗೊಂಡು ಮನೆ ಮಾಲೀಕ ಹರ್‌ಗೋವಿಂದ್ ನಾಯಕ್ ಎಚ್ಚರಗೊಂಡರು. ನಾಯಕ್ ಹೊರಬಂದು ಪರಿಶೀಲಿಸಿದಾಗ ಇಬ್ಬರು ಯುವಕರು ಬೈಕ್‌ನಲ್ಲಿ ಮೂರು ಮೇಕೆಗಳನ್ನು ತೆಗೆದುಕೊಂಡು ಹೋಗುತ್ತಿರುವುದನ್ನು ನೋಡಿದರು ಎಂದು ವರದಿಯಾಗಿದೆ.
ಮನೆ ಮಾಲೀಕರು ಆರೋಪಿಗಳನ್ನು ಹಿಡಿದು, ಇತರ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದು, ತಕ್ಷಣ ಗ್ರಾಮಸ್ಥರು ಜಮಾಯಿಸಿ ಶಂಕಿತರನ್ನು ಸೆರೆಹಿಡಿದಿದ್ದರು. ಗ್ರಾಮಸ್ಥರು ಥಳಿಸಿದ್ದು ಕುಶಾಕ್ ಬೆಹೆರಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಜಾರ್ಖಂಡ್ | 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಕೊಲೆಗೆ ಯತ್ನಿಸಿದ ದುರುಳ
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹ್ತೋ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಮಹ್ತೋ ಸಾವನ್ನಪ್ಪಿದರು ಎಂದು ಎಸ್‌ಪಿ ರಿಷಭ್ ಗರ್ಗ್ ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಐವರನ್ನು ವಶಕ್ಕೆ ಪಡೆಯಲಾಗಿದ್ದು, ಇತರರನ್ನು ಗುರುತಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಲ್ಲಿಯವರೆಗೆ ಯಾವುದೇ ಲಿಖಿತ ದೂರು ಬಂದಿಲ್ಲ ಮತ್ತು ದೂರು ಬಂದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೂಡಾ ಎಸ್‌ಪಿ ಹೇಳಿದ್ದಾರೆ.
